ಮಂಗಳೂರು :ಉತ್ತರ ಕರ್ನಾಟಕದಿಂದ ಮಂಗಳೂರಿಗೆ ಪಡಿತರ ಅಕ್ಕಿ ಕಳ್ಳಸಂತೆ ; ಖಾಸಗಿ ಗೋದಾಮಿನಲ್ಲಿ 500 ಕ್ವಿಂಟಾಲ್ ಅಕ್ಕಿ ಅಕ್ರಮ ದಾಸ್ತಾನು ಪತ್ತೆ, ಪಾಲಿಶ್ ಮಾಡಿ ಬ್ರ್ಯಾಂಡ್ ರೂಪದಲ್ಲಿ ಮತ್ತೆ ಮಾರುಕಟ್ಟೆಗೆ.

ಮಂಗಳೂರು :ಉತ್ತರ ಕರ್ನಾಟಕದಿಂದ ಮಂಗಳೂರಿಗೆ ಪಡಿತರ ಅಕ್ಕಿ ಕಳ್ಳಸಂತೆ ; ಖಾಸಗಿ ಗೋದಾಮಿನಲ್ಲಿ 500 ಕ್ವಿಂಟಾಲ್ ಅಕ್ಕಿ ಅಕ್ರಮ ದಾಸ್ತಾನು ಪತ್ತೆ, ಪಾಲಿಶ್ ಮಾಡಿ ಬ್ರ್ಯಾಂಡ್ ರೂಪದಲ್ಲಿ ಮತ್ತೆ ಮಾರುಕಟ್ಟೆಗೆ.

ಮಂಗಳೂರು : ನಗರದ ಬಂದರು ಪ್ರದೇಶದ ಅಕ್ಕಿ ದಾಸ್ತಾನು ಕೇಂದ್ರದಲ್ಲಿ 500 ಕ್ವಿಂಟಾಲ್ ಗೂ ಅಧಿಕ ಅಕ್ಕಿಯನ್ನು ಅಕ್ರವಾಗಿ ದಾಸ್ತಾನು ಮಾಡಿರುವುದನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಪತ್ತೆ ಮಾಡಿದ್ದು, ವಶಕ್ಕೆ ಪಡೆದಿದ್ದಾರೆ. ಉತ್ತರ ಕರ್ನಾಟಕ ಭಾಗದಿಂದ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿಯನ್ನು ಪಡೆದು ಮಂಗಳೂರಿನಲ್ಲಿ ದಾಸ್ತಾನು ಮಾಡಲಾಗಿದೆ ಎನ್ನುವ ಮಾಹಿತಿ ಆಧರಿಸಿ ಅಧಿಕಾರಿಗಳು ದಾಳಿ ನಡೆಸಿದ್ದರು.

ದಾಳಿ ಸಂದರ್ಭದಲ್ಲಿ ಗೋದಾಮಿನಲ್ಲಿ ನಾನಾ ಬ್ರ್ಯಾಂಡ್ ಹಾಗೂ ಬ್ರ್ಯಾಂಡ್ ಇಲ್ಲದ ಗೋಣಿಗಳಲ್ಲಿ ಅಕ್ಕಿಯನ್ನು ಮೂಟೆಗಟ್ಟಲೆ ರಾಶಿ ಮಾಡಿರುವುದು ಪತ್ತೆಯಾಗಿದೆ. ಕೆಂಪಕ್ಕಿ, ಬಾಸ್ಮತಿ, ಜೀರಾ, ಸೋನಾ ಮಸೂರಿ, ಕುಚ್ಚಲಕ್ಕಿ ಚೀಲಗಳು ಪತ್ತೆಯಾಗಿವೆ. ಯಾವುದೇ ಬ್ರ್ಯಾಂಡ್ ಇಲ್ಲದ ಗೋಣಿ ಚೀಲಗಳಲ್ಲಿ ಅನ್ನಭಾಗ್ಯ ಮಾದರಿಯ ಅಕ್ಕಿಯನ್ನು ಸಂಗ್ರಹಿಸಿಡಲಾಗಿದೆ. ಇದು ಪಡಿತರ ಅಕ್ಕಿಯಾಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಗೋದಾಮಿನಲ್ಲಿದ್ದ ಎಲ್ಲ ಅಕ್ಕಿ ಚೀಲಗಳನ್ನು ಮಹಜರು ಮಾಡಿ ವಶಕ್ಕೆ ಪಡೆಯಲಾಗಿದೆ. ಮಹಜರು ಮಾಡಿ, ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಇಲಾಖೆ ಉಪ ನಿರ್ದೇಶಕಿ ಅನಿತಾ ಮದ್ಲೂರು ತಿಳಿಸಿದ್ದಾರೆ.

