ಗುರು ಗ್ರಾಮ: ICUನಲ್ಲಿದ್ದ ಗಗನಸಖಿ ಮೇಲೆ ಲೈಂಗಿಕ ದೌರ್ಜನ್ಯ ; ಆಸ್ಪತ್ರೆ ಸಿಬ್ಬಂದಿಯಿಂದಲೇ ಕೃತ್ಯ

ಗುರುಗ್ರಾಮ: ದೇಶಾದ್ಯಂತ ಲೈಂಗಿಕ ಕಿರುಕುಳ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಸರ್ಕಾರ ಎಷ್ಟೇ ಕಾನೂನು ಜಾರಿಗೆ ತಂದಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
ಕಾಮತೃಷೆಗೆ ಮಕ್ಕಳು, ಹಿರಿಯ ಮಹಿಳೆಯರು ಎನ್ನದೇ ಅಮಾನವೀಯವಾಗಿ ಅತ್ಯಾಚಾರ, ಸಾವಿನಂತಹ ಘಟನೆಗಳು ನಡೆಯುತ್ತಿವೆ. ಹರಿಯಾಣದಲ್ಲಿ ICU ವೆಂಟಿಲೇಟರ್‌ನಲ್ಲಿದ್ದ ಗಗನಸಖಿ ಮೇಲೆ ಆಸ್ಪತ್ರೆ ಸಿಬಂದಿಯೇ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಕೇಳಿಬಂದಿದೆ.
ಗಗನಸಖಿ ಮಹಿಳೆ ಐಸಿಯು ವೆಂಟಿಲೇಟರ್‌ನಲ್ಲಿದ್ದಾಗ ಸಿಬಂದಿ ಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಕಾಮುಕನ ಪತ್ತೆಗಾಗಿ ಆಸ್ಪತ್ರೆಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನ ಪೊಲೀಸರು ಪರಿಶೀಲಿಸುತ್ತಿದ್ದಾರೆ.
46 ವರ್ಷದ ಗಗನಸಖಿ ತಾನು ಉಳಿದುಕೊಂಡಿದ್ದ ಹೋಟೆಲ್‌ನ ಸ್ವಿಮ್ಮಿಂಗ್ ಪೂಲ್ ನಲ್ಲಿ ಈಜಾಡುವಾಗ ಅಸ್ಥಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಏಪ್ರಿಲ್ 5 ರಂದು ಆಕೆಯನ್ನು ಗುರುಗ್ರಾಮ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಭಾನುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ಏಪ್ರಿಲ್ 6 ರಂದು ವೆಂಟಿಲೇಟರ್‌ನಲ್ಲಿದ್ದಾಗ ಆಸ್ಪತ್ರೆಯ ಸಿಬಂದಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಿ ಪೊಲೀಸರಿಗೆ ಮಹಿಳೆ ದೂರು ನೀಡಿದ್ದಾರೆ.
ಡಿಸ್ಚಾರ್ಜ್ ಆದ ನಂತರ ನಡೆದ ಘಟನೆಗಳ ಬಗ್ಗೆ ತನ್ನ ಪತಿಗೆ ತಿಳಿಸಿದ್ದು, ನಂತರ ಪೊಲೀಸರನ್ನು ಸಂಪರ್ಕಿಸಿರುವುದಾಗಿ ಗಗನಸಖಿ ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮುಂದಿನ ತನಿಖೆ ಕೈಗೊಂಡಿದ್ದಾರೆ.