ಮಂಗಳೂರು: ಎತ್ತಿಗೆ ಜ್ವರ ಬಂತೆಂದು, ಊರಿಗೆಲ್ಲ ಬರೆ ಹಾಕಿದ ಅಧಿಕಾರಿ ವರ್ಗ ! ಜೈಲು ಕೈದಿಗಳನ್ನು ನಿಯಂತ್ರಣ ಮಾಡಲಾಗದೇ ತಂತ್ರಜ್ಞಾನಕ್ಕೆ ಮೊರೆ, ಶಾರ್ಪ್ ತಂತ್ರಕ್ಕೆ ಜನರಿಗೆಲ್ಲ ನರಕಯಾತನೆ!!!..
ಮಂಗಳೂರು ನಗರದ ಹೃದಯಭಾಗ ಎನಿಸಿರುವ ಕೊಡಿಯಾಲಬೈಲಿನಲ್ಲಿ ಸಬ್ ಜೈಲ್ ಇದೆ. ಇದರಲ್ಲಿ 200 ಜನರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಇದ್ದರೂ, 320 ವಿಚಾರಣಾಧೀನ ಕೈದಿಗಳು ಇದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಕಡೆ ಅಪರಾಧ ಎಸಗಿ ನ್ಯಾಯಾಂಗ ಬಂಧನಕ್ಕೊಳಗಾದರೂ ಮಂಗಳೂರಿನ ಇದೇ ಜೈಲಿನಲ್ಲಿ ಹಾಕಬೇಕಾಗುತ್ತದೆ. ಹೀಗಾಗಿ ಸಣ್ಣ ಜಾಗದಲ್ಲಿ ಹೆಚ್ಚು ಮಂದಿಯನ್ನು ಹಿಡಿದಿಟ್ಟುಕೊಳ್ಳಬೇಕಾದ ಸ್ಥಿತಿ ಜೈಲಿನಲ್ಲಿದೆ. ಆದರೆ ಕೈದಿಗಳು ಜೈಲಿನಲ್ಲಿದ್ದೇ ಮೊಬೈಲ್ ಬಳಕೆ ಮಾಡುತ್ತಾರೆ, ರೌಡಿಗಳು ಜೈಲಿನಿಂದಲೇ ಹೊರಗಡೆ ಮೊಬೈಲ್ ಕರೆ ಮಾಡಿ ವಸೂಲಿ ಮಾಡುತ್ತಾರೆ, ಬೆದರಿಕೆ ಹಾಕುತ್ತಾರೆಂಬ ಆರೋಪಗಳಿವೆ.
ಇದಕ್ಕೆಲ್ಲ ಕಡಿವಾಣ ಹಾಕಬೇಕೆಂದು ಅಧಿಕಾರಿ ವರ್ಗ ಜೈಲಿನೊಳಗೆ ಜಾಮರ್ ಯಂತ್ರ ಅಳವಡಿಸಲು ಮುಂದಾಗಿದೆ. ಆದರೆ ಒಂದೇ ಬಾರಿಗೆ ನಾಲ್ಕು ಜಾಮರ್ ಯಂತ್ರ ಅಳವಡಿಸಿದ್ದು ಇದರಿಂದಾಗಿ ಸುತ್ತಮುತ್ತಲಿನ ನಿವಾಸಿಗಳು, ಕಚೇರಿ ಸಿಬಂದಿಗಳಿಗೆಲ್ಲ ಮೊಬೈಲ್ ನೆಟ್ವರ್ಕ್ ಸಿಗದೆ ಸಮಸ್ಯೆಯಾಗಿದೆ. ಜೈಲಿನ ಎದುರಲ್ಲೇ ದಿವ್ಯಾ ಕಂಫರ್ಟ್ಸ್ ಹೊಟೇಲ್ ಮತ್ತು ದಿವ್ಯಾ ಎಂಕ್ಲೇವ್ ಅಪಾರ್ಟ್ಮೆಂಟ್ ಹಾಗೂ ವಾಣಿಜ್ಯ ಸಂಕೀರ್ಣ ಇದೆ. ಅದರಲ್ಲಿರುವ ನಿವಾಸಿಗಳು, ವಾಣಿಜ್ಯ ಕಟ್ಟಡದ ವಿವಿಧ ಕಚೇರಿಗಳ ಸಿಬಂದಿಗಳು ಮೊಬೈಲ್ ರೇಂಜ್ ಸಿಗದೆ ಒಂದು ವಾರದಿಂದ ಸಮಸ್ಯೆ ಅನುಭವಿಸಿದ್ದಾರೆ.


