ಇಸ್ಲಾಮಾಬಾದ್ :ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋಟ ; 7 ಮಂದಿ ಸಾವು, ಹಲವರಿಗೆ ಗಾಯ, ತಾಲಿಬಾನ್ ಕೈವಾಡ !

ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಶಾಂತಿ ಸಮಿತಿಯ ಕಚೇರಿಯ ಮೇಲೆ ಸಂಭವಿಸಿದ ಪ್ರಬಲ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿ, ಹಲವಾರು ಜನರು ಗಾಯಗೊಂಡಿದ್ದಾರೆ.
ದಕ್ಷಿಣ ವಜಿರಿಸ್ತಾನ್ ಜಿಲ್ಲೆಯ ಪ್ರಧಾನ ಕಚೇರಿಯಾದ ವನಾದಲ್ಲಿರುವ ಸ್ಥಳೀಯ ಶಾಂತಿ ಸಮಿತಿಯ ಕಚೇರಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಇದರಿಂದಾಗಿ ಕಟ್ಟಡದ ಒಂದು ಭಾಗ ಕುಸಿದು ಹಲವು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.


ಇಲ್ಲಿಯವರೆಗೆ ಯಾವುದೇ ಗುಂಪು ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿಲ್ಲ. ರಕ್ಷಣಾ ತಂಡಗಳು ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಸ್ಥಳೀಯ ಪೊಲೀಸರು ಮತ್ತು ಭದ್ರತಾ ಸಂಸ್ಥೆಗಳು ಘಟನಾ ಪ್ರದೇಶವನ್ನು ಸುತ್ತುವರೆದು ತನಿಖೆ ಆರಂಭಿಸಿವೆ.
ಘಟನಾ ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸುತ್ತಿದ್ದು, ಸ್ಫೋಟಕ್ಕೆ ಕಾರಣರಾದವರನ್ನು ಪತ್ತೆಹಚ್ಚಲು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ 2022 ರಲ್ಲಿ ನಿಷೇಧಿತ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಜೊತೆಗಿನ ಕದನ ವಿರಾಮ ಒಪ್ಪಂದದ ಪತನದ ನಂತರ, ಪಾಕಿಸ್ತಾನವು ಭಯೋತ್ಪಾದಕ ಘಟನೆಗಳಲ್ಲಿ, ವಿಶೇಷವಾಗಿ ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ ಹೆಚ್ಚಳಕ್ಕೆ ಸಾಕ್ಷಿಯಾಗಿದೆ.
ತಾಲಿಬಾನ್ ವಿರೋಧಿ ಸಭೆಯಲ್ಲಿ ಬಾಂಬ್ ಬ್ಲಾಸ್ಟ್
ಪಾಕಿಸ್ತಾನಿ ತಾಲಿಬಾನ್ ಅನ್ನು ಸಾರ್ವಜನಿಕವಾಗಿ ವಿರೋಧಿಸುವ ಶಾಂತಿ ಸಮಿತಿಯ ಕಚೇರಿಯನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಈ ಶಾಂತಿ ಸಮಿತಿಯು ಸ್ಥಳೀಯ ನಿವಾಸಿಗಳ ನಡುವಿನ ವಿವಾದಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.
54 ಉಗ್ರರ ಹತ್ಯೆ ಎಂದಿದ್ದ ಪಾಕಿಸ್ತಾನ
ಅಫ್ಘಾನಿಸ್ತಾನದಿಂದ ದೇಶದೊಳಗೆ ನುಸುಳಲು ಯತ್ನಿಸಿದ ನಂತರ, ಹತ್ತಿರದ ಉತ್ತರ ವಜೀರಿಸ್ತಾನ್ ಜಿಲ್ಲೆಯಲ್ಲಿ 54 ಉಗ್ರಗಾಮಿಗಳು ಒಂದು ಪ್ರಮುಖ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಿಲಿಟರಿ ಹೇಳಿದ ಒಂದು ದಿನದ ನಂತರ ಈ ಬಾಂಬ್ ದಾಳಿ ನಡೆದಿದೆ .
ತಾಲೀಬಾನ್ ಕೈವಾಡ ಶಂಕೆ
ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಅಥವಾ ಟಿಟಿಪಿ ಎಂದೂ ಕರೆಯಲ್ಪಡುವ ಪಾಕಿಸ್ತಾನಿ ತಾಲಿಬಾನ್ ಮೇಲೆ ಹೊಣೆ ಹೊರುವ ಸಾಧ್ಯತೆಯಿದೆ ಮತ್ತು ಇದು ಸಾಮಾನ್ಯವಾಗಿ ಪಾಕಿಸ್ತಾನಿ ಭದ್ರತಾ ಪಡೆಗಳು ಮತ್ತು ನಾಗರಿಕರನ್ನು ಗುರಿಯಾಗಿಸುತ್ತದೆ.