ಮಂಗಳೂರು:ದೆಹಲಿಯಿಂದ ಕೊರಿಯರ್ ನಲ್ಲಿ ಡ್ರಗ್ಸ್ ತರಿಸಿಕೊಂಡು ಮಂಗಳೂರಿನಲ್ಲಿ ಮಾರಾಟ ; ಸುಳ್ಯದ ವ್ಯಕ್ತಿ ಸಿಸಿಬಿ ಪೊಲೀಸರ ಬಲೆಗೆ.

ಮಂಗಳೂರು : ನಿಷೇದಿತ ಮಾದಕ ವಸ್ತುವಾದ ಎಂಡಿಎಂಎ ಅನ್ನು ಕೊರಿಯರ್ ಮೂಲಕ ದೆಹಲಿಯಿಂದ ತರಿಸಿಕೊಂಡು ಮಂಗಳೂರು ನಗರದ ಲಾಲ್ ಬಾಗ್ ಪರಿಸರದಲ್ಲಿ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿ 11 ಗ್ರಾಂ ಎಂಡಿಎಂಎ ಡ್ರಗ್ಸ್ ಸಹಿತ ಆರೋಪಿಯನ್ನು ವಶಪಡಿಸಿದ್ದಾರೆ.
ದೆಹಲಿಯಿಂದ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಅನ್ನು ಕೊರಿಯರ್ ಮೂಲಕ ತರಿಸಿಕೊಂಡು ಮಂಗಳೂರು ನಗರದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯೊಂದಿಗೆ ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಮಣಿಕ್ಕರ- ಆಲಂತಡ್ಕ ನಿವಾಸಿ ಮೊಹಮ್ಮದ್ ಅಶ್ರಪ್ ಅಲಂತಡ್ಕ(50) ಬಂಧಿತ ಆರೋಪಿ.
ಆರೋಪಿ ವಶಕ್ಕೆ ಪಡೆದು ಆತನ ವಶದಿಂದ ರೂ. 1 ಲಕ್ಷ ಮೌಲ್ಯದ 11 ಗ್ರಾಂ ನಿಷೇಧಿತ ಮಾದಕ ವಸ್ತು ಎಂಡಿಎಂಎ, ಮೊಬೈಲ್ ಫೋನ್-1, ಹೊಂಡಾ ಆಕ್ಟಿವಾ ಸ್ಕೂಟರ್ ಸಹಿತ ಒಟ್ಟು ರೂ. 1,60,000/- ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಲಾಗಿದೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಆರೋಪಿಯು ದೆಹಲಿಯಿಂದ ತನ್ನ ಸ್ನೇಹಿತನ ಮೂಲಕ ಎಂಡಿಎಂಎ ಡ್ರಗ್ಸ್ ಖರೀದಿಸಿ ಅದನ್ನು ತನ್ನ ಊರಾದ ಸುಳ್ಯದ ವಿಳಾಸಕ್ಕೆ ಕೊರಿಯರ್ ಮೂಲಕ ತರಿಸಿಕೊಂಡು ಮಂಗಳೂರಿಗೆ ತನ್ನ ದ್ವಿಚಕ್ರ ವಾಹನದಲ್ಲಿ ಬಂದು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದನು. ಪತ್ತೆ ಕಾರ್ಯವನ್ನು ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಂ. ನೇತೃತ್ವದಲ್ಲಿ ಪಿಎಸ್ಐ ಸುದೀಪ್ ಎಂವಿ, ಶರಣಪ್ಪ ಭಂಡಾರಿ, ಎಎಸ್ಐ ಮೋಹನ್ ಕೆ.ವಿ, ರಾಮ ಹಾಗೂ ಸಿಸಿಬಿ ಸಿಬ್ಬಂದಿ ಕೈಗೊಂಡಿದ್ದರು.