ಇದಲ್ಲದೆ, ಜೈಲಿನ ಇನ್ನೊಂದು ಬದಿಯಲ್ಲೇ ಕೆನರಾ ಪಿಯು ಕಾಲೇಜು, ಬೆಸೆಂಟ್ ಕಾಲೇಜು ಇದೆ. ಮತ್ತೊಂದು ಭಾಗದಲ್ಲಿ ಎಸ್ಡಿಎಂ ಕಾನೂನು ಕಾಲೇಜು ಇದೆ. ಅಲ್ಲಿನ ಸಿಬಂದಿಯೂ ತೊಂದರೆ ಎದುರಿಸುತ್ತಿದ್ದಾರೆ. ಜೈಲಿನ ಹಿಂಭಾಗದ ಕೊಡಿಯಾಲಬೈಲಿನಲ್ಲಿ ಸುತ್ತಲೂ ಹಲವಾರು ಅಪಾರ್ಟ್ಮೆಂಟ್ ಕಟ್ಟಡಗಳಿದ್ದು ನೂರಾರು ನಿವಾಸಿಗಳಿದ್ದಾರೆ. ಸ್ಥಳೀಯರು ಹೇಳುವ ಪ್ರಕಾರ, ಒಂದು ಕಿಮೀ ದೂರದ ವರೆಗೂ ಜಾಮರ್ ಸಮಸ್ಯೆ ಇದ್ದು, ನೆಟ್ವರ್ಕ್ ಸಮಸ್ಯೆಯಾಗಿದೆ. ರೇಂಜ್ ಸಿಗದೇ ಇರುವುದರಿಂದ ಮೊಬೈಲ್ ಇಂಟರ್ನೆಟ್ ಕೂಡ ಸಿಗುತ್ತಿಲ್ಲ. ಇದರಿಂದಾಗಿ ತೀವ್ರ ತೊಂದರೆಯಾಗಿದೆ ಎಂದು ಬಂಧೀಖಾನೆ ಇಲಾಖೆಯ ಡಿಜಿಪಿ, ಎಂಎಲ್ಸಿ ಐವಾನ್ ಡಿಸೋಜ, ಶಾಸಕ ವೇದವ್ಯಾಸ ಕಾಮತ್ ಸೇರಿ ಹಲವರಿಗೆ ದೂರು ನೀಡಿದ್ದಾರೆ. ಐವಾನ್ ಡಿಸೋಜ ಅವರು, ಗೃಹ ಸಚಿವ ಪರಮೇಶ್ವರ್ ಅವರಿಗೆ ಕರೆ ಮಾಡಿ ಸಮಸ್ಯೆ ಗಮನಕ್ಕೆ ತಂದಿದ್ದಾರೆ. ಇನ್ನೆರಡು ದಿನದಲ್ಲಿ ಬೆಂಗಳೂರಿನಿಂದ ತಾಂತ್ರಿಕ ತಜ್ಞರನ್ನು ಕಳುಹಿಸಿಕೊಡುವುದಾಗಿ ಸಚಿವರು ತಿಳಿಸಿದ್ದಾರಂತೆ.

ಜೀವ ಕಳಕೊಳ್ಳುವ ಸ್ಥಿತಿಯಾದೀತು !
