ಮಂಗಳೂರು ಏರ್ಪೋರ್ಟ್ : ಜೀವದ ಜೊತೆ ಚೆಲ್ಲಾಟ ಬೇಡ, ಮಂಗಳೂರು ಏರ್ಪೋರ್ಟ್ ರನ್ ವೇ ವಿಸ್ತರಿಸಿ, ಸದನದಲ್ಲಿ ಧ್ವನಿ ಎತ್ತಿದ ಅಶೋಕ್ ರೈ!ಜಾಗ ಕೊಡುತ್ತೇವೆ ಇನ್ವೆಸ್ಟ್ ಕಂಪನಿಯವರೇ ಮಾಡಲಿ ಎಂದ ಸಚಿವರು.

ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ ವೇ ವಿಸ್ತರಣೆಯಾಗಬೇಕು. ಈ ಹಿಂದೆ ವಿಮಾನ ಅಪಘಾತದಿಂದ 158 ಜನ ಪ್ರಾಣ ಕಳಕೊಳ್ಳುವ ಸ್ಥಿತಿಯಾಗಿತ್ತು. ಅಂತಹ ಸ್ಥಿತಿ ಮತ್ತೆ ತರೋದು ಬೇಡ. ಕೇಂದ್ರ- ರಾಜ್ಯ ಸರಕಾರ ಅಂತ ಜೀವದ ಜೊತೆಗೆ ಚೆಲ್ಲಾಟ ಆಡಬೇಡಿ ಎಂದು ಪುತ್ತೂರು ಶಾಸಕ ಅಶೋಕ್ ರೈ ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದಾರೆ.
ಶೂನ್ಯವೇಳೆಯಲ್ಲಿ ಪ್ರಶ್ನೆ ಎತ್ತಿದ ಅಶೋಕ್ ರೈ, ಮಂಗಳೂರು ಏರ್ಪೋರ್ಟ್ ಅಂತಾರಾಷ್ಟ್ರೀಯ ಮಟ್ಟದ ನಿಲ್ದಾಣ ಆಗಿದ್ದರೂ, ರನ್ ವೇ ಸಣ್ಣದಾಗಿರುವುದರಿಂದ ದೊಡ್ಡ ಮಟ್ಟದ ವಿಮಾನಗಳು ಲ್ಯಾಂಡ್ ಆಗುವುದಿಲ್ಲ. ಸದ್ಯ 95 ಮೀಟರ್ ಇರುವ ರನ್ ವೇ ಅಂತಾರಾಷ್ಟ್ರೀಯ ಮಟ್ಟದ ನಿಯಮ ಪ್ರಕಾರ 150 ಮೀಟರ್ ಅಗಲ ಇರಬೇಕು. ಉದ್ದ 2.7 ಕಿಮೀ ಇದ್ದು, ಅದು ಕನಿಷ್ಠ 3.5 ಕಿಮೀ ಇರಬೇಕಾಗುತ್ತದೆ.
ಇದಲ್ಲದೆ, ಮಂಗಳೂರು ನಿಲ್ದಾಣ ಟೇಬಲ್ ಟಾಪ್ ರೀತಿಯಿದ್ದು, 2010ರಲ್ಲಿ ಇದೇ ಕಾರಣದಿಂದ ವಿಮಾನ ಡಿಕ್ಕಿಯಾಗಿ 158 ಜನ ಪ್ರಾಣ ಕಳಕೊಂಡಿದ್ದಾರೆ. ಕಳೆದ ಸಲ ನಾವು ಸ್ಪೀಕರ್ ಜೊತೆಗೆ ಹೋಗುವಾಗಲೇ ಎರಡು ಬಾರಿ ವಿಮಾನ ಟಚ್ ಆನ್ ಆಗಿತ್ತು. ನಾವು ಬದುಕುಳಿದಿದ್ದು ಪುಣ್ಯ. ರಾಜ್ಯ ಸರಕಾರ ಭೂಮಿ ಕೊಟ್ಟರೆ ರನ್ ವೇ ವಿಸ್ತರಣೆಯಾಗುತ್ತದೆ ಎಂದು ಹೇಳಿದರು. ಇದಕ್ಕೆ ದನಿಗೂಡಿಸಿದ ಶಾಸಕ ವೇದವ್ಯಾಸ ಕಾಮತ್, ಕೇಂದ್ರ ಸರಕಾರ ಪಿಪಿಪಿ ಮಾಡೆಲ್ ಪ್ರಕಾರ ವಿಮಾನ ನಿಲ್ದಾಣ ಅಭಿವೃದ್ಧಿ ಮಾಡುತ್ತಿದ್ದಾರೆ. ಭೂಮಿ ಬಿಟ್ಟುಕೊಟ್ಟರೂ ಅದರ ಒಡೆತನ ಸರಕಾರದ ಬಳಿಯಲ್ಲೇ ಇರುತ್ತದೆ ಎಂದು ಹೇಳಿದರು.
