ಮಂಗಳೂರು : ನೆಲ್ಲಿದಡಿ ಗುತ್ತಿನ ಪ್ರಕರಣ ದಿಢೀರ್ ಆದದ್ದು ಹೇಗೆ ? ಗುತ್ತಿನ ಸದಸ್ಯರನ್ನು ಪ್ರಶ್ನಿಸಿದ ಜಿಲ್ಲಾಧಿಕಾರಿ, ನಾವೇನೂ ಅಡ್ಡಿಯಾಗಿಲ್ಲ ಎಂದ ಎಸ್ಇಝೆಡ್ ಎಂಡಿ, ಶಾಶ್ವತ ಪರಿಹಾರ ಕ್ರಮಕ್ಕೆ ಸೂಚಿಸಿದ ಸಂಸದ ಚೌಟ.nellidadi guttu issuue brijesh chouta

ಮಂಗಳೂರು : ಎಸ್ಇಝೆಡ್ ವ್ಯಾಪ್ತಿಯ ನೆಲ್ಲಿದಡಿ ಗುತ್ತಿನ ಕಾಂತೇರಿ ಜುಮಾದಿ ದೈವದ ಆಚರಣೆಗೆ ಅಧಿಕಾರಿಗಳು ಅಡ್ಡಿಯಾಗಿದ್ದಾರೆ ಎಂಬ ಕೂಗು ಇತ್ತೀಚೆಗೆ ಎದ್ದಿತ್ತು. ಇದರ ಬೆನ್ನಲ್ಲೇ ಜಾಲತಾಣದಲ್ಲಿ ನೆಲ್ಲಿದಡಿ ರಕ್ಷಿಸಿ ಅಭಿಯಾನವೂ ನಡೆದಿತ್ತು. ಈ ವಿಷಯ ಮಾಧ್ಯಮದಲ್ಲಿ ಸುದ್ದಿಯಾಗುತ್ತಲೇ ಜಿಲ್ಲಾಡಳಿತವೂ ಎಚ್ಚತ್ತುಕೊಂಡಿದೆ. ಶನಿವಾರ ಸಂಸದ ಕ್ಯಾ.ಬ್ರಿಜೇಶ್ ಚೌಟ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನೆಲ್ಲಿದಡಿ ಗುತ್ತಿನ ಸದಸ್ಯರು, ದೈವದ ಆಚರಣೆ ಮಾಡುವವರು ಮತ್ತು ಹೋರಾಟಗಾರರ ಸಭೆಯನ್ನು ಕರೆದಿದ್ದರು.
ಸಭೆಯಲ್ಲಿ ಎಸ್ಇಝೆಡ್ ಉದ್ದೇಶಕ್ಕೆ ಭೂಸ್ವಾಧೀನ, ಆ ಸಂದರ್ಭದಲ್ಲಿ ಕಳವಾರು, ಪೆರ್ಮುದೆ ಗ್ರಾಮದ ಎರಡೂವರೆ ಸಾವಿರ ಎಕ್ರೆ ಡಿನೋಟಿಫೈ ಮೂಲಕ ಭೂಸ್ವಾಧೀನ ಆಗಿರುವುದು, ಕಾಂತೇರಿ ಜುಮಾದಿ ದೈವದ ಸ್ಥಾನ ಮಾತ್ರ ತೆರವು ಮಾಡಲಾಗದೆ ಉಳಿದುಕೊಂಡಿರುವ ವಿಚಾರ ಚರ್ಚೆಗೆ ಬಂತು. ಇಷ್ಟು ದಿನಗಳ ವರೆಗೂ ಯಾವುದೇ ತೊಂದರೆ ಇಲ್ಲದೆ ದೈವದ ಆಚರಣೆ ನಡೆದುಬಂದಿತ್ತು. ನೀವೆಲ್ಲ ಕಂಪನಿಯಿಂದ ಪರಿಹಾರ ಪಡೆದು ಹೋಗಿದ್ದೀರಿ, ಅಲ್ಲಿನ ದೈವಕ್ಕೂ ಆಚರಣೆ ಮಾಡ್ತಾ ಬಂದಿದ್ದೀರಿ, ಈಗ ದಿಢೀರ್ ಎನ್ನುವಂತೆ ಈ ವಿಷಯ ಎದ್ದಿದ್ದು ಯಾಕೆ ಎಂದು ಜಿಲ್ಲಾಧಿಕಾರಿಗಳು, ಸಭೆಯಲ್ಲಿದ್ದ ಗುತ್ತಿನ ಸದಸ್ಯರನ್ನು ಪ್ರಶ್ನಿಸಿದರು.


