ಮಂಗಳೂರು: ಜೈಲಿನ ಅಧಿಕಾರಿಗಳು ಸರಿಯಿದ್ದರೆ ಜಾಮರ್ ಅಗತ್ಯವಿದೆಯೇ? ಜಾಮರ್ ಸಮಸ್ಯೆ ಸರಿಪಡಿಸದಿದ್ದರೆ ಎಪ್ರಿಲ್ 4ರಂದು ಕಿತ್ತು ಬಿಸಾಡುತ್ತೇವೆ ; ಶಾಸಕ ವೇದವ್ಯಾಸ ಕಾಮತ್ ಎಚ್ಚರಿಕೆ.
ಮಂಗಳೂರು : ಮಂಗಳೂರು ನಗರ ಮಧ್ಯದ ಕೊಡಿಯಾಲಬೈಲಿನ ಜೈಲಿನಲ್ಲಿ ಜಾಮರ್ ಅಳವಡಿಸಿರುವುದರಿಂದ ಸುತ್ತಮುತ್ತಲಿನ ಸರಕಾರಿ, ಖಾಸಗಿ ಕಚೇರಿ ಇನ್ನಿತರ ಕೆಲಸ ಮಾಡುತ್ತಿರುವವರು ಮತ್ತು ಇತರ ಸಾರ್ವಜನಿಕರಿಗೆ ತೀವ್ರ ಸಮಸ್ಯೆ ಎದುರಾಗಿದೆ. ಇದರ ಬಗ್ಗೆ ಈಗಾಗಲೇ ಬಂಧೀಖಾನೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದೇವೆ. ಇನ್ನು ಮೂರು ದಿನ ಸಮಯ ಕೊಡುತ್ತೇವೆ, ಜಾಮರ್ ಯಂತ್ರ ಸರಿಯಾಗದಿದ್ದರೆ ಜೈಲಿನ ಒಳಗೆ ನುಗ್ಗಿ ಜಾಮರ್ ಯಂತ್ರವನ್ನು ಕಿತ್ತು ಬಿಸಾಕುತ್ತೇವೆ ಎಂದು ಶಾಸಕ ವೇದವ್ಯಾಸ ಕಾಮತ್ ಎಚ್ಚರಿಕೆ ನೀಡಿದ್ದಾರೆ.ಈ ಬಗ್ಗೆ ಹೇಳಿಕೆ ನೀಡಿರುವ ಶಾಸಕ ಕಾಮತ್, ಜೈಲಿನಲ್ಲಿ ಸಿಬಂದಿ ಮತ್ತು ಅಧಿಕಾರಿಗಳು ತಮ್ಮ ಕೆಲಸ ಸರಿಯಾಗಿ ಮಾಡಿದರೆ ಕೈದಿಗಳಿಗೆ ಮೊಬೈಲ್ ಹೇಗೆ ಸಿಗುತ್ತದೆ. ಅವರ ಕೈಗೆ ಮೊಬೈಲ್ ಕೊಡುವುದು ಯಾರೆಂದು ಪ್ರಶ್ನೆ ಬರುತ್ತದೆ. ಇವರು ಸರಿಯಾಗಿ ಕೆಲಸ ಮಾಡದಿರುವುದರಿಂದಲೇ ಜಾಮರ್ ಅಳವಡಿಸುವ ಪ್ರಮೇಯ ಬಂದಿದೆ. ಆದರೆ ಯಾವ ಜಾಮರ್ ಇದ್ದರೂ ಅದನ್ನು ಜೈಲಿನ ಒಳಗಡೆ ಸೀಮಿತಗೊಳಿಸಿ, ಸಾರ್ವಜನಿಕರಿಗೆ ತೊಂದರೆ ಕೊಡಬೇಡಿ ಎಂದು ಜೈಲು ಅಧಿಕಾರಿಗಳಿಗೆ ಮನವಿ ಕೊಟ್ಟಿದ್ದೇವೆ. ಜಿಲ್ಲಾಡಳಿತ, ಪೊಲೀಸ್ ಕಮಿಷನರ್ ಅವರಿಗೂ ಮನವಿ ನೀಡಿದ್ದೇವೆ. ರಾಜ್ಯ ಸರಕಾರದ ಉನ್ನತ ಅಧಿಕಾರಿಗಳಿಗೂ ತಿಳಿಸಿದ್ದೇವೆ.
ನಗರ ಮಧ್ಯ ಇರುವ ಜೈಲಿನಲ್ಲಿ ಏಕಾಏಕಿ ಜಾಮರ್ ಅಳವಡಿಸಿ ಜನರಿಗೆ ತೊಂದರೆ ಕೊಡುವುದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ನಾವು ಎಪ್ರಿಲ್ 4ರಂದು ಬಿಜೆಪಿ ಕಾರ್ಯಕರ್ತರು ಸೇರಿಕೊಂಡು ರಾಸ್ತಾರೋಕೊ ನಡೆಸಿ ಜೈಲಿಗೆ ನುಗ್ಗುತ್ತೇವೆ, ಜಾಮರ್ ಯಂತ್ರವನ್ನು ಕಿತ್ತು ಬಿಸಾಕುತ್ತೇವೆ ಎಂದು ಶಾಸಕ ಕಾಮತ್ ಹೇಳಿದ್ದಾರೆ. ಕೈದಿಗಳಿಗೆ ಮೊಬೈಲ್ ನೀಡುವುದು, ಅದನ್ನು ಕಂಟ್ರೋಲ್ ಮಾಡಕ್ಕಾಗದ ಸ್ಥಿತಿಯಾಗಿರುವುದಕ್ಕೆ ಕಾಂಗ್ರೆಸ್ ಆಡಳಿತ ಕಾರಣ. ಇವರಿಂದಾಗಿಯೇ ಕೈದಿಗಳು ಜೈಲಿನಲ್ಲಿದ್ದುಕೊಂಡೇ ಮೊಬೈಲ್ ನಲ್ಲಿ ಧಮಕಿ ಹಾಕುವ ಸ್ಥಿತಿ ಬಂದಿದೆ. ಅದನ್ನು ನಿಯಂತ್ರಣ ಮಾಡಲಾಗದ ಅಧಿಕಾರಿ ವರ್ಗ ಈಗ ಜೈಲಿನೊಳಗೆ ಜಾಮರ್ ಹಾಕಿದ್ದಾರೆ ಎಂದು ಕಾಮತ್ ಹೇಳಿದ್ದಾರೆ.