ಮಂಗಳೂರು: ಮತ್ತೆ ಪಂಜುರ್ಲಿ ದೈವದ ಮೊರೆ ಹೋದ ರಿಷಬ್ ಶೆಟ್ಟಿ ದಂಪತಿ ; ಜೊತೆಗಿದ್ದವರೇ ಕೇಡು ಬಗೆಯುತ್ತಿದ್ದಾರೆ, ಅಪಶಕುನಕ್ಕೆ ಧೃತಿಗೆಡುವುದು ಬೇಡ, 5 ತಿಂಗಳ ಗಡುವು ಕೊಡುತ್ತೇನೆಂದು ಅಭಯದ ನುಡಿ ಕೊಟ್ಟ ವಾರಾಹಿ ಪಂಜುರ್ಲಿ ದೈವ!!!

ಮಂಗಳೂರು : ಬಹು ನಿರೀಕ್ಷಿತ ಕಾಂತಾರ ಎರಡನೇ ಭಾಗದ ಸಿನಿಮಾ ಇನ್ನೇನು ತೆರೆಗೆ ಬಂದೇ ಬಿಡ್ತು ಎನ್ನುವ ನಿರೀಕ್ಷೆ ಜನರಲ್ಲಿ ಗರಿಗೆದರಿತ್ತು. ಆದರೆ, ಇದರ ನಡುವಲ್ಲೇ ಚಿತ್ರದ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ದಿಢೀರ್ ಎನ್ನುವಂತೆ ಕಾಂತಾರ ಸಿನಿಮಾದ ಪ್ರಧಾನ ಭೂಮಿಕೆಯಾಗಿದ್ದ ಪಂಜುರ್ಲಿ ದೈವದ ಮೊರೆ ಹೋಗಿದ್ದಾರೆ. ಏನೋ ಎಡವಟ್ಟು ಆಗಿದ್ಯೋ ಎನ್ನುವ ರೀತಿ ಮಂಗಳೂರಿಗೆ ಬಂದು ದೈವದ ಮುಂದೆ ಪ್ರಾರ್ಥನೆ ಹೇಳಿಕೊಂಡಿದ್ದಾರೆ.
ಮಂಗಳೂರಿನ ಕದ್ರಿ ಬಳಿಯ ಬಾರೆಬೈಲ್ ವಾರಾಹಿ ಪಂಜುರ್ಲಿ ಮತ್ತು ಜಾರಂದಾಯ ಬಂಟ ದೈವಸ್ಥಾನದ ವಾರ್ಷಿಕ ಉತ್ಸವ ಈ ಬಾರಿ ಎಪ್ರಿಲ್ 3ರಿಂದ ತೊಡಗಿದ್ದು ಎಪ್ರಿಲ್ 5ರ ಭಾನುವಾರ ರಾತ್ರಿ ಕೊನೆಯ ದಿನ ಪಂಜುರ್ಲಿ ದೈವದ ಉತ್ಸವ ನಡೆದಿತ್ತು. ಮಧ್ಯರಾತ್ರಿ ಹೊತ್ತಿಗೆ ಉತ್ಸವಕ್ಕೆ ಗಗ್ಗರ ಇಡುತ್ತಿದ್ದಂತೆ ಕಾಂತಾರ ಖ್ಯಾತಿಯ, ಒಂದೇ ಚಿತ್ರದ ಮೂಲಕ ದೇಶ- ವಿದೇಶದಲ್ಲಿ ಹೆಸರು ಮಾಡಿರುವ ರಿಷಬ್ ಶೆಟ್ಟಿ ದಂಪತಿ ಎಂಟ್ರಿ ಕೊಟ್ಟಿದ್ದಾರೆ. ಮನಸ್ಸಿನಲ್ಲಿ ಏನೋ ದುಗುಡ ಇಟ್ಟುಕೊಂಡೇ ಬಂದಿದ್ದ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಬಂದು ಉತ್ಸವ ನೋಡುತ್ತ ಕುಳಿತಿದ್ದಾರೆ.




