ಬೆಂಗಳೂರು: ಪ್ರಸನ್ನ ಚಿತ್ರಮಂದಿರದಲ್ಲಿ ಡೋರ್, ಚೇರ್‌ಗೆ ಡ್ಯಾಮೇಜ್ ಮಾಡಿದ ದರ್ಶನ್ ಫ್ಯಾನ್ಸ್
ಬೆಂಗಳೂರು: ಬೆಂಗಳೂರಿನಲ್ಲಿ ಪ್ರಸನ್ನ ಚಿತ್ರಮಂದಿರದಲ್ಲಿ ದರ್ಶನ್ ಅಭಿಮಾನಿಗಳು ಹುಚ್ಚಾಟ ಪ್ರದರ್ಶಿಸಿದ್ದಾರೆ.
ದರ್ಶನ್ ಅವರ ಆಪ್ತ ಧನ್ವೀರ್ ಗೌಡ ನಟನೆಯ ‘ವಾಮನ’ ಸಿನಿಮಾದ ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ನೆರೆದಿದ್ದರು. ಈ ವೇಳೆ ಚಿತ್ರಮಂದಿರದ ಕುರ್ಚಿ, ಕಿಟಕಿ, ಬಾಗಿಲಿಗೆ ಹಾನಿ ಆಗುವ ರೀತಿಯಲ್ಲಿ ದರ್ಶನ್ ಫ್ಯಾನ್ಸ್ ನಡೆದುಕೊಂಡಿದ್ದಾರೆ. ಈ ಬಗ್ಗೆ ಚಿತ್ರಮಂದಿರದ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಟ ಧನ್ವೀರ್ ಗೌಡ ನಟನೆಯ ‘ವಾಮನ’ ಚಿತ್ರದ ಟ್ರೈಲರ್ ಕುರಿತು ದರ್ಶನ್ ಮಾತನಾಡಿರುವ ವಿಡಿಯೊವನ್ನು ಪ‍್ರದರ್ಶಿಸಲಾಯಿತು.
‘ಡಿ ಬಾಸ್, ಡಿ ಬಾಸ್’ ಎಂದು ಘೋಷಣೆ ಕೂಗಿದರು. ಈ ವೇಳೆ ತಳ್ಳಾಟ, ನೂಕಾಟ ನಡೆಯಿತು. ವೀಕ್ಷಣೆಗೆ ಬಂದಿದ್ದ ದರ್ಶನ್ ಅಭಿಮಾನಿಗಳು ಬಾಲ್ಕನಿ ಹಾಗೂ ಸೆಕೆಂಡ್ ಕ್ಲಾಸ್‌ನಲ್ಲಿ ಕುರ್ಚಿಗಳನ್ನು ಮುರಿದು ಹಾಕಿದರು.
‘ಟ್ರೈಲರ್ ಬಿಡುಗಡೆಗೆ ದರ್ಶನ್ ಬರುತ್ತಾರೆ ಎಂಬ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರು. ಆದರೆ, ದರ್ಶನ್ ಬರಲಿಲ್ಲ. ಇದರಿಂದ ಕೋಪಗೊಂಡ ಅಭಿಮಾನಿಗಳು ಕುರ್ಚಿ, ಕಿಟಕಿ ಬಾಗಿಲು ಹಾಗೂ ಗೇಟ್‌ಗಳನ್ನು ಮುರಿದು ಹಾಕಿದ್ದಾರೆ. ಸುಮ್ಮನಿರುವಂತೆ ಮನವಿ ಮಾಡಿದರೂ ಕೇಳಲಿಲ್ಲ. ಲಕ್ಷಾಂತರ ರೂಪಾಯಿ ನಷ್ಟವಾಗಿದೆ’ ಎಂದು ಚಿತ್ರಮಂದಿರದ ರಾಮಚಂದ್ರು ಬೇಸರ ವ್ಯಕ್ತಪಡಿಸಿದ್ದಾರೆ.