ಚಿಕ್ಕ ಬಳ್ಳಾಪುರ :ಮಹಿಳೆಯ ಮಾಟಮಂತ್ರಕ್ಕೆ ಬೆಚ್ಚಿಬಿದ್ದ ಊರಿನ ಜನ: ಆಗಿದ್ದೇನು?
ಚಿಕ್ಕಬಳ್ಳಾಪುರ: ಜನರು ಮಾಟಮಂತ್ರದ ಭೀತಿಯಲ್ಲಿ ವಾಸಿಸುತ್ತಿರುವ ಘಟನೆ ಚಿಕ್ಕಬಳ್ಳಾಪುರದ ಒಎಂಬಿ ನಗರದಲ್ಲಿ ನಡೆದಿದೆ
ಇಲ್ಲಿ ನಿತ್ಯ ಬೆಳಗಾದರೆ ಕೆಲ ಅಂಗಡಿ ಮತ್ತು ಮನೆಗಳ ಮುಂದೆ ನಿಂಬೆಹಣ್ಣು, ಅರಿಶಿನ ಮತ್ತು ಕುಂಕಮ ಇರುತ್ತಿದ್ದು ಮಾಟಮಂತ್ರದ ಕುರುಹುಗಳು ಎನ್ನಲಾಗುತ್ತಿದೆ.
ನಗರದ ರಸ್ತೆಯಲ್ಲಿರುವ ಶಾಂತಕುಮಾರ್ ಎಂಬುವರ ಟೈಲರಿಂಗ್ ಅಂಗಡಿ ಮುಂದೆ ಪ್ರತಿ ದಿನವೂ ಒಂದಲ್ಲ ಒಂದು ನಿಂಬೆಹಣ್ಣಿನ ತುಂಡುಗಳು, ಅರಿಶಿನ ಕುಂಕುಮದ ಕುರುಹುಗಳು ಪತ್ತೆಯಾಗುತ್ತಿದ್ದವಂತೆ.
ಇದರಿಂದ ಆತಂಕಗೊಂಡ ಟೈಲರ್ ಶಾಂತಕುಮಾರ್ ಅವರು ಈ ರೀತಿ ಮಾಡುತ್ತಿರುವುದು ಯಾರು ಅಂತ ಪತ್ತೆ ಹಚ್ಚಲು ಅಂಗಡಿ ಮುಂದೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದರು. ಸಿಸಿಟಿವಿ ಕ್ಯಾಮೆರಾ ಅಳವಡಿಸಿದ ಎರಡೇ ದಿನಕ್ಕೆ ಎದುರುಗಡೆ ಮನೆಯ ಮಹಿಳೆ ಮುನಿಲಕ್ಷ್ಮಮ್ಮ ಅವರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದಿದೆ. ಇದಾದ ಬಳಿಕ ಟೈಲರ್ ಶಾಂತಕುಮಾರ್ ಅವರ ಮನೆಯವರಿಗೆ ಒಂದಲ್ಲ ಒಂದು ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆಯಂತೆ.
ಇತ್ತ ಇದೇ ಏರಿಯಾದಲ್ಲಿ ವಾಸವಾಗಿರುವ ಜಯಲಕ್ಷ್ಮೀ ಎಂಬುವರಿಗೂ ಇದೇ ರೀತಿ ಆಗಿದೆ. ಜಯಲಕ್ಷ್ಮೀ ಅವರು ಹೇಳುವ ಪ್ರಕಾರ, ಆರೋಗ್ಯವಾಗಿದ್ದ ಅವರ ಪತಿ ಇದ್ದಕ್ಕಿದ್ದಂತೆ ತೀರಿಕೊಂಡರಂತೆ. ಇದಕ್ಕೆಲ್ಲಾ ಮಾಟಮಂತ್ರವೇ ಕಾರಣ ಅಂತ ಆರೋಪಿಸಿದ್ದಾರೆ. ಹೀಗಾಗಿ, ಮುನಿಲಕ್ಷ್ಮಮ್ಮ ಅವರ ವಿರುದ್ಧ ಒಎಂಬಿ ನಗರ ನಿವಾಸಿಗಳು ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಮಹಿಳೆಯ ಕಾಟ ತಪ್ಪಿಸುವಂತೆ ಮನವಿ ಮಾಡಿದ್ದಾರೆ.