ಕುಕ್ಕೆ ಸುಬ್ರಹ್ಮಣ್ಯ : ರಾಜ್ಯದ ಶ್ರೀಮಂತ ದೇಗುಲ ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಸಮಿತಿಗೆ ಮರಕಳ್ಳರು, ಮಾಜಿ ರೌಡಿಗಳಿಗೂ ಸ್ಥಾನ ; ಉಸ್ತುವಾರಿ ಸಚಿವರಿಂದಲೇ ಶಿಫಾರಸು ಪತ್ರ, ಗ್ರಾಮಸ್ಥರಿಂದ ಮುಜರಾಯಿ ಸಚಿವರಿಗೆ ದೂರು

ಮಂಗಳೂರು, ಮಾ.27 : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ರಾಜ್ಯದ ಮುಜರಾಯಿ ಇಲಾಖೆಯ ಅತಿ ಶ್ರೀಮಂತ ದೇವಸ್ಥಾನಗಳಲ್ಲಿ ಒಂದು. ಸಹಜವಾಗಿಯೇ ಕುಕ್ಕೆ ದೇವಸ್ಥಾನದ ಆಡಳಿತ ಸಮಿತಿ ಸದಸ್ಯರಾಗುವುದಕ್ಕೂ ಪೈಪೋಟಿ ಇದ್ದೇ ಇರುತ್ತದೆ. ಹಾಗೆಂದು, ರೌಡಿಶೀಟರ್, ಮರಳು ವ್ಯಾಪಾರ ಮಾಡೋರು, ಮರಕಳ್ಳತನ ಮಾಡೋರೆಲ್ಲ ದೇವಸ್ಥಾನ ಸಮಿತಿಗೆ ಬಂದರೆ ಹೇಗಿರಬೇಡ? ಇಂಥದ್ದೊಂದು ಪ್ರಮಾದ ಆಗ್ತಿರೋದ್ರ ಬಗ್ಗೆ ಕುಕ್ಕೆ ಗ್ರಾಮಸ್ಥರು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿಗೆ ಪತ್ರ ಬರೆದಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಸಮಿತಿ ಸದಸ್ಯರಾಗಲು ಅಪರಾಧ ಹಿನ್ನೆಲೆಯುಳ್ಳವರೂ ಮುಂದಾಗಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಲು ಒಂಬತ್ತು ಮಂದಿಯ ಹೆಸರನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶಿಫಾರಸು ಮಾಡಿದ್ದಾರೆ. ಆದರೆ ಈ ಶಿಫಾರಸು ಪತ್ರದಲ್ಲಿ ಹರೀಶ್ ಇಂಜಾಡಿ ಎನ್ನುವ ಕಾಂಗ್ರೆಸ್ ಪಕ್ಷದ ಪುಢಾರಿಯ ಹೆಸರೂ ಸೇರ್ಪಡೆಯಾಗಿದ್ದಕ್ಕೆ ಆಕ್ಷೇಪ ಕೇಳಿಬಂದಿದೆ.

ಹರೀಶ್ ಇಂಜಾಡಿ ಎನ್ನುವಾತ ಒಕ್ಕಲಿಗ ಗೌಡ ಸಮುದಾಯದ ವ್ಯಕ್ತಿಯಾಗಿದ್ದು, ಸ್ಥಳೀಯವಾಗಿ ಅಪರಾಧ ಹಿನ್ನೆಲೆಯ ಮತ್ತು ಕುಕ್ಕೆಯಲ್ಲಿ ಮಠದ ಪರವಾಗಿ ಕೆಲಸ ಮಾಡುತ್ತಿದ್ದಾರೆಂಬ ಆಕ್ಷೇಪಗಳಿವೆ. ಇವರು ಸುಬ್ರಹ್ಮಣ್ಯ ಠಾಣೆಯಲ್ಲಿ ಮಾಜಿ ರೌಡಿಶೀಟರ್ ಆಗಿದ್ದು, ಮರಕಳ್ಳತನ, ಮರಳು ಮಾಫಿಯಾದಲ್ಲೂ ತೊಡಗಿಸಿಕೊಂಡಿದ್ದಾರೆ. ಇದಲ್ಲದೆ, ಈ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಣ್ಣುಕಾಯಿ ಟೆಂಡರ್ ನಲ್ಲಿ ಭಾಗವಹಿಸಿ ನಕಲಿ ಚೆಕ್ ನೀಡಿ, ಪೊಲೀಸರಿಂದ ಬಂಧಿಸಲ್ಪಟ್ಟು ಪ್ರಕರಣದಲ್ಲಿ ಜೈಲು ಸೇರಿದ್ದರು. ಇದೇ ವ್ಯಕ್ತಿ ರಾಜಕೀಯ ಒತ್ತಡದ ಮೂಲಕ ಕುಕ್ಕೆ ದೇವಸ್ಥಾನದ ಆಡಳಿತ ಸಮಿತಿಗೆ ಸೇರಿಕೊಳ್ಳಲು ಮುಂದಾಗಿದ್ದಾರೆ. ಇದಲ್ಲದೆ, ಶಿವರಾಮ ರೈ ಮತ್ತು ಅಶೋಕ್ ನೆಕ್ರಾಜೆ ಎಂಬವರು ಕೂಡ ಮುಂಚೂಣಿಯಲ್ಲಿದ್ದು, ಈ ಹಿಂದೆ ಇವರೆಲ್ಲ ರೌಡಿಲಿಸ್ಟ್ ನಲ್ಲಿದ್ದರು ಎಂಬುದಾಗಿ ಸುಬ್ರಹ್ಮಣ್ಯದ ಗ್ರಾಮಸ್ಥರು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿಗೆ ಪತ್ರ ಬರೆದಿದ್ದಾರೆ.

