ಬೆಂಗಳೂರು:ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿದ್ದವು, ಈಗ 180 ಜಾತಿಗಳನ್ನು ಸೇರಿಸಿದ್ದಾರೆ, ಇದು ಹೇಗೆ ಸಾಧ್ಯ ; ಮಾದಾರ ಪೀಠದ ಚೆನ್ನಯ್ಯ ಸ್ವಾಮೀಜಿ ಪ್ರಶ್ನೆ

ಬೆಂಗಳೂರು : ಜಾತಿ ಗಣತಿಯಲ್ಲಿ ಗೊಂದಲ ಇದ್ದಂತೆ ತೋರುತ್ತದೆ. ಪರಿಶಿಷ್ಟ ಜಾತಿಯಲ್ಲಿ ಹಿಂದೆ 101 ಜಾತಿಗಳು ಇದ್ದವು. ಆದರೆ ಈಗ 180 ಜಾತಿಗಳನ್ನು ಸೇರಿಸಿದ್ದಾರೆ. ಇದು ಹೇಗೆ ಸಾಧ್ಯ ಎಂದು ಚಿತ್ರದುರ್ಗ ಪೀಠದ ಮಾದಾರ ಚೆನ್ನಯ್ಯ ಸ್ವಾಮೀಜಿ ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಗಾದರೆ ಜಾತಿ ಗಣತಿಯಲ್ಲಿ ಸೇರ್ಪಡೆಗೊಂಡ ಜಾತಿಗಳು ಯಾವುದು, ಯಾರು ಅವರು? ಈ ಗೊಂದಲಗಳನ್ನ ಸರ್ಕಾರ ಸರಿಪಡಿಸಬೇಕು. ಜಾತಿಗಣತಿ ವರದಿಯನ್ನ ಸರ್ಕಾರ ಮರು ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.
ಬೇರೆ ಬೇರೆ ಸಮುದಾಯದವರು ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾರಿಗೂ ಅನ್ಯಾಯ ಆಗದಂತೆ ಸಾಮಾಜಿಕ ನ್ಯಾಯ ಸಿಗಬೇಕು. ಇನ್ನೂ ಎಡ-ಬಲದ ಬಗ್ಗೆ ಕೆಲ ಜಿಲ್ಲೆಗಳಲ್ಲಿ ಗೊಂದಲ ಇದೆ. ಆದಿ ಕರ್ನಾಟಕ ಅಂತ ಕೆಲವು ಜಿಲ್ಲೆಗಳಲ್ಲಿ ಬರೆಸಿಕೊಂಡಿದ್ದಾರೆ ಎಂದರು.
ಸಿದ್ದರಾಮಯ್ಯ ಸರ್ಕಾರ ನಾಗಮೋಹನ್ ದಾಸ್ ವರದಿ ಸಲ್ಲಿಕೆ ವೇಳೆ ಜಾತಿ ಗೊಂದಲ ಪರಿಹರಿಸಿ, ಅರ್ಹರಿಗೆ ಒಳ ಮೀಸಲಾತಿ ಕಲ್ಪಿಸುವುದಾಗಿ ಹೇಳಿತ್ತು. 2 ತಿಂಗಳ ಕಾಲಾವಕಾಶ ಕೇಳಿದೆ. ಎಡ-ಬಲ ಸಹೋದರ ಸಮಾನರು, ಹಾಗಾಗಿ ಮೀಸಲಾತಿ ಹಂಚಿಕೆ ವೇಳೆ ಗೊಂದಲ ಬೇಡ ಎಂದು ಮನವಿ ಮಾಡಿದರು.