ನವದೆಹಲಿ :ಭಾರತ- ಪಾಕ್ ಸಂಬಂಧಕ್ಕೆ ಬ್ರೇಕ್ ; ಸಿಂಧು ಜಲ ಒಪ್ಪಂದ ರದ್ದು, ಪಾಕಿಸ್ತಾನಿಯರಿಗೆ ಪ್ರವೇಶ ನಿಷೇಧ, ದೇಶದಲ್ಲಿದ್ದವರಿಗೆ ಹೊರಹೋಗಲು 48 ಗಂಟೆ ಗಡುವು, ಹೈಕಮಿಷನ್ ಅಧಿಕಾರಿಗಳ ಹುದ್ದೆಯೇ ರದ್ದು.

ನವದೆಹಲಿ: ಜಮ್ಮು ಕಾಶ್ಮೀರ ಭಯೋತ್ಪಾದಕ ದಾಳಿ ಬೆನ್ನಲ್ಲೇ ಸೌದಿ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಭಾರತಕ್ಕೆ ಆಗಮಿಸಿದ್ದು ತುರ್ತಾಗಿ ಹಿರಿಯ ಅಧಿಕಾರಿಗಳು ಮತ್ತು ಸಂಪುಟ ಸಹೋದ್ಯೋಗಿಗಳ ಸಭೆ ನಡೆಸಿದ್ದಾರೆ. ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡವಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದು, ಎರಡು ದೇಶಗಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇದರಂತೆ, ಪಾಕಿಸ್ತಾನಿಯರಿಗೆ ಭಾರತ ಪ್ರವೇಶವನ್ನು ನಿಷೇಧಿಸಿದ್ದಾರೆ.
ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಇತರ ಹಿರಿಯ ಸಚಿವರು ಭಾಗವಹಿಸಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದ ಕಾರ್ಯತಂತ್ರದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ.
ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ತನ್ನ ಬೆಂಬಲವನ್ನು ಸಂಪೂರ್ಣ ನಿಲ್ಲಿಸುವ ವರೆಗೆ 1960ರ ಸಿಂಧೂ ಜಲ ಒಪ್ಪಂದವನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲಾಗುತ್ತದೆ. ಇದಲ್ಲದೆ, ಉಭಯ ದೇಶಗಳ ನಡುವಿನ ರಸ್ತೆ ಸಂಚಾರದ ಅಟ್ಟಾರಿ- ವಾಘಾ ಚೆಕ್ ಪೋಸ್ಟ್ ಮುಚ್ಚಲಾಗುವುದು. ಭಾರತಕ್ಕೆ ಪಾಕಿಸ್ತಾನಿ ಪ್ರಜೆಗಳಿಗೆ ಪ್ರವೇಶ ರದ್ದು. ಪಾಕಿಸ್ತಾನೀಯರಿಗೆ ವೀಸಾ ನೀಡುವುದಿಲ್ಲ. ಈಗಾಗಲೇ ಭಾರತಕ್ಕೆ ಬಂದಿರುವ ಪಾಕಿಸ್ತಾನಿ ಪ್ರಜೆಗೆ ಭಾರತವನ್ನು ತೊರೆಯಲು 48 ಗಂಟೆಗಳ ಕಾಲಾವಕಾಶ ಇರುತ್ತದೆ.
ನವದೆಹಲಿಯ ಪಾಕಿಸ್ತಾನಿ ಹೈಕಮಿಷನ್‌ನಲ್ಲಿರುವ ರಕ್ಷಣಾ, ಮಿಲಿಟರಿ, ನೌಕಾ ಮತ್ತು ವಾಯು ಸಲಹೆಗಾರರು ಭಾರತವನ್ನು ಬಿಟ್ಟು ಹೋಗುವಂತೆ ಸೂಚಿಸಲಾಗಿದೆ. ಭಾರತದ ಕಡೆಯಿಂದ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಇರಿಸಿರುವ ಭಾರತೀಯ ಹೈಕಮಿಷನ್ ಕಚೇರಿಯ ರಕ್ಷಣಾ, ನೌಕಾಪಡೆ ಮತ್ತು ವಾಯು ಸಲಹೆಗಾರರನ್ನು ಭಾರತ ವಾಪಾಸ್ ಕರೆಸಿಕೊಳ್ಳಲಿದೆ.