ಮಂಗಳೂರು:ಕುಡುಪು ಬಳಿ ಸಂಶಯಾಸ್ಪದ ಸಾವು ಪ್ರಕರಣಕ್ಕೆ ತಿರುವು ; ಕ್ರಿಕೆಟ್ ಆಡುತ್ತಿದ್ದ ಗುಂಪಿನಿಂದ ಹಲ್ಲೆ ಕೃತ್ಯ, ಹೊಟ್ಟೆಯೊಳಗೆ ರಕ್ತಸ್ರಾವದಿಂದ ಸಾವು, ಸಂತ್ರಸ್ತನ ಗುರುತು ಪತ್ತೆಗೆ ತಂಡ ರಚನೆ, 15 ಮಂದಿ ಬಂಧನ.!

ಮಂಗಳೂರು : ನಗರದ ಕುಡುಪು ದೇವಸ್ಥಾನದ ಬಳಿಯ ಮೈದಾನದಲ್ಲಿ ವ್ಯಕ್ತಿಯೊಬ್ಬ ಸಂಶಯಾಸ್ಪದ ರೀತಿಯಲ್ಲಿ ಮೃತಪಟ್ಟ ಪ್ರಕರಣ ನಾನಾ ರೀತಿಯ ಶಂಕೆಗೀಡಾದ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದು ಗುಂಪು ಹಲ್ಲೆಯಿಂದ ಆಗಿರುವ ಕೃತ್ಯವೆಂದು ಕೇಸು ದಾಖಲಿಸಿದ್ದಲ್ಲದೆ, 15 ಮಂದಿಯನ್ನು ಬಂಧಿಸಿದ್ದಾರೆ.
ಕುಡುಪು ಬಳಿಯ ಭಟ್ರ ಕಲ್ಲುರ್ಟಿ ದೈವಸ್ಥಾನದ ಬಳಿಯ ಮೈದಾನದಲ್ಲಿ ಎಪ್ರಿಲ್ 27ರಂದು ಕ್ರಿಕೆಟ್ ಪಂದ್ಯಾಟ ನಡೆದಿತ್ತು. ಅಪರಾಹ್ನ 2 ಗಂಟೆ ವೇಳೆಗೆ ಉತ್ತರ ಭಾರತ ಮೂಲದ ಕಾರ್ಮಿಕ ಎನ್ನಲಾದ ಯುವಕ ಸ್ಥಳಕ್ಕೆ ಬಂದಿದ್ದ. ಸ್ಥಳದಲ್ಲಿದ್ದ ಯುವಕರ ಜೊತೆಗೆ ವಾಗ್ವಾದ ಏರ್ಪಟ್ಟಿದ್ದು ಬಳಿಕ ಯುವಕರು ಸೇರಿ ಥಳಿಸಿದ್ದಾರೆ ಎನ್ನಲಾಗಿತ್ತು. ಯುವಕ ರಾತ್ರಿ ವೇಳೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಘಟನೆ ಹಿನ್ನೆಲೆಯಲ್ಲಿ ಸಂಶಯಾಸ್ಪದ ಸಾವು ಎಂದಷ್ಟೇ ಗ್ರಾಮಾಂತರ ಠಾಣೆ ಪೊಲೀಸರು ಕೇಸು ದಾಖಲಿಸಿದ್ದರು. ಆದರೆ ಗುಂಪು ಹಲ್ಲೆ ಆಗಿರುವ ಬಗ್ಗೆ ವದಂತಿಗಳು ಸೃಷ್ಟಿಯಾಗಿದ್ದವು. ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿಬಂದಿತ್ತು.


