ಚಿತ್ರದುರ್ಗ : 15ಕ್ಕೂ ಹೆಚ್ಚು ಬಾರಿ ಪಲ್ಟಿಯಾದ ಕಾರು, ತಂದೆ - ಮಕ್ಕಳಿಬ್ಬರು ಸಾವು.

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಬೊಮ್ಮಕ್ಕನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 150Aರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರೊಂದು ನಿಯಂತ್ರಣ ಕಳೆದುಕೊಂಡು 15ಕ್ಕೂ ಹೆಚ್ಚು ಬಾರಿ ಪಲ್ಟಿಯಾದ ಪರಿಣಾಮ ಮೂವರು ಮೃತಪಟ್ಟಿದ್ದಾರೆ. ಮಂಗಳವಾರ ಬೆಳಗ್ಗೆ ಜರುಗಿದ ದುರ್ಘಟನೆಯ ವಿಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಚಾಲಕ ಮೌಲಾ ಅಬ್ದುಲ್ (35) ಹಾಗೂ ಆತನ ಇಬ್ಬರು ಪುತ್ರರು ಮೃತಪಟ್ಟಿದ್ದಾರೆ. ಇತರ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಾದಗಿರಿ ಜಿಲ್ಲೆಯವರಾದ ಕುಟುಂಬ ಬೆಂಗಳೂರಿನಿಂದ ತಮ್ಮ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ವೀಡಿಯೊದಲ್ಲಿ, ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು, 15ಕ್ಕೂ ಅಧಿಕ ಬಾರಿ ತಡೆರಹಿತವಾಗಿ ಪಲ್ಟಿಯಾಗುವುದನ್ನು ಕಾಣಬಹುದು. ರಾಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.