ಮಂಗಳೂರು :ಉರ್ವಾ ಇನ್ಸ್ ಪೆಕ್ಟರ್ ಭಾರತಿಗೆ ವರ್ಗ ; ತೆರವಾದ ಜಾಗಕ್ಕೆ ಶ್ಯಾಮಸುಂದರ್ ನಿಯೋಜನೆ, ಬೆಳ್ಳಿಯಪ್ಪ ಐಜಿಪಿ ಕಚೇರಿಗೆ, ಮೋಹನ್ ಕೊಟ್ಟಾರಿ ಬರ್ಕೆ ಠಾಣೆಗೆ.

ಮಂಗಳೂರು: ಇತ್ತೀಚೆಗೆ ಸೈಬರ್ ಅಪರಾಧ ಪ್ರಕರಣ ಒಂದರಲ್ಲಿ ಪೊಲೀಸ್ ಸಿಬಂದಿ ಲೋಪ ಎಸಗಲು ಕಾರಣವಾಗಿದ್ದರೆಂಬ ಆರೋಪಕ್ಕೀಡಾದ ಉರ್ವಾ ಇನ್ಸ್ ಪೆಕ್ಟರ್ ಭಾರತಿ ಜಿ. ಅವರನ್ನು ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಇವರಿಂದ ತೆರವಾದ ಜಾಗಕ್ಕೆ ಈ ಹಿಂದೆ ಮಂಗಳೂರು ಸಿಸಿಬಿಯಲ್ಲಿದ್ದ ಶ್ಯಾಮಸುಂದರ್ ಅವರನ್ನು ಉರ್ವಾ ಇನ್ಸ್ ಪೆಕ್ಟರ್ ಹುದ್ದೆಗೆ ನಿಯೋಜಿಸಲಾಗಿದೆ.
ಮೂರು ತಿಂಗಳ ಹಿಂದೆ ವರ್ಗಾವಣೆಯಾಗಿದ್ದ ಶ್ಯಾಮಸುಂದರ್ ಅವರಿಗೆ ಜಾಗ ತೋರಿಸಿರಲಿಲ್ಲ. ಇದೀಗ ಉರ್ವಾ ಠಾಣೆಗೆ ಹುದ್ದೆ ತೋರಿಸಲಾಗಿದೆ. ಡಿಸಿಆರ್ ಇ ವಿಭಾಗದಲ್ಲಿದ್ದ ಮೋಹನ್ ಕೊಟ್ಟಾರಿ ಅವರಿಗೆ ಬರ್ಕೆ ಠಾಣೆ ಇನ್ಸ್ ಪೆಕ್ಟರ್ ಹುದ್ದೆ ನೀಡಲಾಗಿದೆ. ಲೋಕಾಯುಕ್ತ ವಿಭಾಗದಲ್ಲಿದ್ದ ಅಮಾನುಲ್ಲಾಗೆ ಮಂಗಳೂರು ಪಶ್ಚಿಮ ಸಂಚಾರಿ ಠಾಣೆಯ ಇನ್ಸ್ ಪೆಕ್ಟರ್ ಆಗಿ ವರ್ಗಾವಣೆ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 85 ಇನ್ಸ್ ಪೆಕ್ಟರ್ ದರ್ಜೆಯ ಅಧಿಕಾರಿಗಳನ್ನು ಲೋಕಾಯುಕ್ತ, ಗುಪ್ತವಾರ್ತೆ ಇನ್ನಿತರ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ಇದೇ ವೇಳೆ, 17 ಮಂದಿ ಡಿವೈಎಸ್ಪಿಗಳನ್ನು ವಿವಿಧ ಹುದ್ದೆಗಳಿಗೆ ವರ್ಗ ಮಾಡಲಾಗಿದೆ. ಈ ಹಿಂದೆ ಮಂಗಳೂರಿನಲ್ಲಿ ಇನ್ಸ್ ಪೆಕ್ಟರ್, ಡಿವೈಎಸ್ಪಿ ಆಗಿದ್ದ ಕೆ.ಯು. ಬೆಳ್ಳಿಯಪ್ಪ ಆನಂತರ ನಾಲ್ಕು ವರ್ಷದಿಂದ ಭಟ್ಕಳ, ಕುಂದಾಪುರದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಆನಂತರ ವರ್ಗಾವಣೆಗೊಂಡು ಸ್ಥಳ ನಿರೀಕ್ಷೆಯಲ್ಲಿದ್ದ ಬೆಳ್ಳಿಯಪ್ಪ ಅವರಿಗೆ ಈಗ ಮಂಗಳೂರಿನ ಪಶ್ಚಿಮ ವಲಯ ಐಜಿಪಿ ಕಚೇರಿಗೆ ಹುದ್ದೆ ತೋರಿಸಲಾಗಿದೆ.