ಉಡುಪಿ:ರಸ್ತೆಬದಿ ನಿಲ್ಲಿಸಿರುವ ಹುತಾತ್ಮ ಯೋಧನ ಬ್ಯಾನರ್ಗೆ ಪ್ರತಿದಿನ ಸೆಲ್ಯೂಟ್ ಹೊಡೆದೇ ಶಾಲೆಗೆ ಹೋಗುವ ಬಾಲಕಿ.
Monday, March 24, 2025
ಉಡುಪಿ: ಕಳೆದ ಡಿಸೆಂಬರ್ 24ರಂದು ಸೇನಾ ವಾಹನ ಅಪಘಾತದಲ್ಲಿ ಹವಾಲ್ದಾರ್ ಅನೂಪ್ ಪೂಜಾರಿ ಹುತಾತ್ಮರಾಗಿದ್ದು, ಅವರ ಬ್ಯಾನರ್ಗೆ ಬಾಲಕಿಯೋರ್ವಳು ದಿನನಿತ್ಯ ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸಿ ಶಾಲೆಗೆ ತೆರಳುತ್ತಿದ್ದಾಳೆ.
ಅಂದು ಅನೂಪ್ ಪೂಜಾರಿ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಸಾವಿರಾರು ಮಂದಿ ಗೌರವ ನಮನ ಸಲ್ಲಿಸಿದ್ದರು. ಆದರೆ ಈ ಬಾಲಕಿ ಈಗಲೂ ಶಾಲೆಗೆ ಹೋಗುವ ಮೊದಲು ಅನೂಪ್ ಪೂಜಾರಿ ಅವರ ಫ್ಲೆಕ್ಸ್ ಬಳಿ ತೆರಳಿ ಸೆಲ್ಯೂಟ್ ಹೊಡೆದು ಬಳಿಕವೇ ಶಾಲೆಗೆ ತೆರಳುತ್ತಿದ್ದಾಳೆ.
ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದ ಐರ್ಬೈಲ್ನಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ಲಹರಿಯ ಮಾವ ರಸ್ತೆ ದಾಟಿಸುತ್ತಿದ್ದಂತೆ ಹುತಾತ್ಮ ಯೋಧನಿಗೆ ಸೆಲ್ಯೂಟ್ ಹೊಡೆದು ಶಾಲೆಗೆ ತೆರಳುತ್ತಾಳೆ. ಈಕೆಯ ತಂದೆ ಪೊಲೀಸ್ ಕೆಲಸ ನಿರ್ವಹಿಸುತ್ತಲೇ ಮೃತಪಟ್ಟಿದ್ದರು. ತಂದೆ ಹೇಳಿಕೊಟ್ಟ ದೇಶಪ್ರೇಮವನ್ನು ಬಾಲಕಿ ಈಗಲೂ ಚಾಚೂ ತಪ್ಪದೇ ಮುಂದುವರೆಸಿಕೊಂಡು ಬಂದಿದ್ದಾಳೆ.ನಾನು ದಿನಾ ಶಾಲೆಗೆ ಹೋಗುವಾಗ ಯೋಧ ಅನೂಪ್ ಪೂಜಾರಿಯವರ ಪ್ಲೆಕ್ಸ್ ಸಿಗುತ್ತದೆ. ಅವರು ದೇಶ ಕಾದಿದ್ದರಿಂದ ಅವರಿಗೆ ಗೌರವ ಕೊಡುವುದು ನಮ್ಮ ಜವಾಬ್ದಾರಿ. ಆದ್ದರಿಂದ ದಿನಾ ಶಾಲೆಗೆ ಹೋಗುವಾಗ ಸೆಲ್ಯೂಟ್ ಹೊಡೆಯುತ್ತೇನೆ" ಎಂದು ಬಾಲಕಿ ಲಹರಿ ಹೆಮ್ಮೆಯಿಂದ ಹೇಳುತ್ತಾಳೆ.
"ಅವಳ ದೇಶ ಭಕ್ತಿ ನೋಡಿ ನನಗೆ ಹೆಮ್ಮೆ ಅನಿಸುತ್ತಿದೆ. ನಾನು ಕೆಲಸಕ್ಕೆ ಹೋಗುತ್ತೇನೆ. ಅವಳು ಯಾವಾಗಲೂ ಶಾಲೆಯಿಂದ ಬರುವಾಗ ಭಾವಚಿತ್ರಕ್ಕೆ ಸೆಲ್ಯೂಟ್ ಹೊಡೆಯುತ್ತಾಳೆ. ಅವಳ ತಂದೆ ಕೂಡ ಪೊಲೀಸ್ ಇಲಾಖೆಯಲ್ಲಿದ್ದವರು. ಅವಳಿಗೆ ದೇಶಕ್ಕೋಸ್ಕರ ಹೊರಾಡುವವರಿಗೆ ಗೌರವ ಕೋಡಬೇಕೆಂಬ ಭಾವನೆ ಇದೆ" ಎಂದು ಹೇಳಿದರು.