ಉಡುಪಿ :ಇಂಜಿನಿಯರಿಂಗ್ ಓದುತ್ತಿದ್ದ ಕ್ರಿಶ್ಚಿಯನ್ ಯುವತಿಯನ್ನು ಅಪಹರಿಸಿದ ಮುಸ್ಲಿಂ ಯುವಕ ; ಲವ್ ಜಿಹಾದ್ ಆರೋಪ, ತನ್ನ ಮಗಳನ್ನು ತಂದೊಪ್ಪಿಸಿ ಎಂದು ಪೊಲೀಸರನ್ನು ಗೋಗರೆದ ಅಪ್ಪ.

ಉಡುಪಿ: ಎರಡನೇ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ ಕ್ರಿಶ್ಚಿಯನ್ ವಿದ್ಯಾರ್ಥಿನಿಯನ್ನು ಪ್ರೀತಿಸುವ ನೆಪದಲ್ಲಿ ಮುಸ್ಲಿಂ ಯುವಕನೊಬ್ಬ ಅಪಹರಿಸಿದ್ದಾನೆಂಬ ಆರೋಪ ಕೇಳಿಬಂದಿದೆ. ಘಟನೆ ಯುವತಿ ತಂದೆ ಗಾಡ್ವಿನ್ ದೇವದಾಸ್ ಎಂಬವರು ಉಡುಪಿ ನಗರ ಠಾಣೆಗೆ ದೂರು ನೀಡಿದ್ದು ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಮೂಡುಬಿದಿರೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ತನ್ನ ಮಗಳನ್ನು ಬಸ್ಸಿನಿಂದ ಇಳಿದು ಹೋಗುತ್ತಿದ್ದಾಗ ಉಡುಪಿಯ ಅಕ್ರಮ್ ಮೊಹಮ್ಮದ್ ಎಂಬಾತ ಅಪಹರಿಸಿದ್ದಾನೆ. ಮಗಳು ಕುಕ್ಕಿಕಟ್ಟೆ ಜಂಕ್ಷನ್‌ನಲ್ಲಿ ಕಾಲೇಜು ಬಸ್‌ನಿಂದ ಇಳಿದು ಚಿಕ್ಕಮ್ಮನ ಮನೆಗೆ ನಡೆದು ಹೋಗುತ್ತಿದ್ದಳು. ಈ ವೇಳೆ, ಅಕ್ರಮ್ ಮೊಹಮ್ಮದ್ ಎಂಬ ವ್ಯಕ್ತಿ ತನ್ನ ಸ್ಕೂಟರ್ ನಲ್ಲಿ ಆಕೆಯನ್ನು ಅಪಹರಿಸಿದ್ದಾನೆ ಎಂದು ಗಾಡ್ವಿನ್ ದೇವದಾಸ್ (53) ಉಡುಪಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.


ಘಟನೆಯನ್ನು ಕಂಡ ಬಸ್ ಚಾಲಕ ವಿಷಯ ತಿಳಿಸಿದ್ದಾರೆ. ತನ್ನ ಮಗಳು ಅಪ್ರಾಪ್ತಳಾಗಿದ್ದಾಗ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಮೊಹಮ್ಮದ್ ವಿರುದ್ಧ ಈ ಹಿಂದೆ ದೂರು ದಾಖಲಿಸಿದ್ದೆ. ಪೋಕ್ಸೋ ಅಡಿ ಕೇಸು ದಾಖಲಾಗಿತ್ತು. ಇದರ ಸೇಡು ತೀರಿಸಿಕೊಳ್ಳಲು ಈಗ ಆಕೆಯನ್ನು ಅಪಹರಿಸಿದ್ದಾನೆ ಎಂದು ದೇವದಾಸ್ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಬಿಎನ್‌ಎಸ್ ಸೆಕ್ಷನ್ 140 (3) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ತನ್ನ ಮಗಳು ಮುಸ್ಲಿಂ ಯುವಕನ ಲವ್ ಜಿಹಾದ್‌ಗೆ ಬಲಿಯಾಗಿದ್ದಾಳೆ ಎಂದು ಗಾಡ್ವಿನ್ ದೇವದಾಸ್ ಆರೋಪಿಸಿದ್ದಾರೆ. ಮೊಹಮ್ಮದ್ ತನ್ನ ಮಗಳೊಂದಿಗೆ ಇನ್‌ಸ್ಟಾಗ್ರಾಮ್ ಮೂಲಕ ಸಂಪರ್ಕ ಹೊಂದಿದ್ದ. ಅವರು ಜೊತೆಗಿದ್ದ ಫೋಟೋ, ವಿಡಿಯೋಗಳನ್ನು ಮುಂದಿಟ್ಟು ಬ್ಲಾಕ್ಮೇಲ್ ಮಾಡಿದ್ದು ಇದರ ಭಯದಲ್ಲಿ ನನ್ನ ಮಗಳು ಆತನೊಂದಿಗೆ ತೆರಳಿದ್ದಿರಬಹುದು. ಆದರೆ ನನ್ನ ಮಗಳು ನನಗೆ ಬೇಕು, ಪೊಲೀಸರು ತಂದು ನನ್ನ ಎದುರಲ್ಲಿ ನಿಲ್ಲಿಸಬೇಕು. ಒಂದು ವಾರದ ಹಿಂದೆ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ, ಗಾಡ್ವಿನ್ ದೇವದಾಸ್ ಅವರು ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ತಮ್ಮ ಮಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಉಡುಪಿ ನಗರ ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠ ಏಪ್ರಿಲ್ 4ಕ್ಕೆ ಮುಂದಿನ ವಿಚಾರಣೆಯನ್ನು ಮುಂದೂಡಿದೆ. ಈ ನಡುವೆ, ಮೊಹಮ್ಮದ್ ಅಕ್ರಮ್ ತಾನು ಯುವತಿ ಜೊತೆಗಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದು ತಾವು ಪ್ರಾಯ ಪ್ರಬುದ್ಧರಾಗಿದ್ದು ಒಟ್ಟಿಗಿದ್ದೇವೆ ಎಂದು ತಿಳಿಸಿದ್ದಾರೆ.