ಇದಕ್ಕುತ್ತರಿಸಿದ ಉತ್ತರಿಸಿದ ಘನ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್, ರನ್ ವೇ ವಿಸ್ತರಣೆ ಆಗಬೇಕು ಅನ್ನೋದು ಸತ್ಯ. ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾಗೆ ನಾವು ಭೂಮಿ ಕೊಟ್ಟಿರುವುದು ವಿಮಾನ ನಿಲ್ದಾಣಕ್ಕೆ. ಅವರು ಇದನ್ನು ಅದಾನಿಗೆ ಅಭಿವೃದ್ಧಿ ಪಡಿಸಲು ಕೊಟ್ಟಿದ್ದಾರೆ, ಈಗ ರಾಜ್ಯ ಸರಕಾರ ಮಾಡೋಕೆ ಆಗಲ್ಲ. ಕೇಂದ್ರ ಸರಕಾರವೇ ಹಣ ಭರಿಸಿ ಮಾಡಬೇಕು. ಭೂಮಿ ಸ್ವಾಧೀನ ಪಡಿಸಲು ಸಹಕಾರ ಕೊಡುತ್ತೇವೆ. ಕೇಂದ್ರ ಸರ್ಕಾರದ ಸಚಿವರ ಜೊತೆಗೆ ಚರ್ಚೆ ಮಾಡಿ ಇತ್ಯರ್ಥ ಪಡಿಸುತ್ತೇನೆ ಎಂದು ಹೇಳಿದರು.
ಕಂಪನಿಯೇ ಹಣ ಭರಿಸಲಿ – ಪಾಟೀಲ್
ಅಶೋಕ್ ರೈ ಪ್ರತಿಕ್ರಿಯಿಸಿ ರಾಜ್ಯ –ಕೇಂದ್ರ ಸರಕಾರ ಎಂದು ಹೊಣೆ ವಹಿಸಿಕೊಳ್ಳುವುದು ಸರಿಯಲ್ಲ. ಜೀವದ ಪ್ರಶ್ನೆಯಾಗಿದ್ದು ಮತ್ತೊಮ್ಮೆ ಅಪಘಾತಕ್ಕೆ ಹಾದಿ ಮಾಡಿಕೊಡಬೇಡಿ. ಅದಕ್ಕೇನು ಆಗಬೇಕೋ ಅದನ್ನು ಮಾಡಿ ಎಂದು ವಿನಂತಿಸಿದರು. ಪ್ರತಿಕ್ರಿಯೆ ನೀಡಿದ ಸಚಿವ ಪಾಟೀಲ್, ಪಿಪಿಪಿ ಅಂದ ಮೇಲೆ ಕಂಪನಿಯವರೇ ಹಣ ಭರಿಸಬೇಕು, ಅವಶ್ಯಕತೆ ಬಿದ್ದರೆ ಕೇಂದ್ರ ಸರಕಾರದ ಜೊತೆ ಮಾತುಕತೆ ಮಾಡುತ್ತೇವೆ. ಈಗಾಗಲೇ ಮಂಗಳೂರು ನಿಲ್ದಾಣವನ್ನು 50 ವರ್ಷಕ್ಕೆ ಲೀಸಿಗೆ ಕೊಟ್ಟಿದ್ದಾರೆ. ನಾವು ನೂರಾರು ಕೋಟಿ ಹಾಕಿ ವಿಮಾನ ನಿಲ್ದಾಣ ಮಾಡಿ ಖಾಸಗಿಯವರಿಗೆ ಕೊಡುವುದೇ ಆಗಿದೆ. ಶಿವಮೊಗ್ಗ, ಹುಬ್ಬಳ್ಳಿಯನ್ನು ಗುತ್ತಿಗೆ ಕೊಟ್ಟಿಲ್ಲ. ಆದರೆ ರೆಡಿ ಮಾಡಿ ಇರಿಸಿದ್ದೇವೆ. ಈಗ ಕೇಂದ್ರ ಸರಕಾರ ಮಾನಿಟೈಸೇಶನ್ ಆಫ್ ಏರ್ಪೋರ್ಟ್ ಅಂತ ಹೊಸ ರೂಲ್ಸ್ ತಂದಿದೆ. ನಾವು ಲ್ಯಾಂಡ್ ಕೊಟ್ಟಿದ್ದೇವೆ, ನಿರ್ವಹಣೆಗೆ ಮತ್ತೆ ಹಣ ಕೊಡಬೇಕಾದ ಸ್ಥಿತಿಯಿದೆ. ಇದಕ್ಕಾಗಿ ಹೇಳ್ತಾ ಇರೋದು, ಅಲ್ಲಿ ಭೂಮಿ ಬಿಟ್ಟು ಕೊಡುತ್ತೇವೆ. ಅದರ ಹಣವನ್ನು ಕಂಪನಿಯವರೇ ಭರಿಸಲಿ, 50 ಕೋಟಿ ಕೊಡುವುದು ಮಾಡಲಿ ಎಂದು ಹೇಳಿದರು.