ಹೊರ ಜಿಲ್ಲೆಗಳಿಂದ ಅನ್ನಭಾಗ್ಯದ ಅಕ್ಕಿಯನ್ನು ತರಿಸಿಕೊಂಡು ಇಲ್ಲಿ ಪಾಲಿಶ್ ಮಾಡಿ ಬೇರೆ ಬೇರೆ ಬ್ರ್ಯಾಂಡ್ ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಂತಹ ದೂರು ಬಂದಿದ್ದು, ಪರಿಶೀಲನೆ ನಡೆಸಲಾಗುವುದು. ಬ್ರ್ಯಾಂಡ್ ಇಲ್ಲದ ಗೋಣಿ ಚೀಲಗಳಲ್ಲಿ ಅಕ್ಕಿ ಕಂಡುಬಂದಿರುವುದರಿಂದ ಪಡಿತರ ಅಕ್ಕಿಯೇ ಎಂಬ ಬಗ್ಗೆ ತನಿಖೆ ನಡೆಸಲಾಗುವುದು. ಸದ್ಯಕ್ಕೆ 500 ಕ್ವಿಂಟಾಲ್ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

ಅನುಗ್ರಹ ಎಂಟರ್ ಪ್ರೈಸಸ್ ಹೆಸರಲ್ಲಿದ್ದ ಗೋದಾಮಿನಲ್ಲಿ ಅಕ್ರಮ ಅಕ್ಕಿ ದಾಸ್ತಾನು ಪತ್ತೆಯಾಗಿದ್ದು, ಇದು ಮಂಗಳೂರಿನ ಸದಾಶಿವ ಕಾಮತ್ ಎಂಬವರಿಗೆ ಸೇರಿದ್ದಾಗಿದೆ. ದಲ್ಲಾಳಿಗಳ ಮೂಲಕ ಅಕ್ರಮವಾಗಿ ಅಕ್ಕಿಯನ್ನು ಖರೀದಿಸಿ ತಂದು ರೈಸ್ ಮಿಲ್ ಗಳಲ್ಲಿ ಪಾಲಿಶ್ ಮಾಡಿ ಬೇರೆ ಬೇರೆ ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟ ಮಾಡುತ್ತಿರುವ ಅಂಶ ಪತ್ತೆಯಾಗಿದೆ. ಇದೇ ವ್ಯಕ್ತಿಗೆ ಮಂಗಳೂರಿನಲ್ಲಿ ಮೂರು ಕಡೆ ದಾಸ್ತಾನು ಕೇಂದ್ರ ಇದೆ ಎನ್ನಲಾಗುತ್ತಿದ್ದು, ದೊಡ್ಡ ಮಟ್ಟದಲ್ಲಿ ಅಕ್ರಮ ಇರುವ ಸಂಶಯ ವ್ಯಕ್ತವಾಗಿದೆ. ಸದ್ಯಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆಯಂತೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪಾಲಿಶ್ ಅಕ್ಕಿಯನ್ನು ಪರಿಶೀಲಿಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಖಾಸಗಿ ಗೋದಾಮಿನಲ್ಲಿ ಅಕ್ಕಿ ದಾಸ್ತಾನು ಮಾಡಲು ಅವಕಾಶ ಇದೆಯೇ ಎಂಬ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಂಗಳೂರಿನಲ್ಲಿ ಅಕ್ರಮ ಅಕ್ಕಿ ದಾಸ್ತಾನು ಇದೇ ಮೊದಲ ಬಾರಿಗೆ ಪತ್ತೆಯಾಗಿದ್ದು, ಪುಕ್ಕಟೆ ಸಿಗುವ ಪಡಿತರ ಅಕ್ಕಿಯನ್ನು ಜನರಿಂದ ಕಡಿಮೆ ದರಕ್ಕೆ ಜನರಿಂದ ಖರೀದಿಸಿ ಉದ್ಯಮಿಗಳು ಮತ್ತೆ ಲಕ್ಷದ್ವೀಪ ಇನ್ನಿತರ ಪ್ರದೇಶಗಳ ಮಾರುಕಟ್ಟೆಗೆ ರವಾನಿಸುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

Ads on article

Advertise in articles 1

advertising articles 2

Advertise under the article