ಮಂಗಳೂರು :ಸರ್ಕಾರಿ ಸಾರಿಗೆ ಬಸ್ಸಿನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ; ಬಾಗಲಕೋಟೆ ಮೂಲದ ನಿರ್ವಾಹಕನ ಅಶ್ಲೀಲ ವರ್ತನೆ, ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು.

ಉಳ್ಳಾಲ: ಸರಕಾರಿ ನಗರ ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಬಸ್ ನಿರ್ವಾಹಕನ ವೀಡಿಯೋ ವೈರಲ್ ಆಗಿದ್ದು ಕೂಡಲೇ ಕಾರ್ಯ ಪೃವೃತ್ತರಾದ ಕೊಣಾಜೆ ಪೊಲೀಸರು ಆರೋಪಿಯನ್ನ ವಶಕ್ಕೆ ತೆಗೆದುಕೊಂಡಿದ್ದಾರೆ.
ಮಂಗಳೂರು-ಮುಡಿಪು ನಡುವೆ ಸಂಚರಿಸುವ ಸರಕಾರಿ ನಗರ ಸಾರಿಗೆ ಬಸ್ಸಿನ ನಿರ್ವಾಹಕ ಬಾಗಲಕೋಟೆ ಮೂಲದ ಪ್ರದೀಪ್ ಎಂಬಾತನನ್ನ ಕೊಣಾಜೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಸ್ಸಿನ ಸೀಟಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಯುವತಿಯೋರ್ವಳು ಗಾಢ ನಿದ್ದೆಗೆ ಜಾರಿದ್ದು ಈ ವೇಳೆ ಬಸ್ಸು ನಿರ್ವಾಹಕ ಪ್ರದೀಪ್ ಯುವತಿಯ ಎದೆಯ ಭಾಗವನ್ನ ಸವರಿ ಲೈಂಗಿಕ ಕಿರುಕುಳ ನೀಡುತ್ತಿರುವ ಕುಕೃತ್ಯವನ್ನ ಸಹ ಪ್ರಯಾಣಿಕರೋರ್ವರು ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
ಘಟನೆಯು ಕಂಕನಾಡಿ ನಗರ ಠಾಣಾ ವ್ಯಾಪ್ತಿಯ ಜಪ್ಪಿನ ಮುಗೇರು ಪ್ರದೇಶದಲ್ಲಿ ನಿನ್ನೆ ನಡೆದಿದೆಯೆಂದು ಹೇಳಲಾಗಿದೆ.ಸರಕಾರಿ ಬಸ್ಸು ನಿರ್ವಾಹಕನ ಅಶ್ಲೀಲ ವರ್ತನೆಯ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಕೊಣಾಜೆ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಕಂಕನಾಡಿ ನಗರ ಠಾಣಾ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆ ಇದೆ. ಚಲಿಸುವ ಬಸ್ಸಿನಲ್ಲೇ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಕಂಡಕ್ಟರ್ ವಿರುದ್ಧ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.