ಮಂಗಳೂರು : ಪಿಯುಸಿ ಪರೀಕ್ಷೆ ಭಯಕ್ಕೆ ಮೈಲಾರ ಸುತ್ತಿ ಬಂದ ದಿಗಂತ್ ರಿಮ್ಯಾಂಡ್ ಹೋಮಿಗೆ ; ತನ್ನ ಮನೆ ಎದುರಿನಲ್ಲೇ ರೈಲು ಸಾಗಿದ್ರೂ ಮರುಗದ ಹುಡುಗನ ಮನಸ್ಸು !

ಮಂಗಳೂರು : ಪಿಯುಸಿ ಪರೀಕ್ಷೆ ಭಯಕ್ಕೆ ಮೈಲಾರ ಸುತ್ತಿ ಬಂದ ದಿಗಂತ್ ರಿಮ್ಯಾಂಡ್ ಹೋಮಿಗೆ ; ತನ್ನ ಮನೆ ಎದುರಿನಲ್ಲೇ ರೈಲು ಸಾಗಿದ್ರೂ ಮರುಗದ ಹುಡುಗನ ಮನಸ್ಸು !

ಮಂಗಳೂರು : ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣದಲ್ಲಿ ಪೊಲೀಸರು ಕಡೆಗೂ ನಿಟ್ಟುಸಿರು ಬಿಟ್ಟಿದ್ದಾರೆ. ಹನ್ನೆರಡು ದಿನಗಳಿಂದ ಪೊಲೀಸರನ್ನೇ ದಿಕ್ಕೆಡುವಂತೆ ಮಾಡಿದ್ದ 17 ವರ್ಷದ ದಿಗಂತ್ ಉಡುಪಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ತಾನು ದ್ವಿತೀಯ ಪಿಯುಸಿ ಪರೀಕ್ಷೆಗೆ ಹೆದರಿ ಮನೆ ಬಿಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ.

ಪ್ರಕರಣ ಸಂಬಂಧಿಸಿ ದಕ್ಷಿಣ ಕನ್ನಡ ಎಸ್ಪಿ ಎನ್. ಯತೀಶ್ ಸುದ್ದಿಗೋಷ್ಟಿ ನಡೆಸಿ, ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಫೆಬ್ರವರಿ 25ರಂದು ಸಂಜೆ ವೇಳೆಗೆ ಮನೆಯಿಂದ ತೆರಳಿದ್ದ ದಿಗಂತ್ ರೈಲು ಹಳಿಯಲ್ಲಿ ತನ್ನ ಚಪ್ಪಲಿ ಮತ್ತು ಮೊಬೈಲನ್ನು ಬಿಟ್ಟು ರಸ್ತೆಯಲ್ಲಿ ನಡೆದುಕೊಂಡು ಹೋಗಿದ್ದಾನೆ. ಅರ್ಕುಳದಲ್ಲಿ ಬೈಕ್ ಒಂದರಲ್ಲಿ ಲಿಫ್ಟ್ ಪಡೆದು ಅಲ್ಲಿಂದ ಮಂಗಳೂರಿಗೆ ಬಸ್ ನಿಲ್ದಾಣಕ್ಕೆ ಬಂದಿದ್ದಾನೆ. ಮಂಗಳೂರಿನಿಂದ ಶಿವಮೊಗ್ಗ ತೆರಳುವ ಬಸ್ ಹತ್ತಿದ್ದು, ಆನಂತರ ಮೈಸೂರಿಗೆ ಬಸ್ಸಿನಲ್ಲಿ ಹೋಗಿದ್ದಾನೆ. ಅಲ್ಲಿಂದ ಬೆಂಗಳೂರಿನ ಕೆಂಗೇರಿ, ಆಬಳಿಕ ನಂದಿ ಹಿಲ್ಸ್ ತೆರಳಿ ಅಲ್ಲಿನ ರೆಸಾರ್ಟ್ ಒಂದರಲ್ಲಿ ಹಣಕ್ಕಾಗಿ ಕೆಲಸಕ್ಕೆ ಸೇರಿದ್ದಾನೆ. ಮೂರು ದಿನ ಕೆಲಸ ಮಾಡಿ ಸಂಬಳ ಪಡೆದು ಮತ್ತೆ ಮೈಸೂರಿಗೆ ಹೋಗಿದ್ದಾನೆ. ಅಲ್ಲಿಂದ ಮುರ್ಡೇಶ್ವರ ಎಕ್ಸ್ ಪ್ರೆಸ್ ರೈಲು ಹತ್ತಿದ್ದು, ಉಡುಪಿಗೆ ಬಂದು ಇಳಿದಿದ್ದಾನೆ. ರೈಲು ಶನಿವಾರ ಬೆಳಗ್ಗೆ 7.30ರ ವೇಳೆಗೆ ಫರಂಗಿಪೇಟೆಯ ಆತನ ಮನೆ ಮುಂದೆಯೇ ಹೋಗಿದ್ದು, ಪೊಲೀಸರ ಹುಡುಕಾಟವನ್ನೂ ನೋಡಿದ್ದಾನೆ.

