ಗುಜರಾತ್ :ಸುರಕ್ಷಿತವಾಗಿ ಬಂದ ಸುನೀತಾ ವಿಲಿಯಮ್ಸ್ ಊರಿನಲ್ಲಿ ಹಬ್ಬದ ವಾತಾವರಣ.!!!
ಮೆಹ್ಸಾನಾ: 9 ತಿಂಗಳ ಕಾಲ ಬಾಹ್ಯಾಕಾಶದಲ್ಲಿದ್ದು ಇಂದು ಬುಧವಾರ ವಾಪಾಸ್ ಭೂಮಿಗೆ ಮರಳಿದ ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಗ್ಗೆ ಎಲ್ಲೆಡೆ ಸಂತಸ ವ್ಯಕ್ತವಾಗುತ್ತಿದೆ.
ಸುನಿತಾ ವಿಲಿಯಮ್ಸ್ ಅವರ ಪೂರ್ವಜರು ಭಾರತದ ಗುಜರಾತ್ ಮೂಲದವರು. ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ಸುನೀತಾ ವಿಲಿಯಮ್ಸ್ ಅವರ ಪೂರ್ವಜರ ಹಳ್ಳಿಯ ನಿವಾಸಿಗಳು ಇಂದು ಬೆಳಗ್ಗೆಯಿಂದಲೇ ಸಂಭ್ರಮಾಚರಣೆಯಲ್ಲಿ ತೊಡಗಿರುವುದು ಕಂಡುಬಂತು.ಗುಜರಾತ್‌ನ ಮೆಹ್ಸಾನ್ ಜಿಲ್ಲೆಯ ಜುರಸಾಲ್ ಗ್ರಾಮದಲ್ಲೀಗ ಸಂಭ್ರಮ ಮನೆ ಮಾಡಿದೆ. ನಮ್ಮ ಮನೆ ಮಗಳು, ನಮ್ಮೂರಿನ ಹೆಮ್ಮೆಯ ಕುವರಿಯ ಸಾಧನೆಯನ್ನು ಕಂಡು ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಇದೇ ಕೆಲವು ದಿನಗಳ ಹಿಂದೆ ಸುನೀತಾ ಸುರಕ್ಷಿತವಾಗಿ ಬರಲಿ ಎಂದು ಪೂಜೆ, ಹೋಮ ಹವನ ಮಾಡಿದ್ದರು.
ಇಂದು ಸುನೀತಾ ವಿಲಿಯಮ್ಸ್ ಸುರಕ್ಷಿತವಾಗಿ ಬಂದಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಸುನೀತಾ ವಿಲಿಯಮ್ಸ್ ತಂದೆ ದೀಪಕ್ ಪಾಂಡ್ಯಾ ಅವರು ಇದೇ ಗ್ರಾಮದವರು. ಸುನೀತಾ ವಿಲಿಯಮ್ಸ್ ವಂಶದ ಬೇರುಗಳು ಇಲ್ಲಿಯೇ ಇವೆ. ಈ ಗ್ರಾಮಕ್ಕೆ ಸುನೀತಾ ವಿಲಿಯಮ್ಸ್ ಈ ಹಿಂದೆ ಎರಡು ಬಾರಿ ಭೇಟಿ ನೀಡಿದ್ದರು. ಈಗ ತಮ್ಮೂರಿನ ಮಗಳು ಮೂರು ತಿಂಗಳುಗಳ ಕಾಲದ ಬಾಹ್ಯಾಕಾಶದ ಬದುಕಿನಿಂದ ಸುರಕ್ಷಿತವಾಗಿ ಭೂಮಿಗೆ ಬಂದಿದ್ದು ಅವರ ಹರ್ಷವನ್ನು ಇಮ್ಮಡಿಗೊಳಿಸಿದೆ. ಹೀಗಾಗಿ ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿ ಜುರಸಾಲ್ ಗ್ರಾಮಸ್ಥರು ಸಂಭ್ರಮಿಸಿದ್ದಾರೆ