ತುಮಕೂರು: ಹಾಡಹಗಲೇ ಮಗಳ ಅಪಹರಣ, ಪೊಲೀಸರಿಂದ ಸಿಗದ ನ್ಯಾಯ ; ಠಾಣೆ ಎದುರೇ ಪೋಷಕರ ಅರೆಬೆತ್ತಲೆ ಪ್ರತಿಭಟನೆ.

ತುಮಕೂರು: ಹಾಡಹಗಲೇ ಮಗಳ ಅಪಹರಣವಾಗಿದ್ದು ಹುಡುಕಿಕೊಡುವಂತೆ ಪೊಲೀಸರ ಬಳಿ ಬಂದರೂ ನ್ಯಾಯ ಸಿಗಲಿಲ್ಲ ಎಂದು ಆರೋಪಿಸಿ ಮಗಳನ್ನು ಹುಡುಕಿಕೊಡುವಂತೆ ಪೊಲೀಸ್ ಠಾಣೆ ಎದುರೇ ಪೋಷಕರು ಅರೆಬೆತ್ತಲೆ ಪ್ರತಿಭಟನೆ ನಡೆಸಿದ ಘಟನೆ ತುಮಕೂರು ಜಿಲ್ಲೆ ತಿಪಟೂರು ನಗರ ಪೊಲೀಸ್ ಠಾಣೆ ಎದುರು ನಡೆದಿದೆ.
ತಿಪಟೂರು ನಗರದ ಕಂಚಾಘಟ್ಟ ನಿವಾಸಿ ರಂಗಸ್ವಾಮಿ ಎಂಬುವವರ ಕುಟುಂಬದಿಂದ ಈ ಪ್ರತಿಭಟನೆ ನಡೆದಿದೆ.
ಹಿರೆಬಿದರೆ ಗ್ರಾಮದ ಯುವಕನೊಬ್ಬ ಮಗಳನ್ನು ಪ್ರೀತಿಸುತ್ತಿದ್ದ, ಯುವಕನ ತಾಯಿ ಆಟೋದಲ್ಲಿ ಬಂದು ತಮ್ಮ ಮಗಳನ್ನು ಕರೆದೊಯ್ದಿದ್ದಾರೆ ಎಂದು ಪೋಷಕರು ಆರೋಪಿಸಿದ್ದರು. ದೂರು ನೀಡಲು ಬಂದವರಿಗೆ ಸ್ಪಂದಿಸಲಿಲ್ಲ ಎಂಬ ಕಾರಣದಿಂದ ಪೋಷಕರು ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಪೊಲೀಸರ ಸಂಧಾನ - ಪ್ರಕರಣ ಸುಖಾಂತ್ಯ:
ನಂತರ ಅವರನ್ನು ಸಮಾಧಾನ ಪಡಿಸಿದ ಪೊಲೀಸರು ಪ್ರತಿಭಟನೆ ಮುಂದುವರೆಸದಂತೆ ತಡೆದರು. ರಾತ್ರಿ ಪ್ರಿಯಕರನೊಂದಿಗೆ ಠಾಣೆಗೆ ಬಂದ ಯುವತಿ, ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ಒಪ್ಪಿಕೊಂಡಿದ್ದಾರೆ. ಮಗಳ ಪ್ರೀತಿಗೆ ಪೋಷಕರು ಒಪ್ಪಿದ್ದು, ಎರಡು ಮನೆಯವರಿಂದ ಮದುವೆಗೆ ಒಪ್ಪಿಗೆ ದೊರೆತ ನಂತರ ಪ್ರಕರಣ ಸುಖಾಂತ್ಯ ಕಂಡಿದೆ