ಮೈಸೂರು: ಮೃಗಾಲಯದಲ್ಲಿ ಪ್ರಾಣಿಗಳಿಗೂ ಏರ್ಕೂಲರ್, ಎಳನೀರು: ಪ್ರಾಣಿ - ಪಕ್ಷಿಗಳ ರಕ್ಷಣೆಗೆ ಹೈಟೆಕ್ ಪ್ಲಾನ್! - ಪ್ರಾಣಿ- ಪಕ್ಷಿಗಳಿಗೆ ಬಿಸಿಲಿನಿಂದ ರಕ್ಷಣೆ ನೀಡುವುದಕ್ಕಾಗಿ ಹಲವಾರು ಯೋಜನೆಗಳು!!
ಮೈಸೂರು : ಅವಧಿಗೂ ಮುನ್ನವೇ ಈ ಬಾರಿ ಬಿಸಿಲಿನ ಬೇಗೆ ಹೆಚ್ಚಾಗಿದ್ದು, ಇದರಿಂದ ಮನುಷ್ಯರಷ್ಟೇ ಅಲ್ಲ ಪ್ರಾಣಿ-ಪಕ್ಷಿಗಳಿಗೂ ಬಿಸಿಲಿನ ತಾಪ ತಾಳಲಾಗುತ್ತಿಲ್ಲ. ಹೀಗಾಗಿ, ಬಿಸಿಲಿನ ಬೇಗೆಯಿಂದ ಪ್ರಾಣಿ-ಪಕ್ಷಿಗಳನ್ನ ಕಾಪಾಡುವ ನಿಟ್ಟಿನಲ್ಲಿ ಚಾಮರಾಜೇಂದ್ರ ಮೃಗಾಲಯದಲ್ಲಿ ಹೊಸ ಯೋಜನೆಯನ್ನ ಹಾಕಿಕೊಳ್ಳಲಾಗಿದೆ.
ಪ್ರಮುಖ ಪ್ರಾಣಿ-ಪಕ್ಷಿಗಳಿರುವ ಪ್ರದೇಶಗಳಲ್ಲಿ ಸ್ಪ್ರಿಂಕ್ಲರ್ ಮೂಲಕ ನೀರನ್ನ ಚಿಮುಕಿಸಿ, ಪ್ರಾಣಿಗಳನ್ನ ಸದಾ ತಂಪಾಗಿ ಇಡುವಂತೆ ಮಾಡುವ ಜತೆಗೆ, ತರಕಾರಿಗಳು ಸೇರಿದಂತೆ ಹಲವಾರು ರೀತಿಯ ಹಣ್ಣುಗಳನ್ನ ನೀಡಿ, ಬೇಸಿಗೆಯ ಬಿಸಿಲಿನಿಂದ ರಕ್ಷಣೆ ನೀಡಿದ್ದಾರೆ.
ಪ್ರಾಣಿಗಳಿಗೂ ಏರ್ಕೂಲರ್, ಎಳನೀರು: ಈ ಬಗ್ಗೆ ಮೃಗಾಲಯದ ಕಾರ್ಯಕಾರಿ ನಿರ್ದೇಶಕ ರಂಗಸ್ವಾಮಿ ಅವರು ಮಾತನಾಡಿ, 'ಈ ಮೃಗಾಲಯದಲ್ಲಿ ಬೇಸಿಗೆಯಿಂದ ಪ್ರಾಣಿ - ಪಕ್ಷಿಗಳನ್ನ ರಕ್ಷಣೆ ಮಾಡಲು ಮೃಗಾಲಯದ 45 ಕಡೆ ಜೆಟ್ ಮಾದರಿಯ ಸ್ಪ್ರಿಂಕ್ಲರ್ ಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಗೊರಿಲ್ಲಾ ಹಾಗೂ ಇತರ ಪ್ರಾಣಿಗಳಿಗೆ ದಿನಕ್ಕೆ ಎರಡು ಬಾರಿ ತಾಜಾ ಎಳನೀರು, ಮತ್ತೆ ಫ್ಯಾನ್ ಹಾಗೂ ಏರ್ಕೂಲರ್ ವ್ಯವಸ್ಥೆಯನ್ನ ಮಾಡಿದ್ದೇವೆ' ಎಂದರು.
ನೆರಳಿನ ವ್ಯವಸ್ಥೆಗಾಗಿ ಶೆಡ್ಗಳ ನಿರ್ಮಾಣ : 'ಜತೆಗೆ ಸಸ್ಯಾಹಾರಿ ಪ್ರಾಣಿಗಳಿಗೆ ಕಲ್ಲಂಗಡಿ, ಕರ್ಬೂಜ, ಸೌತೆಕಾಯಿಯಂತಹ ಹಣ್ಣುಗಳನ್ನ ಕೊಡುತ್ತಿದ್ದೇವೆ. ಉಷ್ಣಾಂಶ ಕಡಿಮೆ ಮಾಡಲು ಕರಡಿಗಳಿಗೆ ಐಸ್ಬ್ಲಾಕ್ ನೀಡುತ್ತಿದ್ದೇವೆ. ಜಿಂಕೆ, ಕಡವೆಗಳಿಗೆ ಕೆಸರಿನ ಕೊಳಗಳನ್ನ ನಿರ್ಮಿಸಿದ್ದೇವೆ. ಪ್ರಾಣಿಗಳಿಗೆ ನೆರಳಿನ ವ್ಯವಸ್ಥೆಗಾಗಿ ಶೆಡ್ಗಳನ್ನ ಮಾಡಿದ್ದೇವೆ' ಎಂದು ಹೇಳಿದರು.
