ಕಾಸರಗೋಡು :ಕುಡಿದ ಮತ್ತಿನಲ್ಲಿ ಆಸಿಡ್ ಎರಚಿ ಬೆಂಕಿ ಹಚ್ಚಿದ್ದ ವ್ಯಕ್ತಿ ; ಅರ್ಧ ಭಾಗ ಸುಟ್ಟುಹೋಗಿದ್ದ ಕಾಸರಗೋಡಿನ ಮಹಿಳೆ ಮಂಗಳೂರಿನಲ್ಲಿ ಸಾವು.

ಕಾಸರಗೋಡು :ಕುಡಿದ ಮತ್ತಿನಲ್ಲಿ ಆಸಿಡ್ ಎರಚಿ ಬೆಂಕಿ ಹಚ್ಚಿದ್ದ ವ್ಯಕ್ತಿ ; ಅರ್ಧ ಭಾಗ ಸುಟ್ಟುಹೋಗಿದ್ದ ಕಾಸರಗೋಡಿನ ಮಹಿಳೆ ಮಂಗಳೂರಿನಲ್ಲಿ ಸಾವು.


ಕಾಸರಗೋಡು: ಕುಡಿದು ಬಂದು ಅಂಗಡಿ ಮುಂದೆ ಗಲಾಟೆ ಮಾಡುತ್ತಿದ್ದಾನೆಂದು ದೂರು ಕೊಟ್ಟ ಸಿಟ್ಟಿನಲ್ಲಿ ವ್ಯಕ್ತಿಯೊಬ್ಬ ಥಿನ್ನರ್ ಎರಚಿ ಮಹಿಳೆಯೊಬ್ಬರಿಗೆ ಬೆಂಕಿ ಹಚ್ಚಿದ ಘಟನೆ ಕಾಸರಗೋಡು ಜಿಲ್ಲೆಯ ಬೇಡಡ್ಕ ಎಂಬಲ್ಲಿ ನಡೆದಿದ್ದು, ದೇಹದ ಅರ್ಧ ಭಾಗ ಸುಟ್ಟು ಹೋಗಿದ್ದ ಮಹಿಳೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಎಪ್ರಿಲ್ 8ರಂದು ರಮಿತಾ (30) ಎಂಬ ಮಹಿಳೆ ಮೇಲೆ ಏಸಿಡ್ ಎರಚಿ ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ದೇಹದ 50 ಶೇಕಡಾ ಭಾಗ ಸುಟ್ಟು ಹೋಗಿದ್ದರಿಂದ ಕೂಡಲೇ ಆಕೆಯನ್ನು ಕಾಞಂಗಾಡು ಸರಕಾರಿ ಆಸ್ಪತ್ರೆಗೆ ಒಯ್ಯಲಾಗಿತ್ತು. ಆನಂತರ ಮಂಗಳೂರಿನ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಹಿಳೆ ಎ.14ರಂದು ಮೃತಪಟ್ಟಿದ್ದಾರೆ.

ರಮಿತಾ ಬೇಡಡ್ಕದಲ್ಲಿ ಗ್ರೋಸರಿ ಅಂಗಡಿ ನಡೆಸುತ್ತಿದ್ದರು. ಅದರ ಪಕ್ಕದಲ್ಲೇ ತಮಿಳುನಾಡು ಮೂಲದ ರಾಮಕೃತಮ್ (57) ಎಂಬ ವ್ಯಕ್ತಿ ಫರ್ನಿಚರ್ ಶಾಪ್ ಒಂದನ್ನು ನಡೆಸುತ್ತಿದ್ದ. ದಿನವೂ ಕುಡಿದು ಬಂದು ಗಲಾಟೆ ನಡೆಸುತ್ತಿದ್ದುದರಿಂದ ರಮಿತಾ ಕಟ್ಟಡದ ಮಾಲಕರಿಗೆ ದೂರು ನೀಡಿದ್ದಳು. ಇದರಿಂದ ಕಟ್ಟಡ ಮಾಲಕ ರಾಮಕೃತನಿಗೆ ಫರ್ನಿಚರ್ ಶಾಪ್ ತೆರವು ಮಾಡುವಂತೆ ಸೂಚಿಸಿದ್ದರು. ಇದರಿಂದ ಸಿಟ್ಟಿಗೆದ್ದ ರಾಮಕೃತ ಎಪ್ರಿಲ್ 8ರಂದು ಮತ್ತೆ ಕುಡಿದು ಬಂದು ಗಲಾಟೆ ಮಾಡಿದ್ದಲ್ಲದೆ, ಕೈಯಲ್ಲಿದ್ದ ಥಿನ್ನರ್ ಬಾಟಲಿಯನ್ನು ಮಹಿಳೆ ರಮಿತಾ ಮೈಮೇಲೆ ಎರಚಿದ್ದಾನೆ. ಬಳಿಕ ಬೆಂಕಿ ಹಚ್ಚಿದ್ದು ಅಂಗಡಿಗೂ ಬೆಂಕಿ ತಗಲಿತ್ತು. ಈ ವೇಳೆ, ರಮಿತಾ ತೀವ್ರ ಸುಟ್ಟ ಗಾಯಕ್ಕೀಡಾಗಿದ್ದರೆ, ಆಕೆಯ ಎಂಟು ವರ್ಷದ ಮಗ ಸ್ವಲ್ಪದರಲ್ಲಿ ಪಾರಾಗಿದ್ದ.

ಕೂಡಲೇ ರಾಮಕೃತ ಅಲ್ಲಿಂದ ಎಸ್ಕೇಪ್ ಆಗಿದ್ದು, ಬಸ್ಸಿನಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ, ಅಂಗಡಿಗೆ ಸಾಮಗ್ರಿ ಖರೀದಿಗೆ ಬಂದಿದ್ದ ಸಜಿತಾ ಎಂಬ ಮತ್ತೊಬ್ಬ ಮಹಿಳೆ ಆರೋಪಿಯನ್ನು ಬೆನ್ನಟ್ಟಿದ್ದು, ಬಸ್ಸಿನ ಹಿಂದಕ್ಕೆ ಓಡಿ ನಿಲ್ಲಿಸಿದ್ದಾಳೆ. ಅಲ್ಲದೆ, ಬಸ್ಸಿನ ಪ್ರಯಾಣಿಕರು ಸೇರಿ ಆರೋಪಿ ರಾಮಕೃತನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

Ads on article

Advertise in articles 1

advertising articles 2

Advertise under the article