ಮನೆಯಿಂದ ತೆರಳುವಾಗ 500 ರೂ. ಕೈಯಲ್ಲಿತ್ತು. ಮೂರು ದಿನ ಕೆಲಸ ಮಾಡಿದ ಸಂಬಳವೂ ಉಡುಪಿಗೆ ತಲುಪಿದಾಗ ಮುಗಿದು ಹೋಗಿತ್ತು. ಉಡುಪಿಯಲ್ಲಿ ಮಳಿಗೆಯೊಂದಕ್ಕೆ ಹೋಗಿ ಸಣ್ಣ ಪುಟ್ಟ ತಿನಿಸು ತಗೊಂಡು ತಪ್ಪಿಸಿಕೊಂಡು ಹೋಗಲು ಟ್ರೈ ಮಾಡಿದ್ದಾನೆ. ಅಷ್ಟರಲ್ಲಿ ಅಲ್ಲಿನ ಸಿಬಂದಿ ಹಿಡಿದು ವಿಚಾರಣೆ ನಡೆಸಿದ್ದಾರೆ. ಪಾದದಲ್ಲಿ ರಕ್ತ ಗಾಯ ಇದ್ದುದರಿಂದ ಅದರಿಂದ ಬಿದ್ದ ರಕ್ತ ಚಪ್ಪಲಿಗೆ ಅಂಟಿತ್ತು ಎಂದು ಹೇಳಿದ್ದಾನೆ. ಆತನಿಗೆ ಊಟ, ಬಟ್ಟೆ ಕೊಟ್ಟು ಉಪಚಾರ ಮಾಡಿದ್ದೇವೆ. ಈಗ ರಿಮ್ಯಾಂಡ್ ಹೋಮಲ್ಲಿ ಇರಿಸಿದ್ದು, ಹೆಬಿಯಸ್ ಕಾರ್ಪಸ್ ಹಾಕಿರುವುದರಿಂದ ಹೈಕೋರ್ಟಿನಲ್ಲಿ ಹಾಜರುಪಡಿಸಬೇಕಾಗಿದೆ ಎಂದರು ಎಸ್ಪಿ.

ವಿಚಾರಣೆ ವೇಳೆ ಮಾ.3ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಇದ್ದುದರಿಂದ ಸಾಕಷ್ಟು ತಯಾರಿ ಮಾಡಿಕೊಂಡಿಲ್ಲ ಎಂಬ ಭಯದಿಂದ ಮನೆ ಬಿಟ್ಟು ಹೋಗಿದ್ದಾಗಿ ತಿಳಿಸಿದ್ದಾನೆ. ನಾವು ಏಳು ತಂಡಗಳನ್ನು ರಚಿಸಿ ಹುಡುಕಾಟ ನಡೆಸಿದ್ದೇವೆ, ಸ್ಥಳೀಯ ಸಿಸಿ ಕ್ಯಾಮರಾಗಳನ್ನು ಚೆಕ್ ಮಾಡಿದ್ದೇವೆ. ನದಿಯಲ್ಲೂ ಹುಡುಕಾಡಿದ್ದು, ಡ್ರೋಣ್ ಬಳಸಿಯೂ ಸರ್ಚ್ ಮಾಡಿಸಿದ್ದೇವೆ. ಫರಂಗಿಪೇಟೆ ಆಸುಪಾಸಿನಲ್ಲಿ 2-3 ಬಾರಿ ಹುಡುಕಾಡಿದ್ದೆವು. ಆತನಿಗೆ ಯಾರಾದ್ರೂ ಕಾಂಟ್ಯಾಕ್ಟ್ ಮಾಡುತ್ತಾರೆಯೇ ಅಥವಾ ಆತ ಮನೆಯವರನ್ನು ಸಂಪರ್ಕ ಮಾಡುತ್ತಾನೆಯೇ ಎಂದು ಕಣ್ಣಿಟ್ಟಿದ್ದೆವು. ಉಡುಪಿಯಲ್ಲಿ ಡಿಮಾರ್ಟ್ ಮಳಿಗೆಯವರು ಆತನನ್ನು ಹಿಡಿದು ಮನೆಯವರಿಗೆ ಫೋನ್ ಮಾಡಿದ್ದಾರೆ ಎಂದು ಎಸ್ಪಿ ಯತೀಶ್ ತಿಳಿಸಿದ್ದಾರೆ.

ತನ್ನ ಮೊಬೈಲ್ ಮತ್ತು ಚಪ್ಪಲಿಯನ್ನು ರೈಲು ಹಳಿಯಲ್ಲಿ ಬಿಟ್ಟು ಹೋಗಿದ್ದು ಮನೆಯವರು ಮತ್ತು ಪೊಲೀಸರನ್ನು ಯಾಮಾರಿಸಲು ಮಾಡಿರುವಂತೆ ಕಾಣುತ್ತಿದೆ. ಆತನನ್ನು ಇನ್ನಷ್ಟು ವಿಚಾರಣೆ ಮಾಡಬೇಕಾಗಿದೆ. ಸದ್ಯಕ್ಕೆ ರಿಮ್ಯಾಂಡ್ ಹೋಮಿನಲ್ಲಿ ಇರಿಸಲಾಗಿದೆ. ಬೇರೆ ಯಾರಾದ್ರೂ ಆತನಿಗೆ ಸಹಾಯ ಮಾಡಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಎಸ್ಪಿ ತಿಳಿಸಿದ್ದಾರೆ. ಎಎಸ್ಪಿ ರಾಜೇಂದ್ರ ಡಿ.ಎಸ್, ಬಂಟ್ವಾಳ ಡಿವೈಎಸ್ಪಿ ವಿಜಯಪ್ರಸಾದ್ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article