ಮಂಗಳೂರು : ಎಸ್ಸೆಸ್ಸೆಲ್ಸಿ ದಲಿತ ಬಾಲಕಿಗೆ ಲೈಂಗಿಕ ಕಿರುಕುಳ ; ಬಿಜೆಪಿ ಮುಖಂಡನ ಮೇಲೆ ಪೋಕ್ಸೋ ಕೇಸು ದಾಖಲು, ಸಡಿಲ ಎಫ್ಐಆರ್ ದಾಖಲಿಸಿದ ವಿಟ್ಲ ಪೊಲೀಸರು.

ಬಂಟ್ವಾಳ: ಎಸ್ಸೆಸ್ಸೆಲ್ಸಿ ಓದುತ್ತಿದ್ದ ಅಪ್ರಾಪ್ತ ದಲಿತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ವಿಟ್ಲ ಠಾಣೆಯಲ್ಲಿ ದಲಿತ ದೌರ್ಜನ್ಯ ಹಾಗೂ ಪೋಕ್ಸೊ ಪ್ರಕರಣ ದಾಖಲಾಗಿದೆ.
16 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ, ಕೃತ್ಯವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾಗಿ ಆರೋಪ ಕೇಳಿಬಂದಿದೆ. ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ, ಬಿಜೆಪಿ ಮುಖಂಡ ಮಹೇಶ್ ಭಟ್ ಎಂಬ ವ್ಯಕ್ತಿಯ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿತ ವ್ಯಕ್ತಿ ತಲೆಮರೆಸಿಕೊಂಡಿದ್ದಾನೆ.

ಬಾಲಕಿಯ ಪೋಷಕರು ಆರೋಪಿಗೆ ಸೇರಿದ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಈ ನಡುವೆ, ಕಳೆದ ಜನವರಿ ತಿಂಗಳಲ್ಲಿ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗುತ್ತಿದೆ.
ಎರಡು ತಿಂಗಳಿನಿಂದ ಬಾಲಕಿ ಶಾಲೆಗೆ ಹೋಗಿರಲಿಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆ ಇದ್ದರೂ ಯಾಕೆ ಶಾಲೆಗೆ ಬಂದಿಲ್ಲವೆಂದು ಶಾಲೆಯ ಶಿಕ್ಷಕರು ವಿಚಾರಿಸುವ ನಿಟ್ಟಿನಲ್ಲಿ ಆಕೆಯ ಮನೆಗೆ ತೆರಳಿದ್ದರು. ಈ ವೇಳೆ, ಬಾಲಕಿಗೆ ಆರೋಗ್ಯ ಸರಿಯಿಲ್ಲ ಎಂದು ಹೇಳಿ ಶಿಕ್ಷಕರನ್ನು ನೋಡಲು ಬಿಟ್ಟಿರಲಿಲ್ಲ. ಬಾಲಕಿಯ ಭೇಟಿಗೂ ಅವಕಾಶ ನೀಡಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದ ವೇಳೆ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗುತ್ತಿದ್ದು ಅಪ್ರಾಪ್ತ ವಯಸ್ಸಿನವಳಾಗಿದ್ದರಿಂದ ವಿಷಯ ಪೊಲೀಸ್ ಠಾಣೆಗೆ ತಿಳಿದು ಪೋಕ್ಸೋ ಕೇಸು ದಾಖಲಿಸಿದ್ದಾರೆ. ವಿಷಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗಮನಕ್ಕೂ ಬಂದಿದೆ. ಆರೋಪಿ ಸ್ಥಳೀಯವಾಗಿ ಪ್ರಭಾವಿ ಆಗಿರುವುದರಿಂದ ಪೊಲೀಸರು ಎಫ್ಐಆರ್ ದಾಖಲಿಸಿದರೂ ಸೀರಿಯಸ್ ಆಗಿ ತೆಗೆದುಕೊಂಡಿಲ್ಲ. ಲೈಂಗಿಕ ಕಿರುಕುಳದ ಬಗ್ಗೆ ಉಲ್ಲೇಖ ಮಾಡದೆ, ನೀನು ನನ್ನ ಜೊತೆ ಗುಡ್ಡಕ್ಕೆ ಬರ್ತೀಯಾ ಎಂದು ಕೇಳಿದ್ದಾಗಿ ಮಾತ್ರ ಎಫ್ಐಆರ್ ನಲ್ಲಿ ನಮೂದಿಸಿ ಸಡಿಲಗೊಳಿಸಿದ್ದಾರೆ. ಘಟನೆ ನಡೆದು ಎರಡು ತಿಂಗಳಾಗಿದ್ದು ದಲಿತ ಸಂಘಟನೆಗಳು, ಜಾತ್ಯತೀತರೆಲ್ಲ ಮೌನ ವಹಿಸಿದ್ದಾರೆ.