2005ರಲ್ಲಿ ಎಸ್ ಇಝೆಡ್ ಭೂಸ್ವಾಧೀನ ಆಗುವ ಸಂದರ್ಭದಲ್ಲಿಯೇ ವಿರೋಧ ಬಂದಿತ್ತು. ಎಲ್ಲರೂ ಭೂಮಿಯನ್ನು ಬಿಟ್ಟುಕೊಡುವ ವಿಷಯ ಬಂದಾಗ, ಸ್ಥಳೀಯರೆಲ್ಲ ಅದಕ್ಕೆ ಒಪ್ಪಿ ಭೂಮಿ ಬಿಟ್ಟುಕೊಟ್ಟಿದ್ದರು. ಆದರೆ ದೈವ ಕಾಂತೇರಿ ಜುಮಾದಿ ಮಾತ್ರ ತಾನು ಈ ಜಾಗ ಬಿಟ್ಟು ಬೇರೆಲ್ಲೂ ಹೋಗಲಾರೆ ಎಂದು ಹೇಳಿದ್ದರಿಂದ ಅಲ್ಲಿಯೇ ಆರಾಧನೆ ಮಾಡಿಕೊಂಡು ಬಂದಿದ್ದೇವೆ. ಪ್ರತಿ ತಿಂಗಳು ಸಂಕ್ರಾಂತಿ ಸಂದರ್ಭದಲ್ಲಿ ಎಸ್ಇಝೆಡ್ ಅಧಿಕಾರಿಗಳ ಅನುಮತಿ ಪಡೆದು ಹೂ, ನೀರು ಇಡುತ್ತ ಬಂದಿದ್ದೆವು. ಪ್ರತಿ ವರ್ಷ ದೈವದ ಉತ್ಸವವನ್ನೂ ಮಾಡಿಕೊಂಡು ಬಂದಿದ್ದೇವೆ ಎಂದು ನೆಲ್ಲಿದಡಿ ಗುತ್ತಿನ ಸದಸ್ಯರು ಹೇಳಿದರು.
ಈಗ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಸಮಸ್ಯೆ ಆಗಿದೆಯೇ, ನೀವು ದೈವದ ಆಚರಣೆ ಮಾಡಿಲ್ಲವೇ, ಈಗ ನಿಮಗೆ ಆಗಿರುವ ತೊಂದರೆಯೇನು ಎಂದು ಜಿಲ್ಲಾಧಿಕಾರಿಗಳು ಕೇಳಿದ ಪ್ರಶ್ನೆಗೆ, ಸಂಕ್ರಾಂತಿ ಆಚರಣೆಗೆ ತೊಂದರೆ ಆಗಿಲ್ಲ. ಆದರೆ ಈ ಬಾರಿ ಅನುಮತಿ ಕೇಳಿದ ಸಂದರ್ಭದಲ್ಲಿ ಎಸ್ಇಝೆಡ್ ಅಧಿಕಾರಿಗಳು, ಮುಂದೆ ಈ ರೀತಿಯ ಪರ್ಮಿಶನ್ ಏನಿದ್ದರೂ ನೀವು ನಮ್ಮ ಚೆನ್ನೈ ವಿಭಾಗಕ್ಕೆ ಕೇಳಬೇಕು, ನಾವು ಕೊಡಲು ಬರುವುದಿಲ್ಲ ಎಂದಿದ್ದರು. ಇದರಿಂದ ಗೊಂದಲ ಆಗಿದೆ ಎಂದು ಸಭೆಯಲ್ಲಿದ್ದವರು ಹೇಳಿದರು. ಆದರೂ ದೈವದ ಕಾರ್ಯಕ್ಕೆ ಅಡ್ಡಿ ಆಗಿಲ್ಲ ಅಲ್ಲವೇ ಎಂದು ಜಿಲ್ಲಾಧಿಕಾರಿ ಕೇಳಿದಾಗ, ತೊಂದರೆ ಆಗಿಲ್ಲ ಎಂದರು. ಈ ವೇಳೆ, ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಉಮಾನಾಥ ಕೋಟ್ಯಾನ್, ಹಾಗಾದ್ರೆ ಈಗ ದಿಢೀರ್ ಎನ್ನುವ ರೀತಿ ಇಶ್ಯು ಎಬ್ಬಿಸಿದ್ದು ಯಾಕೆ, ಮೊದಲಿನಿಂದಲೂ ಸಮಸ್ಯೆ ಇದೆ, ದಿಢೀರ್ ಆಗಿರುವ ತೊಂದರೆ ಅಲ್ಲ ಅಲ್ಲವೇ ಎಂದು ಹೋರಾಟಗಾರರನ್ನು ಪ್ರಶ್ನೆ ಮಾಡಿದರು. ನಮಗೇನು ಗೊತ್ತಿಲ್ಲ, ನಾವೇನೂ ಹೋರಾಟ ಎಬ್ಬಿಸಿಲ್ಲ ಎಂದು ಅಲ್ಲಿದ್ದವರು ಉತ್ತರಿಸಿದರು.
ಹೋರಾಟಗಾರ ಶ್ರೀಕಾಂತ್ ಶೆಟ್ಟಿ ಜಿಲ್ಲಾಧಿಕಾರಿ ಬಳಿ ಅಲ್ಲಿ ರಸ್ತೆ ಇದ್ದರೂ, ಒಳಗೆ ಹೋಗಲು ಬಿಡುವುದಿಲ್ಲ. ನಮಗೆ ಫ್ರೀಯಾಗಿ ಬಿಟ್ಟು ಕೊಡಬೇಕು, ಪ್ರತಿ ಬಾರಿ ಪರ್ಮಿಶನ್ ಕೇಳುವ ಸ್ಥಿತಿ ಬರಬಾರದು. ಒಂದು ಕಿಮೀ ದೂರದಲ್ಲಿ ಗುತ್ತಿನ ಮನೆ ಇದೆ, ಅಲ್ಲಿಂದ ದೈವದ ಸ್ಥಾನಕ್ಕೆ ಬರಲು ಅಡ್ಡಿ ಇದೆ ಎಂದು ಹೇಳಿದರು. ಇದಕ್ಕುತ್ತರಿಸಿದ ಸಂಸದ ಬ್ರಿಜೇಶ್ ಚೌಟ, ನಮಗೆಲ್ಲ ದೈವದ ಮೇಲೆ ಭಯ, ಭಕ್ತಿ ಇದೆ. ಅಲ್ಲಿನ ಆಚರಣೆಗೆ ಯಾವುದೇ ಅಡ್ಡಿ ಬರಬಾರದು ಎನ್ನುವ ಆಸ್ಥೆಯೂ ಇದೆ. ಸರಕಾರದ ನಿಮಯ ಪ್ರಕಾರ, ದೈವದ ಆಚರಣೆಗೆ ಅಡ್ಡಿಯಾಗದಂತೆ ಸಮಸ್ಯೆ ಪರಿಹಾರಕ್ಕೆ ಏನು ಆಗಬೇಕೋ ಅದನ್ನು ಈ ವ್ಯವಸ್ಥೆಯೊಳಗಡೆ ಮಾಡಬೇಕಾಗುತ್ತದೆ. ಇದಕ್ಕೇನು ಪರಿಹಾರ ಕೈಗೊಳ್ಳಬಹುದು ಎನ್ನುವುದರ ಬಗ್ಗೆ ಪಟ್ಟಿ ಮಾಡಿಕೊಡಿ ಎಂದು ಎಸ್ಇಝೆಡ್ ಎಂಡಿ ಸೂರ್ಯನಾರಾಯಣ ಅವರಿಗೆ ಸೂಚಿಸಿದರು.
