ನವದೆಹಲಿ:14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮೆಹುಲ್ ಚೋಕ್ಸಿ ಕಡೆಗೂ ಅರೆಸ್ಟ್ ; ಬೆಲ್ಜಿಯಂನಲ್ಲಿ ಪೊಲೀಸರ ಬಲೆಗೆ.

ನವದೆಹಲಿ : ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 1400 ಕೋಟಿ ರೂ. ವಂಚನೆ ಎಸಗಿ ದೇಶ ಬಿಟ್ಟು ಪರಾರಿಯಾಗಿದ್ದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂನಲ್ಲಿ ಬಂಧಿಸಲಾಗಿದೆ. ಭಾರತದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಮನವಿ ಮೇರೆಗೆ ಬೆಲ್ಜಿಯಂ ಪೊಲೀಸರು ಚೋಕ್ಸಿ ಅವರನ್ನು ಬಂಧಿಸಿದ್ದಾರೆ.
ವಜ್ರದ ಉದ್ಯಮಿ ಮೆಹುಲ್ ಚೋಕ್ಸಿ ಗೀತಾಂಜಲಿ ಗ್ರೂಪ್‌ನ ಮಾಲೀಕರಾಗಿದ್ದು 2011ರಿಂದ ಸಾಲದ ಹೆಸರಿನಲ್ಲಿ ಪಂಜಾಬ್ ನ್ಯಾಶನಲ್ ಬ್ಯಾಂಕ್ ನಿಂದ ನಿರಂತರ ಸಾಲ ಪಡೆದು ವಂಚನೆ ಎಸಗಿದ್ದರು. 2018ರಲ್ಲಿ 13 ಸಾವಿರ ಕೋಟಿ ಸಾಲದ ವಿಚಾರ ಹಗರಣದ ರೂಪ ಪಡೆಯುತ್ತಿದ್ದಂತೆ ದೇಶದಿಂದ ಪಲಾಯನ ಮಾಡಿದ್ದರು. ಅವರನ್ನು ಬಂಧನ ಮಾಡಬೇಕೆಂದು ಬಹಳಷ್ಟು ಪ್ರಯತ್ನಗಳು ನಡೆದಿದ್ದವು. ಇದೀಗ ಮುಂಬೈ ನ್ಯಾಯಾಲಯವು 2018 ಮೇ 23 ಮತ್ತು 2021 ಜೂನ್ 15 ರಂದು ಹೊರಡಿಸಿದ ಎರಡು ಅರೆಸ್ಟ್ ವಾರಂಟ್ ಆಧಾರದಲ್ಲಿ ಬೆಲ್ಜಿಯಂ ಪೊಲೀಸರು ಚೋಕ್ಸಿಯನ್ನು ಬಂಧಿಸಿದ್ದಾರೆ.
ವಿದೇಶಕ್ಕೆ ಹಾರಿದ್ದ 65 ವರ್ಷದ ಮೆಹುಲ್ ಚೋಕ್ಸಿ ಆಂಟಿಗುವಾ ಮತ್ತು ಬಾರ್ಬುಡಾ ದೇಶಕ್ಕೆ ತೆರಳಿ, ಅಲ್ಲಿನ ಪೌರತ್ವವನ್ನು ಪಡೆದಿದ್ದರು. ಭಾರತದಲ್ಲಿ ನಡೆದ ಬ್ಯಾಂಕ್ ಹಗರಣದಲ್ಲಿ ಚೋಕ್ಸಿ ಜೊತೆಗೆ ನೀರವ್ ಮೋದಿ ಕೂಡ ಆರೋಪಿಯಾಗಿದ್ದ. ಆತ ಲಂಡನ್ನಲ್ಲಿ ತಲೆಮರೆಸಿಕೊಂಡಿದ್ದಾನೆ. ಚೋಕ್ಸಿ ಬೆಲ್ಜಿಯಂ ತಲುಪುತ್ತಲೇ ಸಿಬಿಐ ಮತ್ತು ಇಡಿ ಅಧಿಕಾರಿಗಳು ಚೋಕ್ಸಿ ಗಡೀಪಾರು ಕೋರಿ 3 ತಿಂಗಳ ಹಿಂದೆ ಬೆಲ್ಜಿಯಂ ಸರಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಬೆಲ್ಜಿಯಂನಲ್ಲಿ ಕುಣಿಕೆ ಬಿಗಿಯಾಗುತ್ತಿರುವುದನ್ನು ತಿಳಿದ ಚೋಕ್ಸಿ ಇದರ ನಡುವೆ ಸ್ವಿಟ್ಜರ್ಲೆಂಡ್‌ಗೆ ಪಲಾಯನ ಮಾಡಲು ಯೋಜಿಸುತ್ತಿದ್ದ. ಆದರೆ ಭಾರತೀಯ ಸಂಸ್ಥೆಗಳ ಕೋರಿಕೆ ಮೇರೆಗೆ, ಬೆಲ್ಜಿಯಂ ಆಡಳಿತವು ಅವರನ್ನು ಬಂಧಿಸಿತು.
ಬೆಲ್ಜಿಯಂನಲ್ಲಿ ಬಂಧನಕ್ಕೆ ನಂತರ ಮೆಹುಲ್ ಚೋಕ್ಸಿ ಅನಾರೋಗ್ಯದ ಕಾರಣ ಅಲ್ಲಿನ ಕೋರ್ಟಿನಲ್ಲಿ ಜಾಮೀನು ಕೋರಿದ್ದಾರೆ. ಚೋಕ್ಸಿ ಚಿಕಿತ್ಸೆಗಾಗಿ ಆಂಟಿಗುವಾ ಮತ್ತು ಬಾರ್ಬುಡಾದಿಂದ ಬೆಲ್ಜಿಯಂಗೆ ಬಂದಿದ್ದರು. ಪತ್ನಿ ಪ್ರೀತಿ ಚೋಕ್ಸಿ ಜೊತೆಗೆ ವಾಸಿಸುತ್ತಿದ್ದರು ಎಂದು ಚೋಕ್ಸಿ ಪರ ವಕೀಲರು ತಿಳಿಸಿದ್ದಾರೆ.