ಪಹಲ್ಗಾಮ್: ಉಗ್ರ ದಾಳಿಗೆ ಪ್ರವಾಸೋದ್ಯಮ ಛಿದ್ರ;ಶೇಕಡಾ 90 ರಷ್ಟು ಬುಕಿಂಗ್‌ಗಳು ರದ್ದು; ಪಹಲ್ಗಾಮ್ ಉಗ್ರ ದಾಳಿಯಿಂದ ಕಾಶ್ಮೀರದ ಪ್ರವಾಸೋದ್ಯಮದ ಮೇಲೆ ಭಾರೀ ಪೆಟ್ಟು .
ಶ್ರೀನಗರ : ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಬಲಿಯಾಗಿದ್ದು ಬರಿಯ 26 ಜೀವಗಳಲ್ಲ, ಕಾಶ್ಮೀರದಲ್ಲಿ ಹಲವು ವರ್ಷಗಳಿಂದ ಆಗುತ್ತಿರುವ ಅಭಿವೃದ್ಧಿಯ ಆತ್ಮ ಮತ್ತು ಬಂಧ ನಾಶ..!
ಇದು ಕಾಶ್ಮೀರದ ವ್ಯಾಪಾರಸ್ಥರು ಮತ್ತು ಪ್ರವಾಸೋದ್ಯಮಿಗಳ ನೋವಿನ ಮಾತು. ಕಾರಣ, ಉಗ್ರ ದಾಳಿಯಿಂದಾಗಿ ಭೀತಿಗೆ ಒಳಗಾಗಿರುವ ದೇಶ-ವಿದೇಶದ ಪ್ರವಾಸಿಗರು ಮುಂದಿನ 10 ದಿನಗಳ ಎಲ್ಲ ಬುಕಿಂಗ್ ರದ್ದು ಮಾಡಿದ್ದಾರೆ. ಇದು ಶೇಕಡಾವಾರು 90 ರಷ್ಟಿದೆ.
ಹೌದು, ಪ್ರವಾಸಿಗರ ಸ್ವರ್ಗ ಎಂದೇ ಕರೆಸಿಕೊಳ್ಳುವ ಕಣಿವೆಯಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದೆ. ಇದು ಪ್ರವಾಸೋದ್ಯಮ ಮೇಲೆ ಬಲವಾದ ಪೆಟ್ಟು ಬಿದ್ದಿದೆ. ಮುಂದಿನ 10 ದಿನಗಳಲ್ಲಿ ಆಗಿರುವ ಬುಕಿಂಗ್ನಲ್ಲಿ ಶೇಕಡಾ 90 ರಷ್ಟು ರದ್ದಾಗಿವೆ ಎಂದು ಪ್ರಮುಖ ಪ್ರವಾಸ ನಿರ್ವಾಹಕರು ಭಾನುವಾರ ತಿಳಿಸಿದ್ದಾರೆ.
ಪ್ರವಾಸೋದ್ಯಮದ ಆತ್ಮದ ಮೇಲೆ ದಾಳಿ: ಪ್ರವಾಸ ಮತ್ತು ಪ್ರಯಾಣ ನಿರ್ವಾಹಕರಾದ ವೀಣಾ ಪಾಟೀಲ್, ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್‌ನ ಸುಧೀರ್ ಪಾಟೀಲ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಭಯೋತ್ಪಾದಕರು ಕೇವಲ ಪ್ರವಾಸಿಗರನ್ನು ಕೊಂದಿಲ್ಲ. ಕಾಶ್ಮೀರದಲ್ಲಿ ವರ್ಷಗಳಿಂದ ಆಗುತ್ತಿರುವ ಅಭಿವೃದ್ಧಿಯ ಆತ್ಮ ಮತ್ತು ಬಂಧವನ್ನು ನಾಶ ಮಾಡಿದ್ದಾರೆ ಎಂದು ಹೇಳಿದ್ದಾರೆ.
