ನವದೆಹಲಿ :ಕೆಥೋಲಿಕ್ ಚರ್ಚ್ ಪಾಲಿನ ಪರಮೋಚ್ಛ ಗುರು ಹಾಗೂ ವ್ಯಾಟಿಕನ್ ಸಿಟಿಯ ಪರಮೋನ್ನತ ನಾಯಕ ಪೋಪ್ ಫ್ರಾನ್ಸಿಸ್ ಕೆಲವು ದಿನಗಳ ಅನಾರೋಗ್ಯದಿಂದ ನಿಧನ; ಫ್ರಾನ್ಸಿಸ್ ನಿಧನ ಬಗ್ಗೆ ಅಧಿಕೃತವಾಗಿ ವ್ಯಾಟಿಕನ್ ಸಿಟಿ ಹೇಳಿಕೆ ಬಿಡುಗಡೆ.

ನವದೆಹಲಿ : ಕೆಥೋಲಿಕ್ ಚರ್ಚ್ ಪಾಲಿನ ಪರಮೋಚ್ಛ ಗುರು ಹಾಗೂ ವ್ಯಾಟಿಕನ್ ಸಿಟಿಯ ಪರಮೋನ್ನತ ನಾಯಕ ಪೋಪ್ ಫ್ರಾನ್ಸಿಸ್ ಕೆಲವು ದಿನಗಳಚ ಅನಾರೋಗ್ಯದ ಬಳಿಕ ತಮ್ಮ 88ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಫ್ರಾನ್ಸಿಸ್ ನಿಧನ ಬಗ್ಗೆ ಅಧಿಕೃತವಾಗಿ ವ್ಯಾಟಿಕನ್ ಸಿಟಿ ಹೇಳಿಕೆ ಬಿಡುಗಡೆ ಮಾಡಿದೆ.
ಪೋಪ್ ಫ್ರಾನ್ಸಿಸ್ ಮೂಲತಃ ಅರ್ಜೆಂಟೀನಾ ದೇಶದಿಂದ ಇಟಲಿಗೆ ವಲಸೆ ಬಂದ ಕುಟುಂಬಕ್ಕೆ ಸೇರಿದವರು. ಹೀಗಾಗಿ ಪೋಪ್ ಹುದ್ದೆಗೇರಿದ ಮೊದಲ ಯುರೋಪೇತರ ವ್ಯಕ್ತಿಯೂ ಆಗಿದ್ದಾರೆ. ಎಂಟನೇ ಶತಮಾನದಲ್ಲಿ ಸಿರಿಯಾ ಮೂಲದ ಮೂರನೇ ಜಾರ್ಜ್ ಪೋಪ್ ಆಗಿದ್ದರು. ಅವರನ್ನು ಬಿಟ್ಟರೆ ಯುರೋಪಿಯನ್ ಪ್ರಜೆಗಳಿಗೆ ಹೊರತಾದ ವ್ಯಕ್ತಿ ಪೋಪ್ ಹುದ್ದೆಗೇರಿಲ್ಲ. 1936ರ ಡಿಸೆಂಬರ್ 17ರಂದು ಅರ್ಜೆಂಟೀನಾದ ಬ್ಯೂನಸ್ ಐರೀಸ್ ನಗರದಲ್ಲಿ ಫ್ರಾನ್ಸಿಸ್ ಜನಿಸಿದ್ದರು. ಅವರ ಮೊದಲ ಹೆಸರು ಜಾರ್ಜ್ ಮರಿಯೋ ಬರ್ಗೊಗ್ಲಿಯೋ ಎಂದಾಗಿತ್ತು.
