ಧಾರವಾಡ :ಧಾರವಾಡದಲ್ಲೂ ಜನಿವಾರ ವಿವಾದ: ಜನಿವಾರ ಕತ್ತರಿಸಿ ವಿದ್ಯಾರ್ಥಿ ಕೈಗೆ ಕೊಟ್ಟ ಸಿಬ್ಬಂದಿ.
ಧಾರವಾಡ: ಕರ್ನಾಟಕದಲ್ಲಿ ಜನಿವಾರ ಜಟಾಪಟಿ ಜೋರಾಗಿದೆ. ವ್ಯಾಪಕ ಟೀಕೆಗೆ ಗುರಿಯಾಗುವುದರೊಂದಿಗೆ ರಾಜಕೀಯ ನಾಯಕರ ಹಗ್ಗಜಗ್ಗಾಟಕ್ಕೂ ವೇದಿಕೆಯಾಗಿದೆ. ಬೀದರ್, ಶಿವಮೊಗ್ಗ ಬಳಿಕ ಇದೀಗ ಧಾರವಾಡಲ್ಲೂ ಇಂತಹದೇ ಘಟನೆ ನಡೆದಿದೆ. ಸಿಇಟಿ ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿಯ ಜನಿವಾರವನ್ನು ಸಿಬ್ಬಂದಿ ಕತ್ತರಿಸಿರುವಂತಹ ಘಟನೆ ಧಾರವಾಡ ನಗರದ ಹುರಕಡ್ಲಿ ಕಾಲೇಜ್‌ನ ಪರೀಕ್ಷಾ ಕೇಂದ್ರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಧಾರವಾಡದ ರಾಘವೇಂದ್ರ ನಗರದ ನಂದನ್ ಏರಿ, ವಿದ್ಯಾಗಿರಿ ಬಡಾವಣೆಯಲ್ಲಿರೋ ಜೆಎಸ್ಎಸ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದಾರೆ. ಇನ್ನು ಈತ ಏಪ್ರಿಲ್ 16 ರಂದು ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಗರದ ಹುರಕಡ್ಲಿ ಕಾಲೇಜಿನಲ್ಲಿ ಬರೆಯಲು ಹೋಗಿದ್ದ. ಕೇಂದ್ರದ ಹೊರಗಡೆ ಭದ್ರತಾ ಸಿಬ್ಬಂದಿ ಈತನನ್ನು ಪರೀಕ್ಷಿಸುವಾಗ ನಂದನ್ ಧರಿಸಿದ್ದ ಜನಿವಾರ ಕಣ್ಣಿಗೆ ಬಿದ್ದಿದೆ. ಕೂಡಲೇ ಅದನ್ನು ತೆಗೆಯುವಂತೆ ಹೇಳಿದ್ಧಾರೆ. ಆದರೆ ಅದಕ್ಕೆ ನಂದನ್ ವಿರೋಧಿಸಿದ್ದಾನೆ. ಆದರೆ ಅದನ್ನು ಧರಿಸಿದರೆ ಪರೀಕ್ಷಾ ಕೊಠಡಿಗೆ ಬಿಡಲು ಆಗೋದಿಲ್ಲ ಅಂತಾ ಭದ್ರತಾ ಸಿಬ್ಬಂದಿ ಹೇಳಿದ್ದಾರೆ. ಅಷ್ಟೇ ಅಲ್ಲದೇ ಕೂಡಲೇ ಕತ್ತರಿ ತಂದು ಜನಿವಾರ ಕತ್ತರಿಸಿ ವಿದ್ಯಾರ್ಥಿ ಕೈಗೆ ಕೊಟ್ಟಿದ್ದಾರೆ. ಇದರಿಂದ ಶಾಕ್ಗೆ ಒಳಗಾದ ನಂದನ್ ಏನೊಂದೂ ಮಾತನಾಡಲಾಗದೇ ಪರೀಕ್ಷಾ ಕೇಂದ್ರದೊಳಗೆ ಹೋಗಿದ್ದಾನೆ. ಅಚ್ಚರಿಯ ಸಂಗತಿ ಎಂದರೆ, ಜನಿವಾರವನ್ನು ಕತ್ತರಿಸಿದ ಸಿಬ್ಬಂದಿ ಅದನ್ನು ಆತನ ಕೈಗೆ ಕೊಟ್ಟು ಒಳಗಡೆ ಕಳಿಸಿದ್ದಾರೆ.
ಘಟನೆಯಿಂದ ಶಾಕ್ ಆದ ವಿದ್ಯಾರ್ಥಿ ಮಾತನಾಡದೇ ಪರೀಕ್ಷಾ ಕೇಂದ್ರಕ್ಕೆ ತೆರಳಲಿ ಸಿಇಟಿ ಪರೀಕ್ಷೆ ಬರೆದು ಬಂದಿದ್ದಾನೆ. ಘಟನೆ ನಡೆದ ದಿನ ವಿದ್ಯಾರ್ಥಿ ಪೋಷಕರಿಗೂ ಹೇಳಿರಲಿಲ್ಲ. ಆದರೆ ಸಿಇಟಿ ಪರೀಕ್ಷೆಗೆ ಜನಿವಾರ ತೆಗೆಸಿದ ವಿವಾದ ರಾಜ್ಯಾದ್ಯಂತ ಸುದ್ದಿಯಾಗುತ್ತಿದ್ದಂತೆ ವಿದ್ಯಾರ್ಥಿ ತನಗೂ ಪರೀಕ್ಷಾ ಕೇಂದ್ರದಲ್ಲಿ ಹೀಗೆ ಮಾಡಿದ್ದಾಗಿ ತಿಳಿಸಿದ್ದಾನೆ.