ಮಕ್ಕಳಿಬ್ಬರು ಅತ್ತಿತ್ತ ಓಡುತ್ತ ಇರಿಸುಮುರಿಸು ಮಾಡುತ್ತಿದ್ದರೂ ನಸುಕಿನ ವರೆಗೂ ರಿಷಬ್ ಶೆಟ್ಟಿ ದಂಪತಿ ಕಾದು ಕುಳಿತಿದ್ದಾರೆ. ಉತ್ಸವದ ಕೊನೆಯಲ್ಲಿ ರಿಷಬ್ ಶೆಟ್ಟಿ ದಂಪತಿ ತಮ್ಮ ನೋವನ್ನು ದೈವದ ಮುಂದೆ ಹೇಳಿಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ದೈವ ಪಂಜುರ್ಲಿ, ಮುಖ ನೋಡಿದ ಮಾತ್ರಕ್ಕೇ ಏನೋ ಕಂಟಕ ಬಂದಿದೆ ಎನ್ನುವುದು ತಿಳಿಯುತ್ತದೆ. ಜಗತ್ತಿನೆಲ್ಲೆಡೆ ನಿನಗೆ ಶತ್ರುಗಳಿದ್ದಾರೆ, ಹಾಗಂತ ಧೃತಿಗೆಡಬೇಡ. ನಂಬಿದವರ ಕೈಬಿಡಲ್ಲ ಈ ಪಂಜುರ್ಲಿ. ನಿನ್ನ ಸಂಸಾರ (ಚಿತ್ರ ತಂಡ) ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನೀನು ಎಣಿಸಿದ ಕಾರ್ಯ ಫಲ ನೀಡದಂತೆ ನಿನ್ನ ಜೊತೆಗಿದ್ದವರೇ ಕೇಡು ಬಗೆಯುತ್ತಿದ್ದಾರೆ. ಅದು ಯಾರೆಂದು ನನಗೆ ತಿಳಿದಿದೆ, ಹಾಗಂತ ಈ ಹೊತ್ತಿನಲ್ಲಿ ಅದನ್ನು ಹೇಳುವುದು ಸರಿಯಾಗಲ್ಲ...
ನನ್ನ ಸಂಸಾರ ದೊಡ್ಡದು, ಕಷ್ಟ ಬಂದಿದೆಯೆಂದು ಬಂದಿದ್ದೀಯಾ.. ನೀನು ನಂಬಿದ ದೈವ ನಿನ್ನ ಕೈಬಿಡಲ್ಲ ಎಂದು ಹೇಳುತ್ತ ಶಕುನ ನೋಡುವುದಕ್ಕಾಗಿ ಹಿಂಗಾರ ಹೂವನ್ನು ಕೈಯಲ್ಲಿ ಒಂದು ಹಿಡಿಯಷ್ಟು ಮುರಿದುಕೊಂಡು ಮೇಲಕ್ಕೆಸೆದು ಮತ್ತೆ ಅದೇ ಕೈಯಲ್ಲಿ ಹಿಡಿದು ಬಾಳೆ ಎಲೆಯ ಮೇಲೆ ಎರಚಿತು. ಉಪಸ್ಥಿತಿಯಿದ್ದ ಅರ್ಚಕರಲ್ಲಿ ಅದರಲ್ಲಿ ಬಿದ್ದ ಎಸಲುಗಳನ್ನು ಎಣಿಸುವಂತೆ ಹೇಳಿ ಅದರಲ್ಲಿ ಏನೋ ಅಪಶಕುನ ಕಂಡಿದ್ದನ್ನು ಹೇಳಿತು. ಎರಡು ಬಾರಿಯೂ ಅದೇ ರೀತಿ ಬಂದಿದ್ದರಿಂದ ಉದಾಸೀನ ಬೇಡ, ಆಪತ್ತು ಇದೆ, ಹಿಡಿದ ಕೆಲಸ ಮಾಡು, ಜಾಗ್ರತೆಯಲ್ಲಿರು, ದೈವದ ಆಶೀರ್ವಾದ ಇದೆ, ಐದು ತಿಂಗಳ ಗಡುವು ಕೊಡುತ್ತೇನೆ, ಎಲ್ಲವನ್ನೂ ಸರಿ ಮಾಡುತ್ತೇನೆ ಎಂದು ಅಭಯವನ್ನೂ ನೀಡಿತು ಪಂಜುರ್ಲಿ ದೈವ.