ಬಾಲ್ಯದಲ್ಲಿ ಪ್ರಾಥಮಿಕ ಶಿಕ್ಷಣದ ಬಳಿಕ ಮೊದಲಿಗೆ ಕೆಮಿಕಲ್ ಟೆಕ್ನಿಶಿಯನ್ ತರಬೇತಿ ಪಡೆದಿದ್ದರು. 1958, ಮಾರ್ಚ್ 11 ರಂದು ವಿಲ್ಲಾ ಡಿವೊಟೋ ಡಯಾಸಿಸ್ ನಲ್ಲಿ ಜೆಸೂಟ್ ದೀಕ್ಷೆ ನೀಡಲಾಗಿತ್ತು. ಆನಂತರ ಹ್ಯೂಮನಿಟೀಸ್ ಕಲಿಯುವುದಕ್ಕಾಗಿ ಚಿಲಿ, ಫಿಲಾಸಫಿ ಕಲಿಯಲು ಸ್ಯಾನ್ ಜೋಸ್ ನಗರಕ್ಕೆ ತೆರಳಿದ್ದರು. ಈ ನಡುವೆ, ಸಾಹಿತ್ಯ ಮತ್ತು ಸೈಕಾಲಜಿ ವಿಷಯವನ್ನು ಕಲಿಸುವುದಕ್ಕೂ ತೆರಳುತ್ತಿದ್ದರು. 1970ರಲ್ಲಿ ಥಿಯೋಲಜಿ ವಿಷಯದಲ್ಲಿ ಪದವಿ ಪಡೆದಿದ್ದರು.
1969ರ ಡಿಸೆಂಬರ್ 13ರಂದು ಅರ್ಜೆಂಟೀನಾದಲ್ಲಿ ಪಾದ್ರಿಯಾಗಿ ಸೇವೆ ಆರಂಭಿಸಿದ್ದರು. ಸ್ಯಾನ್ ಜೋಸ್ ನಗರದಲ್ಲಿ ಆರು ವರ್ಷಗಳ ಕಾಲ ಸೇವೆಗೈದು ರೆಕ್ಟರ್ ಕೂಡ ಆಗಿದ್ದರು. 1992ರಲ್ಲಿ ಆಗಿನ ಪೋಪ್ ಎರಡನೇ ಜಾನ್ ಪೌಲ್ ಅವರು, ಬರ್ಗೊಗ್ಲಿಯೊ ಅವರನ್ನು ಬ್ಯೂನಸ್ ಐರಿಸ್ ನಲ್ಲಿ ಬಿಷಪ್ ಆಗಿ ನೇಮಕ ಮಾಡಿದ್ದರು. ಆಬಳಿಕ ಅದೇ ವಿಭಾಗದಲ್ಲಿ ಆರ್ಚ್ ಬಿಷಪ್ ಆಗಿಯೂ ಪದೋನ್ನತಿ ಹೊಂದಿದ್ದರು. 2013, ಮಾರ್ಚ್ 13ರಂದು ಪೋಪ್ 16ನೇ ಬೆನೆಡಿಕ್ಟ್ ರಾಜಿನಾಮೆ ನೀಡಿದ ಬಳಿಕ ಬರ್ಗೊಗ್ಲಿಯೋ ಅವರನ್ನು ಪೋಪ್ ಮಾಡಿದ್ದಲ್ಲದೆ, ಅಸಿಸಿಯ ಸಂತ ಫ್ರಾನ್ಸಿಸರ ನೆನಪಿನಲ್ಲಿ ಪೋಪ್ ಫ್ರಾನ್ಸಿಸ್ ಎಂದು ನಾಮಕರಣ ಮಾಡಲಾಗಿತ್ತು.
ಪೋಪ್ ಫ್ರಾನ್ಸಿಸ್ ಅವರು ಜನಪರ ವಿಷಯಗಳ ಬಗ್ಗೆ ಸ್ಪಂದಿಸುತ್ತಿದ್ದರು. ಹವಾಮಾನ ವೈಪರೀತ್ಯಗಳ ಬಗ್ಗೆಯೂ ಜಗತ್ತಿನ ದೇಶಗಳಿಗೆ ಎಚ್ಚರಿಕೆ ಮಾತುಗಳನ್ನು ಹೇಳಿದ್ದರು. ಮರಣದಂಡನೆ ಶಿಕ್ಷೆಯ ವಿರುದ್ಧ ಧ್ವನಿಯೆತ್ತಿದ್ದರು. ಅಮೆರಿಕ - ಕ್ಯೂಬಾ ಸಂಬಂಧ ಉತ್ತಮ ಪಡಿಸಲು ಮುತುವರ್ಜಿ ವಹಿಸಿದ್ದರು. ತಮ್ಮ ಜನಾನುರಾಗಿ ಕೆಲಸದಿಂದಾಗಿ ಪೋಪ್ ಫ್ರಾನ್ಸಿಸ್ ಜನಪ್ರಿಯತೆ ಗಳಿಸಿದ್ದರು.