ಪ್ರಾಣಿಗಳು ವಾಸಿಸುವ ಮನೆಯ ತಾರಸಿಗಳಿಗೆ ಸುಣ್ಣವನ್ನ ಹಚ್ಚುತ್ತೇವೆ. ಇದರಿಂದ ಪ್ರಾಣಿಗಳು ತಂಪಾಗಿರುತ್ತವೆ. ಆರ್ಎಫ್ಒ, ಬಯೋಲಜಿಸ್ಟ್, ಪಶುವೈದ್ಯ ಸಿಬ್ಬಂದಿ ತಂಡ ಸೇರಿಕೊಂಡು ತಂಪಾದ ವಾತಾವರಣ ನಿರ್ಮಿಸುವುದಕ್ಕೆ ಎಲ್ಲಾ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದೇವೆ. ಹಾಗಾಗಿ, ಈ ಮೃಗಾಲಯದಲ್ಲಿರುವ ಪ್ರಾಣಿಗಳು ತಂಪಾಗಿರುವುದರ ಜೊತೆಗೆ ಆರೋಗ್ಯಕರವಾಗಿಯೂ ಇರುತ್ತವೆ' ಎಂದರು.
ಹಕ್ಕಿ ಜ್ವರ ಹರಡದಂತೆ ಮುನ್ನೆಚ್ಚರಿಕೆ : 'ಇತ್ತೀಚಿಗೆ ಚಿಕ್ಕಬಳ್ಳಾಪುರ ಹಾಗೂ ಬಳ್ಳಾರಿಯಲ್ಲಿ ಹಕ್ಕಿಜ್ವರ ಕಂಡುಬಂದಿದೆ. ಹೀಗಾಗಿ, ನಮ್ಮ ಮೃಗಾಲಯದ ಪ್ರವೇಶ ದ್ವಾರದಲ್ಲಿ ಪ್ರವಾಸಿಗರು ರಾಸಾಯನಿಕ ಸಿಂಪಡಿಸಿರುವ ನೀರಿನ ಮಾದರಿಯಲ್ಲಿ (ಫೂಟ್ ಟಿಪ್ಸ್) ಕಾಲುಗಳನ್ನ ತೊಳೆದುಕೊಂಡು ಒಳಗೆ ಹೋಗುವಂತೆ ವ್ಯವಸ್ಥೆ ಮಾಡಿದ್ದೇವೆ' ಎಂದರು.
ಇಲ್ಲಿನ ಪ್ರಾಣಿ ಪಾಲಕರು ಒಂದು ಪ್ರಾಣಿ ಮನೆಯಿಂದ ಇನ್ನೊಂದು ಪ್ರಾಣಿ ಮನೆಗೆ ಹೋಗುವಂತಿಲ್ಲ. ಅವರು ಆ ಮನೆಗಳಲ್ಲಿಯೇ ಇರಬೇಕು. ಅವರಿಗೆ ಮುಂಜಾಗ್ರತಾ ಕ್ರಮವಾಗಿ ಪಿಪಿಇ ಕಿಟ್, ಮಾಸ್ಕ್ ಹಾಗೂ ಹ್ಯಾಂಡ್ ಗ್ಲೌಸ್ಗಳನ್ನು ನೀಡಿದ್ದೇವೆ. ಅದನ್ನ ನಮ್ಮ ಟೀಂ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿರುತ್ತಾರೆ' ಎಂದು ಹೇಳಿದರು
ಯಾವುದೇ ಹಕ್ಕಿಜ್ವರದ ಲಕ್ಷಣಗಳು ಕಂಡುಬಂದಿಲ್ಲ: 'ಇಲ್ಲಿರುವ ಪ್ರಾಣಿಗಳ ಮಲ ಮೂತ್ರವನ್ನ ಸಂಗ್ರಹಿಸಿ ಸೂಕ್ತ ಲ್ಯಾಬ್ಗೆ ಕಳುಹಿಸಿ, ಅಲ್ಲಿಂದ ಪರೀಕ್ಷಾ ವರದಿಗಳನ್ನ ಸಹಿತ ತರಿಸಿಕೊಳ್ಳುವ ವ್ಯವಸ್ಥೆಯನ್ನ ಸಹ ಮಾಡಲಾಗಿದೆ. ಮಾಂಸಹಾರಿ ಪ್ರಾಣಿಗಳಿಗೆ ಆಹಾರ ನೀಡಬೇಕಾದರೆ, ಜೀವಂತ ಕೋಳಿಗಳನ್ನ ತಂದು ನಂತರ ಅದರ ಆರೋಗ್ಯ ತಪಾಸಣೆ ನಡೆಸಿ, ನಂತರ ಚಿಕನ್ ರಾಸಾಯನಿಕದಿಂದ ತೊಳೆದು ನೀಡುತ್ತಿದ್ದೇವೆ. ಹೀಗಾಗಿ, ಇಲ್ಲಿಯವರೆಗೆ ನಮ್ಮ ಮೃಗಾಲಯದಲ್ಲಿ ಯಾವುದೇ ಹಕ್ಕಿಜ್ವರದ ಲಕ್ಷಣಗಳು ಕಂಡುಬಂದಿಲ್ಲ' ಎಂದು ತಿಳಿಸಿದ್ದಾರೆ.