ಕೊನೆಗೆ, ನೀನು ನನಗೇನು ಕೊಡುತ್ತೀಯಾ ಎಂದು ಪ್ರತಿಯಾಗಿ ದೈವ ಕೇಳಿದ್ದು ನೀನು ಕೇಳಿದ್ದನ್ನು ಕೊಡುತ್ತೇನೆ ಎಂದು ರಿಷಬ್ ಹೇಳಿದ್ದಾರೆ. ಹರಕೆ ಸೇವೆ ಕೊಡುತ್ತೇನೆ ಎಂದು ಹೇಳಿದ್ದಕ್ಕೆ, ಈ ಕ್ಷೇತ್ರಕ್ಕೆ ನೆನಪಿಡುವಂಥ ಏನಾದ್ರೂ ಕೊಡಬೇಕು ಎಂದು ಪಂಜುರ್ಲಿ ದೈವ ಹೇಳಿತು. ಅದಕ್ಕೆ ಜೊತೆಗಿದ್ದ ರಿಷಬ್ ಪತ್ನಿ, ನೀವು ಹೇಳಿದ್ದನ್ನು ಮಾಡಿ ಕೊಡುತ್ತೇವೆ, ಹೇಳಿ ಎಂದು ಕೇಳಿಕೊಂಡರು. ಈ ಕ್ಷೇತ್ರವನ್ನು ಜೀರ್ಣೋದ್ಧಾರ ಮಾಡಬೇಕೆಂಬ ಇಚ್ಛೆ ಭಕ್ತರಲ್ಲಿದೆ. ನಾನಾ ಕಾರಣದಿಂದ ಅದು ಈಡೇರುತ್ತಿಲ್ಲ. ಜೀರ್ಣೋದ್ಧಾರ ಕಾರ್ಯಕ್ಕಾಗಿ 60 ವರ್ಷಗಳಿಂದ ಭಕ್ತರು ಶ್ರಮಿಸುತ್ತಿದ್ದಾರೆ. ಈ ಕೆಲಸವನ್ನು ಕೈಯಾರೆ ನಿಂತು ಮಾಡಿಸಬೇಕು ಎಂದು ದೈವ ಕೇಳಿಕೊಂಡಿದ್ದಕ್ಕೆ ರಿಷಬ್ ಶೆಟ್ಟಿ ಒಪ್ಪಿಗೆ ನೀಡಿದ್ದಾರೆ. ಕೊನೆಯಲ್ಲಿ ರಿಷಬ್ ದಂಪತಿಗೆ ಪಂಜುರ್ಲಿ ದೈವ ಗಂಧ ಪ್ರಸಾದವನ್ನು ಕೊಟ್ಟು ಜಾಗ್ರತೆ ಇರು ಎಂದು ಹೇಳಿ ಹರಸಿತು.
ಈಗಾಗಲೇ ಕಾಂತಾರ ಎರಡನೇ ಭಾಗದ ಚಿತ್ರೀಕರಣ ಕೊನೆ ಹಂತದಲ್ಲಿದ್ದು, ಇದೇ ವರ್ಷದ ಕೊನೆಯಲ್ಲಿ ಚಿತ್ರವನ್ನು ತೆರೆಗೆ ತರುತ್ತೇವೆ ಎಂದು ಇತ್ತೀಚೆಗೆ ರಿಷಬ್ ಶೆಟ್ಟಿ ಹೇಳಿಕೊಂಡಿದ್ದರು. ಆದರೆ ಅಷ್ಟರಲ್ಲೇ ಏನೋ ಆಪತ್ತು ಎದುರಾದ ರೀತಿ ರಿಷಬ್ ದಂಪತಿ ಪಂಜುರ್ಲಿ ದೈವದ ಬಳಿಗೆ ಓಡೋಡಿ ಬಂದಿದ್ದು ಕಾಂತಾರ ಸಿನಿಮಾಕ್ಕೆ ವಿಘ್ನ ಎದುರಾಗಿದ್ಯಾ ಎನ್ನುವ ಕುತೂಹಲದ ಪ್ರಶ್ನೆಗಳು ಎದ್ದಿವೆ.