ಹರೀಶ್ ಇಂಜಾಡಿ ಸ್ಥಳೀಯವಾಗಿ ಕಾಂಗ್ರೆಸ್ ಮುಖಂಡ ಮತ್ತು ಗ್ರಾಪಂ ಸದಸ್ಯನೂ ಆಗಿದ್ದು, ಮರಳು ವ್ಯಾಪಾರ ಸೇರಿದಂತೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪೊಲೀಸರೊಂದಿಗೆ ಸೇರಿಕೊಂಡು ಅಕ್ರಮ ದಂಧೆಗಳನ್ನು ನಡೆಸುತ್ತಿದ್ದಾರೆಂಬ ಆರೋಪಗಳಿವೆ. ಇಂಥವರ ಕೈಗೆ ದೇವಸ್ಥಾನದ ಚುಕ್ಕಾಣಿ ನೀಡಿದರೆ ಸರಕಾರ ಮತ್ತು ದೇವಸ್ಥಾನದ ಗೌರವಕ್ಕೆ ಚ್ಯುತಿಯಾಗುವುದು ನಿಶ್ಚಿತ. ಹೀಗಾಗಿ ದೇವಳದ ಆಡಳಿತವನ್ನು ಪ್ರಾಮಾಣಿಕರಿಗೆ ಕೊಟ್ಟು ದೇವಸ್ಥಾನದ ಗೌರವ ಉಳಿಸಿಕೊಳ್ಳಿ ಎಂದು ಪತ್ರದಲ್ಲಿ ಮುಜರಾಯಿ ಸಚಿವರನ್ನು ಆಗ್ರಹಿಸಿದ್ದಾರೆ.
ಇದರ ನಡುವಲ್ಲೇ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಒಂಬತ್ತು ಹೆಸರುಗಳನ್ನು ಶಿಫಾರಸು ಮಾಡಿದ್ದು, ಅದರಲ್ಲಿ ಹರೀಶ್ ಇಂಜಾಡಿ, ಅಶೋಕ್ ನೆಕ್ರಾಜೆ ಹೆಸರು ಕೂಡ ಇದೆ. ಇದಲ್ಲದೆ, ಜಯಪ್ರಕಾಶ್ ರೈ, ಲೀಲಾ ಮನಮೋಹನ್, ಪ್ರವೀಣ ಪಿ.(ಮಹಿಳೆ), ಬಿ.ರಘು(ಪರಿಶಿಷ್ಟ ಜಾತಿ), ಅಜಿತ್ ಕುಮಾರ್, ಮಹೇಶ್ ಕುಮಾರ್ ಕರಿಕ್ಕಳ ಹೆಸರು ಈ ಪಟ್ಟಿಯಲ್ಲಿ ಇದೆ. ಉಸ್ತುವಾರಿ ಸಚಿವರು ಶಿಫಾರಸು ಮಾಡಿರುವ ಪತ್ರದಲ್ಲಿ ಅಪರಾಧ ಹಿನ್ನೆಲೆಯುಳ್ಳವರ ಹೆಸರು ಇರುವುದನ್ನು ಆಕ್ಷೇಪಿಸಿ ಕುಕ್ಕೆ ಸುಬ್ರಹ್ಮಣ್ಯ ಗ್ರಾಮಸ್ಥರು ಮುಜರಾಯಿ ಸಚಿವರಿಗೆ ಪತ್ರ ಬರೆದಿದ್ದು, ಅದರ ಜೊತೆಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಅಪರಾಧ ದಾಖಲಾದ ವಿಚಾರದ ಪತ್ರವನ್ನೂ ಲಗತ್ತಿಸಿದ್ದಾರೆ.