ಎಸ್ಇಝೆಡ್ ಉದ್ದೇಶಕ್ಕೆ ಕೆಐಎಡಿಬಿ ಮೂಲಕ ಭೂಸ್ವಾಧೀನ ಆಗಿರುವ ಜಾಗ ಇದು. ನೇರವಾಗಿ ಇದಕ್ಕೆ ಪರಿಹಾರ ಕೈಗೊಳ್ಳುವುದು ನಮ್ಮ ಕೈಯಲ್ಲೂ ಇಲ್ಲ. ಸರಕಾರದ ಮಾರ್ಗದರ್ಶನ ಪ್ರಕಾರ ನಾವು ನಡೆದುಕೊಳ್ಳುವುದು ಎಂದು ಎಸ್ಇಝೆಡ್ ಎಂಡಿ ಹೇಳಿದಾಗ, ಸರಕಾರದ ಮಟ್ಟದಲ್ಲಿ ಏನು ಆಗಬೇಕೋ ಅದನ್ನು ಮಾಡುತ್ತೇವೆ. ನೀವು ಅಲ್ಲಿ ಏನೆಲ್ಲ ಅವಕಾಶಗಳಿವೆ ಎನ್ನುವುದನ್ನು ಹೇಳಿ. ಪ್ರತಿ ಸಂಕ್ರಾಂತಿ ಸಂದರ್ಭದಲ್ಲಿ ದೈವದ ಆಚರಣೆಗೆ ಅಡ್ಡಿ ಆಗಬಾರದು. ಅದಕ್ಕೊಂದು ಟೇಬಲ್ ಮಾಡಿ. ಪ್ರತಿ ವರ್ಷದ ಉತ್ಸವಕ್ಕೂ ನಿಶ್ಚಿತ ದಿನದ ಟೇಬಲ್ ಮಾಡಿ, ಅದಕ್ಕೆ ಪ್ರತಿ ವರ್ಷವೂ ಮೊದಲೇ ಗೊತ್ತುಪಡಿಸಿ ಅನುಮತಿ ಪಡೆಯುವುದು ಇತ್ಯಾದಿ. ಆನಂತರ, ಶಾಶ್ವತ ಪರಿಹಾರ ಏನು ಮಾಡಬೇಕು ಅನ್ನುವುದನ್ನು ಮುಂದಿನ ದಿನಗಳಲ್ಲಿ ಚರ್ಚೆ ಮಾಡೋಣ ಎಂದು ಸಂಸದರು ಹೇಳಿದರು. ಅದಕ್ಕೆ ಸೂರ್ಯನಾರಾಯಣ ಮತ್ತು ನೆಲ್ಲಿದಡಿ ಗುತ್ತಿನ ಸದಸ್ಯರೂ ಒಪ್ಪಿಗೆ ನೀಡಿದರು.
ಎಸ್ಇಝೆಡ್ ಅಧಿಕಾರಿಗಳು ಮುಂದೆ ಪರ್ಮಿಶನ್ ಕೊಡಲ್ಲ ಎಂದು ಹೇಳಿರುವುದನ್ನು ನೆಲ್ಲಿದಡಿ ಗುತ್ತಿನ ಸದಸ್ಯರು ಪ್ರಶ್ನಿಸಿದಾಗ, ಅಂತಹ ಆದೇಶ ಮಾಡುವುದಕ್ಕೆ ಅವರಿಗೇನೂ ಅಧಿಕಾರ ಇಲ್ಲ ಎಂದು ಸಂಸದರು ಹೇಳಿದರು. ಕೊನೆಗೆ, ಎರಡು ದಿನಗಳಲ್ಲಿ ಪರಿಹಾರ ಏನು ಮಾಡಬಹುದು ಎಂಬ ಬಗ್ಗೆ ಪಟ್ಟಿ ಮಾಡಿಕೊಡಿ ಎಂದು ಎಸ್ಇಝೆಡ್ ಎಂಡಿಗೆ ಸಂಸದರು ಸೂಚಿಸಿದ್ದು, ಮುಂದಿನ ಸಭೆಯಲ್ಲಿ ಪರಿಹಾರ ಕ್ರಮಗಳ ಬಗ್ಗೆ ನಿರ್ಧಾರ ಮಾಡೋಣ ಎಂದು ಹೇಳಿ ಸಭೆ ಮುಗಿಸಿದರು.