"ದಾಳಿಯು ಪ್ರವಾಸಿಗರ ವಿಶ್ವಾಸವನ್ನು ಅಲುಗಾಡಿಸಿರುವುದರಿಂದ ಬುಕಿಂಗ್ ರದ್ದತಿಗಳನ್ನು ಎದುರಿಸುತ್ತಿದ್ದೇವೆ. ಮುಂದಿನ ಎರಡು ತಿಂಗಳು ಪ್ರವಾಸಿ ಋತುವಾಗಿದೆ. ಪಂಚತಾರಾ ಹೋಟೆಲ್ ಗಳಿಂದ ಹಿಡಿದು ಕಡಿಮೆ ಬಜೆಟ್‌ವರೆಗಿನ ಎಲ್ಲಾ ಹೋಟೆಲ್‌ಗಳು ಬುಕ್ ಆಗಿದ್ದವು. ಆದರೆ ದುರದೃಷ್ಟವಶಾತ್ ಎಲ್ಲವೂ ರದ್ದಾಗಿವೆ ಎಂದು ತಿಳಿಸಿದ್ದಾರೆ
ಮುಂದಿನ ವರ್ಷ ಬನ್ನಿ: ಪ್ರವಾಸ ಪ್ಯಾಕೇಜ್ ಅನ್ನು ಬುಕ್ ಮಾಡಿದ ಪ್ರವಾಸಿಗರು ತಮ್ಮ ಬುಕಿಂಗ್‌ಗಳನ್ನು ರದ್ದುಗೊಳಿಸದೆ, 2026ರ ಮೇ ತಿಂಗಳಿಗೆ ಮುಂದೂಡಲು ಪ್ರವಾಸ ನಿರ್ವಾಹಕರು ಕೋರಿದ್ದಾರೆ. ಇದೇ ಬುಕಿಂಗ್ ನಲ್ಲಿ ಪ್ರವಾಸಿಗರು ಮುಂದಿನ ವರ್ಷ ಇದೇ ಸಮಯದಲ್ಲಿ ಕಾಶ್ಮೀರಕ್ಕೆ ಪ್ರಯಾಣಿಸಬಹುದು ಎಂದು ಹೇಳಿದ್ದಾರೆ.
ಭಯೋತ್ಪಾದನಾ ದಾಳಿಯ ಬಗ್ಗೆ ಆಘಾತ ವ್ಯಕ್ತಪಡಿಸಿದ ಅವರು, ಇಂಥದ್ದೊಂದು ಘಟನೆಯನ್ನು ನಿರೀಕ್ಷಿಸಿರಲಿಲ್ಲ. ಇದು ಆಘಾತಕಾರಿ ಮತ್ತು ಬೇಸರ ತಂದಿದೆ. ಈ ದಾಳಿ ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಲಿದೆ. ಬುಕಿಂಗ್‌ಗಳು ರದ್ದಾಗುತ್ತಿವೆ. ಕೆಲವು ಪ್ರವಾಸಿಗರು ಕಾಶ್ಮೀರದಲ್ಲೇ ಉಳಿದಿದ್ದಾರೆ. ಅವರಿಗೆ ಸ್ಥಳೀಯರು ಬೆಂಬಲ ನೀಡಬೇಕು ಎಂದು ಕೋರಿದರು.
ಭಯೋತ್ಪಾದಕ ದಾಳಿ: ದಕ್ಷಿಣ ಕಾಶ್ಮೀರದ ಪಹಲ್ಗಾಮ್ ನಲ್ಲಿ ಏಪ್ರಿಲ್ 22 ರಂದು ಭಯೋತ್ಪಾದಕರು ದಾಳಿ ನಡೆಸಿ ಕರ್ನಾಟಕದ ಮೂವರು ಸೇರಿ 26 ಮಂದಿಯನ್ನು ಬಲಿ ತೆಗೆದುಕೊಂಡಿದ್ದರು. ಅದರಲ್ಲಿ ಹೆಚ್ಚಿನವರು ಪ್ರವಾಸಿಗರಾಗಿದ್ದಾರೆ. ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್-ಎ-ತೊಯ್ಬಾದ ಅಂಗಸಂಸ್ಥೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.