ರಾಜಸ್ತಾನ: ಮದುವೆ ಮನೆಯಿಂದ ಮರಳುತ್ತಿದ್ದ ಬಸ್‌ಗೆ ಟ್ರಕ್ ಡಿಕ್ಕಿ, 39 ಮಂದಿಗೆ ಗಾಯ, ಐವರು ಗಂಭೀರ, ತನ್ನ ಮುಂದಿದ್ದ ಕಾರನ್ನು ತಪ್ಪಿಸಲು ಹೋಗಿ, ಎದುರುಗಡೆಯಿಂದ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಟ್ರಕ್.
ರಾಜಸ್ಥಾನ: ವೇಗವಾಗಿ ಬಂದ ಟ್ರಕ್ಕೊಂದು ಕಾರನ್ನು ತಪ್ಪಿಸಲು ಹೋಗಿ ಎದುರಿನಿಂದ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಘಟನೆ ರಾಜಸ್ಥಾನದ ರಾಜ್ಸಮಂದ್‌ನ ನೆಗಾಡಿಯಾ ಟೋಲ್ ಬಳಿ ಬುಧವಾರ ಸಂಜೆ ನಡೆಯಿತು. ಬಸ್‌ನಲ್ಲಿ ಮದುವೆಗೆ ತೆರಳಿದ್ದ ಅತಿಥಿಗಳಿದ್ದು, 39 ಜನರು ಗಾಯಗೊಂಡಿದ್ದಾರೆ. ಈ ಪೈಕಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉದಯಪುರ ನಿವಾಸಿ ಮನೋಜ್ ನಾಯಕ್ ಎಂಬವರ ವಿವಾಹ ಕಾರ್ಯಕ್ರಮ ಮುಗಿಸಿ ಆದರ್ಶ ನಗರ ವಿಶ್ವವಿದ್ಯಾಲಯ ರಸ್ತೆಯಿಂದ ಬಸ್ ತಾರಖೇಡಾಗೆ ಹೊರಟಿತ್ತು. ಬಸ್ ನೆಗಾಡಿಯಾ ಟೋಲ್ ಬಳಿ ತಲುಪುತ್ತಿದ್ದಂತೆ ಮುಂಭಾಗದಿಂದ ವೇಗವಾಗಿ ಬರುತ್ತಿದ್ದ ಟ್ರಕ್ ನಿಯಂತ್ರಣ ಕಳೆದುಕೊಂಡು ನೇರವಾಗಿ ಬಸ್‌ಗೆ ಡಿಕ್ಕಿಯಾಗಿದೆ. ಬಸ್ನಲ್ಲಿದ್ದ ಅನೇಕ ಜನರು 10 ರಿಂದ 15 ಅಡಿ ಎತ್ತರಕ್ಕೆ ಹಾರಿ ರಸ್ತೆಗೆ ಬಿದ್ದರು ಎಂದು ದೆಲ್ವಾರಾ ಠಾಣೆಯ ಎಸ್ಪಿ ವಿಜೇಂದ್ರ ಸಿಂಗ್ ತಿಳಿಸಿದ್ದಾರೆ.
ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ: ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಲ್ಲಿ ಟ್ರಕ್ ಇದ್ದಕ್ಕಿದ್ದಂತೆ ದಿಕ್ಕು ಬದಲಾಯಿಸಿ ಬಸ್‌ಗೆ ಡಿಕ್ಕಿ ಹೊಡೆದಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಬಸ್ನ ಒಂದು ಬದಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಟ್ರಕ್ನ ಕ್ಯಾಬಿನ್ ಜಖಂಗೊಂಡಿದೆ. ಟ್ರಕ್ ಚಾಲಕ ಕ್ಯಾಬಿನ್ನಲ್ಲಿ ಸಿಲುಕಿಕೊಂಡಿದ್ದ. ಅರ್ಧ ಗಂಟೆಯ ಪ್ರಯತ್ನದ ಬಳಿಕ ಕ್ರೇನ್ ಸಹಾಯದಿಂದ ಆತನನ್ನು ಹೊರತೆಗೆಯಲಾಯಿತು.
ಸ್ಥಳೀಯರು ಹಾಗೂ ದೆಲ್ವಾರಾ, ಶ್ರೀನಾಥ್ಜಿ ದೇವಸ್ಥಾನ, ಮತ್ತು ನಾಥದ್ವಾರ ಠಾಣೆಯ ಪೊಲೀಸರ ಸಹಾಯದಿಂದ ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಿಂದಾಗಿ ಕೆಲಹೊತ್ತು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಸಮಸ್ಯೆ ಅನುಭವಿಸಿದರು.
ವರ ಮನೋಜ್ ಹಾಗೂ ಅವರ ಕಿರಿಯ ಸಹೋದರ ಚಂದ್ರಪ್ರಕಾಶ್ ಕಾರಿನಲ್ಲಿ ಮುಂದೆ ಸಾಗುತ್ತಿದ್ದ ಕಾರಣ ಅಪಘಾತದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.