ಮಂಗಳೂರು : ನೇತ್ರಾವತಿ ನಡುಗಡ್ಡೆಯಲ್ಲಿ ಜಾಗ ಕೊಟ್ಟರೆ, ಕಂಪನಿಗಳಿಂದ ಹೂಡಿಕೆ ಮಾಡಿಸುತ್ತೇನೆ , ಪ್ರವಾಸೋದ್ಯಮ ಅಭಿವೃದ್ಧಿ ಆಗತ್ತದೆ ; ವಿಧಾನಸಭೆಯಲ್ಲಿ ಅಶೋಕ್ ರೈ ಪ್ರಸ್ತಾಪಕ್ಕೆ ಒಪ್ಪಿಗೆ ಎಂದ ಸಚಿವ ಪಾಟೀಲ್.

ಮಂಗಳೂರು: ಪಾವೂರು ಉಳಿಯ, ಆಡಂಕುದ್ರು ಇನ್ನಿತರ ನದಿ ಮಧ್ಯದ ನಡುಗಡ್ಡೆಗಳನ್ನು ಸರಕಾರ ಅವಕಾಶ ಕೊಟ್ಟರೆ ಅತ್ಯುತ್ತಮವಾಗಿ ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿ ಪಡಿಸಬಹುದು. ಈ ಹಿಂದೆ ಅಂತಹ ನಡುಗಡ್ಡೆಗಳಲ್ಲಿ ಜಿಲ್ಲಾಧಿಕಾರಿಗಳು ಖಾಸಗಿಯವರಿಗೆ ಒಂದು ಎಕರೆಯಷ್ಟು ಜಾಗವನ್ನು ಅಲಾಟ್ ಮಾಡಿದ್ದರು. ಅವರಿಗೆ ಪರಿಹಾರ ಕೊಟ್ಟು ಜಾಗವನ್ನು ಖಾಸಗಿ ಕಂಪನಿಗಳಿಗೆ ಕೊಟ್ಟರೆ ಒಳ್ಳೆಯದಿತ್ತು. ಸರ್ಕಾರ ಅನುದಾನ ಕೊಡುವುದು ಬೇಡ, ಖಾಸಗಿ ಕಂಪನಿಗಳೇ ಅಲ್ಲಿ ಹೂಡಿಕೆ ಮಾಡಲು ತಯಾರಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ.
ಅಶೋಕ್ ರೈ ಮಾತಿಗೆ ಸ್ಪೀಕರ್ ಯುಟಿ ಖಾದರ್ ಕೂಡ ದನಿಗೂಡಿಸಿದ್ದು, ಪಾವೂರು ಉಳಿಯ ದ್ವೀಪಕ್ಕೆ ತೂಗುಸೇತುವೆ ಪ್ರಸ್ತಾಪ ಇಟ್ಟಿದ್ದೆ. ಆ ಬಗ್ಗೆಯೂ ಸರಕಾರ ಆದ್ಯತೆ ನೀಡಬೇಕು ಎಂದು ಕೇಳಿಕೊಂಡರು. ಇದಕ್ಕುತ್ತರಿಸಿದ ಸಚಿವ ಎಚ್.ಕೆ ಪಾಟೀಲ್, ಶಾಸಕ ಅಶೋಕ್ ರೈಯವರದ್ದು ಉತ್ತಮ ಸಲಹೆ. ನಡುಗಡ್ಡೆಗಳನ್ನು ಅಭಿವೃದ್ಧಿ ಪಡಿಸಿ ಪ್ರವಾಸೋದ್ಯಮ ಬೆಳೆಸಲು ಆದ್ಯತೆ ನೀಡುತ್ತೇನೆ. ಇದಕ್ಕೆ ನಮ್ಮ ಇಲಾಖೆಯ ಕಾರ್ಯದರ್ಶಿಯನ್ನು ಕಳಿಸಿಕೊಟ್ಟು ಜಾಗ ಪರಿಶೀಲನೆ ಮಾಡಿಸುತ್ತೇನೆ, ಜಾಗ ಕೊಟ್ಟರೆ ಕಂಪನಿಯವರು ಅಭಿವೃದ್ಧಿ ಪಡಿಸುವುದಾದರೆ ಉತ್ತಮ ಎಂದು ಹೇಳಿದರು. ಹಾಗೆಯೇ ಪಾವೂರು ಉಳಿಯ ದ್ವೀಪಕ್ಕೆ ತೂಗು ಸೇತುವೆ ರಚಿಸುವ ವಿಚಾರದಲ್ಲಿಯೂ ಗಂಭೀರ ಕ್ರಮ ವಹಿಸುತ್ತೇವೆ ಎಂದರು.
ಗೆಜ್ಜೆಗಿರಿ ಮತ್ತು ನಂದನಬಿತ್ತಿಲು ಅಭಿವೃದ್ಧಿ ಕಾರ್ಯಕ್ಕೂ ಅನುದಾನ ನೀಡಬೇಕು ಎಂದು ಶಾಸಕ ಅಶೋಕ್ ರೈ ಕೇಳಿಕೊಂಡಿದ್ದಾರೆ. ಇದಕ್ಕುತ್ತರಿಸಿದ ಸಚಿವ ಪಾಟೀಲ್, ಮುಂದಿನ ಬಜೆಟ್ ನಲ್ಲಿ ಅದಕ್ಕೆ ಅನುದಾನ ನೀಡುವಂತೆ ಮಾಡುತ್ತೇನೆ ಎಂದರು. ಈಗಾಗಲೇ ಬಿರುಮಲೆ ಬೆಟ್ಟಕ್ಕೆ ಎರಡು ಕೋಟಿ ಅನುದಾನವನ್ನು ಕ್ಷೇತ್ರಾಭಿವೃದ್ಧಿ ಅನುದಾನದಿಂದ ಕೊಟ್ಟಿದ್ದೇನೆ. ಅದರಲ್ಲಿ ಒಂದು ಕೋಟಿ ಅನುದಾನ ಬಿಡುಗಡೆ ಆಗಿದೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಇನ್ನಷ್ಟು ಅನುದಾನದ ಅಗತ್ಯವಿದೆ ಎಂದು ಹೇಳಿದರು.