ನವದೆಹಲಿ :ಹೆದ್ದಾರಿ ಬಳಕೆದಾರರಿಗೆ ಸಿಹಿಸುದ್ದಿ ; ಟೋಲ್ ಶುಲ್ಕ ಇಳಿಸಲು ಕೇಂದ್ರ ಚಿಂತನೆ, ವಾರ್ಷಿಕ ಮತ್ತು ಜೀವಿತಾವಧಿಗೆ ವನ್ ಟೈಮ್ ಟೋಲ್ ಪಾವತಿಗೆ ಅವಕಾಶ.

ನವದೆಹಲಿ : ಕೇಂದ್ರ ಸರಕಾರವು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿದಿನದ ಬಳಕೆದಾರರಿಗೆ ಟೋಲ್ ಪ್ಲಾಜಾ ಶುಲ್ಕವನ್ನು ಇಳಿಸುವ ಬಗ್ಗೆ ಹೊಸ ನೀತಿಯನ್ನು ತರಲು ಮುಂದಾಗಿದೆ. ಶುಲ್ಕದ ಮೇಲೆ ವಿನಾಯಿತಿ ಅಥವಾ ದಿನವೂ ಸಂಚರಿಸುವ ವಾಹನಗಳಿಗೆ ಹೊಸ ಆಫರ್ ನೀಡಲು ಚಿಂತನೆ ನಡೆದಿದೆ.
ಈ ಬಗ್ಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಸಾರಿಗೆ ಸಚಿವಾಲಯವು ವಾರ್ಷಿಕ ಮತ್ತು ಜೀವಿತಾವಧಿಗೆ ಟೋಲ್ ಶುಲ್ಕವೆಂದು ಪ್ರತ್ಯೇಕ ನೀತಿ ತರಲಿದೆ. ಇದರಂತೆ, ವಾರ್ಷಿಕ ಶುಲ್ಕವಾಗಿ 3 ಸಾವಿರ ಇದ್ದರೆ, 15 ವರ್ಷಕ್ಕೆ 30 ಸಾವಿರ ರೂ. ಸಿಂಗಲ್ ಪೇಮೆಂಟ್ ನೀತಿ ತರುವ ಬಗ್ಗೆ ಪ್ರಸ್ತಾಪ ಇದೆ. ಇದರಿಂದ ಟೋಲ್ ಪ್ಲಾಜಾದಲ್ಲಿ ದಿನವೂ ಸಂಚರಿಸುವ ಗ್ರಾಹಕರಿಗೆ ತೊಂದರೆ ತಪ್ಪಲಿದೆ ಎಂದು ಸಚಿವ ಗಡ್ಕರಿ ತಿಳಿಸಿದ್ದಾರೆ.
ಸ್ಯಾಟಲೈಟ್ ಆಧರಿತ ಟೋಲ್ ಶುಲ್ಕ ಜಾರಿಗೆ ತರುವ ವಿಚಾರದಲ್ಲಿ ಇನ್ನಷ್ಟು ಅಧ್ಯಯನ ಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ. ಭದ್ರತೆ, ಖಾಸಗಿತನ ವಿಚಾರದಲ್ಲಿ ಅಪಾಯ ಸಾಧ್ಯತೆ ಕುರಿತಾಗಿ ಅಧ್ಯಯನ ಆಗಬೇಕಿದೆ ಎಂದಿರುವ ಗಡ್ಕರಿ, ಹೆದ್ದಾರಿ ಅಭಿವೃದ್ಧಿ ಆಗುವ ನಿಟ್ಟಿನಲ್ಲಿ ಟೋಲ್ ಶುಲ್ಕ ಸಂಗ್ರಹದ ಅಗತ್ಯವಿದೆ. ಇದು ಸಾರಿಗೆ ಪ್ರಾಧಿಕಾರದ ನೀತಿಯಾಗಿದ್ದು, ಉತ್ತಮ ರಸ್ತೆ ಬೇಕಿದ್ದರೆ ನೀವು ಶುಲ್ಕ ಕಟ್ಟಬೇಕಾಗುತ್ತದೆ ಎಂದು ಹೇಳಿದ್ದಾರೆ.
2008ರಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪ್ಲಾಜಾ ತರುವ ಬಗ್ಗೆ ನಿಯಮ ತರಲಾಗಿತ್ತು. ಅದರಂತೆ, ಟೋಲ್ ಪ್ಲಾಜಾಗಳ ಮಧ್ಯೆ ಕನಿಷ್ಠ 60 ಕಿಮೀ ಅಂತರ ಇರಬೇಕಾಗುತ್ತದೆ. ಸದ್ಯದಲ್ಲೇ ಈ ಕುರಿತು ಹೊಸ ನಿಯಮ ಜಾರಿಗೆ ತರಲಾಗುವುದು.
ಅದರಲ್ಲಿ ಬಳಕೆದಾರರಿಗೆ ಶುಲ್ಕ ಕಡಿತ ಬಗ್ಗೆ ಮತ್ತು ಕೆಲವೊಂದು ಜಟಿಲ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲಾಗುವುದು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. 2023-24ನೇ ಸಾಲಿನಲ್ಲಿ ದೇಶದಲ್ಲಿ ಹೆದ್ದಾರಿ ಟೋಲ್ ಶುಲ್ಕದ ರೂಪದಲ್ಲಿ 64,809.09 ಕೋಟಿ ರೂಪಾಯಿ ಸಂಗ್ರಹಿಸಲಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ 35 ಪರ್ಸೆಂಟ್ ಹೆಚ್ಚಳವಾಗಿದೆ.