ಇದೇ ವೇಳೆ, ಮಂಗಳೂರಿನ ಖ್ಯಾತ ಹೃದಯ ತಜ್ಞ ಡಾ.ಪದ್ಮನಾಭ ಕಾಮತ್ ತನಗಾದ ತೊಂದರೆಯ ಬಗ್ಗೆ ಸಾರ್ವಜನಿಕರು ಮತ್ತು ಜಿಲ್ಲಾಡಳಿತದ ಗಮನ ಸೆಳೆದು ಪೋಸ್ಟ್ ಮಾಡಿದ್ದಾರೆ. ಹೊರನಾಡು ಕಡೆಯಿಂದ ಹಾರ್ಟ್ ಪೇಶಂಟ್ ಒಬ್ಬರು ಅರ್ಜಂಟಾಗಿ ಬರುತ್ತಿದ್ದಾಗ ನನಗೆ ಕರೆ ಮಾಡಿದ್ದರು. ಜೈಲು ಪರಿಸರದಲ್ಲಿಯೇ ನನ್ನ ಮನೆ ಇರುವುದರಿಂದ ಮೊಬೈಲ್ ಸಿಕ್ಕಿರಲಿಲ್ಲ. ಆನಂತರ, ನನ್ನ ಜೂನಿಯರ್ ವೈದ್ಯರು ಮನೆಗೆ ಬಂದು ಆಸ್ಪತ್ರೆಗೆ ತುರ್ತು ಕರೆಸಿಕೊಳ್ಳಬೇಕಾದ ಸ್ಥಿತಿಯಾಗಿತ್ತು. ಈ ರೀತಿಯ ಸಮಸ್ಯೆಯಿಂದ ಯಾರಾದ್ರೂ ಜೀವಕ್ಕೆ ಅಪಾಯಕ್ಕೀಡು ಮಾಡುವ ಸ್ಥಿತಿಯಾದೀತು. ಜೈಲು ಪರಿಸರದಲ್ಲಿ ಹಲವು ವೈದ್ಯರ ನಿವಾಸಗಳಿದ್ದು, ನೂರಾರು ನಿವಾಸಿಗಳಿದ್ದಾರೆ. ಸಮಸ್ಯೆ ಬಗ್ಗೆ ಜಿಲ್ಲಾಡಳಿತ, ಪೊಲೀಸ್ ಕಮಿಷನರ್, ಶಾಸಕರು ಸೇರಿ ತುರ್ತು ಸ್ಪಂದಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಜೈಲು ಸುಪರಿಡೆಂಟ್ ಎ.ಎಚ್.ಆರ್ಶೆಖಾನ್ ಅವರಲ್ಲಿ ಕೇಳಿದಾಗ, ನಾನು ಬರುವ ಮೊದಲು ಹಿಂದೆ ಜಾಮರ್ ಸರಿ ಇರಲಿಲ್ಲ. ಕೈದಿಗಳು ಮೊಬೈಲ್ ಬಳಸುತ್ತಾರೆಂದು ದೂರು ಬಂದಿದ್ದರಿಂದ ನಾಲ್ಕು 5ಜಿ ಜಾಮರ್ ಯಂತ್ರ ಅಳವಡಿಕೆ ಮಾಡಿದ್ದೇನೆ. ಈಗ ಪರಿಸರದ ನಿವಾಸಿಗಳಿಂದ ದೂರು ಬಂದಿದ್ದು, ಡಿಜಿ ಅವರಿಂದಲೂ ಸೂಚನೆ ಬಂದಿದೆ. ಅದರ ಪವರ್ ಕಡಿಮೆ ಮಾಡುವುದಕ್ಕೆ ಬೆಂಗಳೂರಿನಿಂದ ತಂತ್ರಜ್ಞರು ಬರಲಿದ್ದಾರೆ ಎಂದು ತಿಳಿಸಿದ್ದಾರೆ.