ಶವದ ಪೋಸ್ಟ್ ಮಾರ್ಟಂ ವರದಿಯಲ್ಲಿ ಬೆನ್ನಿನ ಭಾಗಕ್ಕೆ ಬಿದ್ದ ತೀವ್ರ ಏಟಿನಿಂದ ಹೊಟ್ಟೆಯೊಳಗೆ ಉಂಟಾದ ರಕ್ತಸ್ರಾವ ಮತ್ತು ಅದರಿಂದಾದ ಶಾಕ್, ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಸಾವು ಸಂಭವಿಸಿದ್ದಾಗಿ ವೈದ್ಯರು ತಿಳಿಸಿದ್ದರು. ಇದೇ ವೇಳೆ, ಸ್ಥಳೀಯರ ಮಾಹಿತಿ ಆಧರಿಸಿ ತನಿಖೆ ನಡೆಸಿದ ಪೊಲೀಸರು 15 ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೆ, ಕೃತ್ಯದಲ್ಲಿ 25 ಮಂದಿಯಷ್ಟು ಭಾಗಿಯಾಗಿದ್ದಾರೆ. ಕೈಯಿಂದ ಮತ್ತು ಕಟ್ಟಿಗೆಯಿಂದ ಯದ್ವಾತದ್ವಾ ಹಲ್ಲೆ ನಡೆಸಿರುವುದು ಮತ್ತು ಕಾಲಿನಿಂದ ತುಳಿದು ಹಲ್ಲೆ ಮಾಡಿರುವುದು ತನಿಖೆಯಲ್ಲಿ ಕಂಡುಬಂದಿದೆ. ಕೆಲವರು ತಡೆದರೂ ನಿರಂತರವಾಗಿ ಗುಂಪು ಸೇರಿ ಹಲ್ಲೆ ನಡೆಸಿದ್ದರಿಂದ ಯುವಕನ ಸಾವು ಸಂಭವಿಸಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕುಲಶೇಖರ ನಿವಾಸಿ ದೀಪಕ್ ಕುಮಾರ್ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಘಟನೆ ಸಂಬಂಧಿಸಿ ಸಚಿನ್ (26), ದೇವದಾಸ್ (50), ಮಂಜುನಾಥ್(32), ಸಾಯಿದೀಪ್ (29), ನಿತೇಶ್ ಕುಮಾರ್ (33), ದೀಕ್ಷಿತ್ ಕುಮಾರ್ (32), ಸಂದೀಪ್ (23), ವಿವಿಯನ್ ಆಲ್ವಾರಿಸ್ (41), ಶ್ರೀದತ್ತ (32), ರಾಹುಲ್ (23), ಪ್ರದೀಪ್ ಕುಮಾರ್ (35), ಮನೀಶ್ ಶೆಟ್ಟಿ(21), ಧನುಷ್ (31), ದೀಕ್ಷಿತ್ (27), ಕಿಶೋರ್ ಕುಮಾರ್ (37) ಎಂಬವರನ್ನು ಬಂಧಿಸಲಾಗಿದೆ. ಇವರೆಲ್ಲ ಕುಡುಪು, ತಿರುವೈಲ್ ಆಸುಪಾಸಿನ ನಿವಾಸಿಗಳು.

ಹಲ್ಲೆಗೆ ಕಾರಣದ ಬಗ್ಗೆ ಇನ್ನಷ್ಟೆ ತಿಳಿಯಬೇಕಿದ್ದು ಆರೋಪಿಗಳ ವಿಚಾರಣೆ ನಂತರ ಗೊತ್ತಾಗಬೇಕು. ಮೇಲ್ನೋಟಕ್ಕೆ ಇವರ ನಡುವೆ ಸಣ್ಣ ವಿಚಾರಕ್ಕೆ ಗಲಾಟೆ ನಡೆದಿದ್ದು ಸಚಿನ್ ಎಂಬಾತ ಮೊದಲು ಹಲ್ಲೆ ನಡೆಸಿದ್ದಾನೆ. ಆನಂತರ ಇತರರು ಸೇರಿ ಹಲ್ಲೆ ನಡೆಸಿದ್ದಾರೆ. ಹಲ್ಲೆ ಬಳಿಕ ಸಂತ್ರಸ್ತ ವ್ಯಕ್ತಿ ತನ್ನ ಪಾಡಿಗೆ ನಡೆದುಕೊಂಡು ಹೋಗಿದ್ದ. ಹಲ್ಲೆಗೈದ ಯುವಕರು ತಮ್ಮಷ್ಟಕ್ಕೆ ತೆರಳಿದ್ದರು ಎಂದು ಕಮಿಷನರ್ ತಿಳಿಸಿದ್ದಾರೆ. ಸಂತ್ರಸ್ತ ವ್ಯಕ್ತಿಯ ಗುರುತು ಇನ್ನೂ ಪತ್ತೆ ಆಗಿಲ್ಲ. ಆತನ ಬಗ್ಗೆ ಉತ್ತರ ಭಾರತದ ಕಾರ್ಮಿಕರಲ್ಲಿ ಮಾಹಿತಿ ಕೇಳಲಾಗಿದೆ. ಎಲ್ಲಿಂದ ಬಂದಿದ್ದ, ಆತನ ಜೊತೆಗಿದ್ದವರು ಯಾರೆಂದು ಸಿಸಿಟಿವಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಇದಕ್ಕಾಗಿ ತಂಡವನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.