ಮಂಗಳೂರು: ಮೂಲ್ಕಿ ಮೂಲದ ರಿಕ್ಷಾ ಚಾಲಕನ ಶವ ಕುಂಜತ್ತೂರಿನಲ್ಲಿ ಪತ್ತೆ ; ಆಟೋ ಬಾಡಿಗೆ ಹೋಗಿ ಕೊಲೆಗೈದ ಶಂಕೆ, ಶವ ಸಿಕ್ಕ ನಿರ್ಜನ ಪ್ರದೇಶದಲ್ಲಿ ಡ್ರಗ್ಸ್- ಇಸ್ಪೀಟ್ ಅಡ್ಡೆ

ಮಂಗಳೂರು : ನಗರದ ಕೊಟ್ಟಾರದಲ್ಲಿ ಆಟೋ ಓಡಿಸುತ್ತಿದ್ದ ಮೂಲ್ಕಿ ಕೊಳ್ನಾಡು ನಿವಾಸಿ ಮಹಮ್ಮದ್ ಶರೀಫ್ ಎಂಬವರ ಮೃತದೇಹ ಕೇರಳ ಗಡಿಭಾಗದ ಕುಂಜತ್ತೂರು ಪದವು ಎಂಬಲ್ಲಿ ನಿರ್ಜನ ಪ್ರದೇಶದ ಬಾವಿಯಲ್ಲಿ ಪತ್ತೆಯಾಗಿದೆ. ಬಾವಿಯಿಂದ ನೂರು ಮೀಟರ್ ದೂರದಲ್ಲಿ ಆಟೋ ಪತ್ತೆಯಾಗಿದ್ದು ಸ್ಥಳದಲ್ಲಿ ಚಪ್ಪಲಿಯೂ ಸಿಕ್ಕಿದೆ. ಸಾವಿನ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಬುಧವಾರ ಬೆಳಗ್ಗೆ ಎಂದಿನಂತೆ ಮನೆಯಿಂದ ಆಟೋದಲ್ಲಿ ತೆರಳಿದ್ದ ಅವರು, ಮುಲ್ಕಿಯ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಪತ್ನಿ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಬಂದಿದ್ದರಿಂದ ಮುಲ್ಕಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಯುತ್ತಿದ್ದಂತೆ ಗುರುವಾರ ಸಂಜೆ ಕೇರಳ- ಕರ್ನಾಟಕ ಗಡಿಭಾಗದ ತಲಪಾಡಿ ಬಳಿಯ ಕುಂಜತ್ತೂರು ಪದವು ಎಂಬಲ್ಲಿ ಆಟೋ ರಿಕ್ಷಾ ಕಂಡುಬಂದಿದ್ದು ಹತ್ತಿರದ ಬಾವಿಯಲ್ಲಿ ಶವ ಪತ್ತೆಯಾಗಿದೆ.

ಮುಹಮ್ಮದ್ ಶರೀಫ್ ದಿನಾ ಬೆಳಗ್ಗೆ 10 ಗಂಟೆಗೆ ತನ್ನ ಮನೆಯಿಂದ ಕೊಟ್ಟಾರ ಚೌಕಿಗೆ ಬಂದು ಬಾಡಿಗೆಗೆ ರಿಕ್ಷಾ ಓಡಿಸುತ್ತಾರೆ. ತಡರಾತ್ರಿಯಾದರೂ ಸರಿ, ಮನೆಗೆ ಮರಳುತ್ತಿದ್ದರು. ಆದರೆ ಬುಧವಾರ ಬೆಳಗ್ಗೆ ಮನೆಯಿಂದ ಹೊರಟು ಬಂದಿದ್ದವರು ಮನೆಗೆ ಮರಳಿರಲಿಲ್ಲ. ಅವರಿಗೆ ಮೂವರು ಗಂಡು ಮಕ್ಕಳಿದ್ದು ದೊಡ್ಡವರಾಗಿದ್ದಾರೆ. ಯಾವುದೇ ದುಶ್ಚಟ ಇರಲಿಲ್ಲ. ಆಟೋವನ್ನು ಬಾಡಿಗೆ ಉದ್ದೇಶಕ್ಕಾಗಿ ಅಲ್ಲಿಗೆ ಹೋಗಿರುವ ಸಾಧ್ಯತೆ ಇಲ್ಲ ಎಂದು ಅವರ ಸ್ನೇಹಿತರು ತಿಳಿಸಿದ್ದಾರೆ.
ಕುಂಜತ್ತೂರು ಗಡಿಭಾಗ ಡ್ರಗ್ಸ್, ಇಸ್ಪೀಟ್ ಆಟದ ಅಡ್ಡೆಯಾಗಿದ್ದು ನಿರ್ಜನ ಪ್ರದೇಶವಾಗಿದೆ. ಡ್ರಗ್ಸ್ ಅಥವಾ ಇಸ್ಪೀಟ್ ಆಟದವರು ಬಾಡಿಗೆ ಕರೆತಂದಿದ್ದಾರೆಯೇ, ಅಲ್ಲಿ ಗಲಾಟೆ ನಡೆದು ಇವರನ್ನು ಕೊಂದು ಹಾಕಿದ್ದಾರೆಯೇ ಎಂಬ ಶಂಕೆಯಿದೆ. ಸ್ಥಳಕ್ಕೆ ಬಂದ ಮಹಮ್ಮದ್ ಶರೀಫ್ ಅವರ ಮಗ, ಆಟೋದಲ್ಲಿ ಕೀ ಇಲ್ಲ. ಪೊದೆಗಳ ನಡುವೆ ನೇರವಾಗಿಯೇ ಆಟೋ ನಿಂತಿದೆ. ಅಲ್ಲಿಂದ ನೂರು ಮೀಟರ್ ದೂರದ ಬಾವಿಯಲ್ಲಿ ಶವ ಪತ್ತೆಯಾಗಿದೆ. ಹೀಗಾಗಿ ಸಂಶಯ ಕಾಣುತ್ತಿದ್ದು ಕೊಲೆಯಾಗಿರುವ ಶಂಕೆ ತೋರುತ್ತಿದೆ ಎಂದು ತಿಳಿಸಿದ್ದಾರೆ.
ಪೊಲೀಸರು ಸ್ಥಳದಲ್ಲಿ ತನಿಖೆ ನಡೆಸುತ್ತಿದ್ದಾರೆ, ಮೊಬೈಲ್ ಸಿಕ್ಕಿದರೆ ಮತ್ತಷ್ಟು ವಿಷಯ ತಿಳಿಯಬಹುದು ಎನ್ನಲಾಗುತ್ತಿದೆ. ಮಹಮ್ಮದ್ ಶರೀಫ್ ಅವರು ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.