ಸಿಡ್ನಿ :ಲಕ್ಷಾಂತರ ಮಕ್ಕಳಿಗೆ ಜೀವದಾನಿಯಾಗಿದ್ದ ‘ದಾನಶೂರ ಕರ್ಣ’ ಜೇಮ್ಸ್ ಹ್ಯಾರಿಸನ್ ; ಆಸ್ಟ್ರೇಲಿಯಾದ ಈ ಮನುಷ್ಯನ ರಕ್ತಕ್ಕಿತ್ತು ಅತಿ ವಿಶೇಷ ಶಕ್ತಿ ! ನವಜಾತ ಶಿಶುಗಳ ರೋಗಕ್ಕೆ ಹ್ಯಾರಿಸನ್ ಏಂಟಿ ಡಿ ಇಂಜೆಕ್ಷನ್

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಅತ್ಯಂತ ಅಪರೂಪದ ರಕ್ತ ಕಣಗಳಿದ್ದ ಜೇಮ್ಸ್ ಹ್ಯಾರಿಸನ್ ಎಂಬ ವ್ಯಕ್ತಿಯಿದ್ದರು. ಬರೋಬ್ಬರಿ 1100 ಬಾರಿ ಅವರ ದೇಹದಿಂದ ರಕ್ತವನ್ನು ತೆಗೆದು ಅದನ್ನು ಪ್ಲಾಸ್ಮಾ ರೂಪಕ್ಕಿಳಿಸಿ ನವಜಾತ ಶಿಶುಗಳಿಗೆ ಕೊಡಲಾಗಿತ್ತು. ನವಜಾತ ಶಿಶುಗಳಿಗೆ ಅಥವಾ ತಾಯಿ ಹೊಟ್ಟೆಯಲ್ಲಿ ಭ್ರೂಣಾವಸ್ಥೆಯಲ್ಲಿರುವಾಗಲೇ ಕೆಂಪು ರಕ್ತ ಕಣ ಕೊರತೆಯಿಂದಾಗಿ ಮಾರಣಾಂತಿಕ ರೋಗ ತಗಲಿದಾಗ, ಇವರ ರಕ್ತದಿಂದ ಮಗುವಿಗೆ ಚೈತನ್ಯ ಕರುಣಿಸಲಾಗಿತ್ತು.
ಜೇಮ್ಸ್ ಹ್ಯಾರಿಸನ್ ಅವರನ್ನು ಆಸ್ಟ್ರೇಲಿಯಾದಲ್ಲಿ ಚಿನ್ನದ ಬಾಹುಗಳಿದ್ದ ಮನುಷ್ಯ ಎಂದು ಗೌರವದಿಂದ ಕರೆಯುತ್ತಿದ್ದರು. ಇವರ ರಕ್ತವನ್ನು ಬಳಸಿ 2.4 ಮಿಲಿಯನ್ ಡೋಸ್ ಏಂಟಿ ಡಿ ಇಂಜೆಕ್ಷನ್ ಗಳನ್ನು ತಯಾರಿಸಲಾಗಿತ್ತು. ಹೀಮೋಲಿಟಿಕ್ ರೋಗದಿಂದ ಬಳಲುವ ನವಜಾತ ಶಿಶುಗಳಿಗೆ ನೀಡಲಾಗುವ ಈ ಡೋಸ್ ಗಳನ್ನು ಇವರ ರಕ್ತದಿಂದ ಮರು ಉತ್ಪನ್ನ ಮಾಡಲಾಗಿತ್ತು. ಹ್ಯಾರಿಸನ್ ಅವರ ರಕ್ತದಲ್ಲಿ ಅಂಥ ವಿಶೇಷ ಶಕ್ತಿಯಿತ್ತು. ಅತ್ಯಂತ ಅಪರೂಪ ಮತ್ತು ಅತಿ ಮೌಲ್ಯದ್ದಾಗಿತ್ತು ಎಂದು ಆಸ್ಟ್ರೇಲಿಯಾದ ರೆಡ್ ಕ್ರಾಸ್ ಸಂಸ್ಥೆ ಹೇಳುತ್ತದೆ.





ಏನಿದು ಏಂಟಿ ಡಿ ಇಂಜೆಕ್ಷನ್ ?
ಆರ್ ಎಚ್ ಡಿ ನೆಗೆಟಿವ್ ರಕ್ತವುಳ್ಳ ತಾಯಂದಿರ ಹೆರಿಗೆಯಾದಲ್ಲಿ ಕೆಲವೊಮ್ಮೆ ಮಗುವಿಗೆ ಹೀಮೋಲಿಟಿಕ್ ರೋಗ ಕಾಣಿಸಿಕೊಳ್ಳುವ ಅಪಾಯ ಇರುತ್ತದೆ. ಇದನ್ನು ಮಗು ಗರ್ಭಾಶಯದಲ್ಲಿರುವಾಗಲೇ ಪತ್ತೆ ಹಚ್ಚುವುದಕ್ಕೂ ಸಾಧ್ಯವಿದೆ. ಮಾರಣಾಂತಿಕ ಕಾಯಿಲೆ ಇದಾಗಿದ್ದು, ಈ ಕಾಯಿಲೆಗೆ ತುತ್ತಾದ ಮಗುವಿಗೆ ಅಥವಾ ಭ್ರೂಣದಲ್ಲಿರುವಾಗಲೇ ಬದುಕಿಸಲು ಡಿ ಏಂಟಿ ಇಂಜೆಕ್ಷನ್ ನೀಡುತ್ತಾರೆ. ಈ ಇಂಜೆಕ್ಷನನ್ನು ಜೇಮ್ಸ್ ಹ್ಯಾರಿಸನ್ ಅವರ ರಕ್ತದಿಂದ ಉತ್ಪಾದನೆ ಮಾಡಲಾಗುತ್ತಿತ್ತು ಎನ್ನುವುದು ವಿಶೇಷ.
ಹ್ಯಾರಿಸನ್ ಅವರು ಮೊದಲ ಬಾರಿಗೆ 1954ರಲ್ಲಿ ಈ ರೀತಿ ತನ್ನ ರಕ್ತವನ್ನು ದಾನ ಕೊಟ್ಟಿದ್ದರು. ಆನಂತರ, ಅದೆಷ್ಟೋ ಬಾರಿ ತುರ್ತು ಸಂದರ್ಭಗಳಲ್ಲಿ ಇವರನ್ನು ಆಸ್ಪತ್ರೆಗೆ ಕರೆಯಲಾಗಿತ್ತು. 2018ರಲ್ಲಿ ಕೊನೆಯ ಬಾರಿಗೆ ಹ್ಯಾರಿಸನ್ ತನ್ನ 81 ವಯಸ್ಸಿನಲ್ಲಿ ರಕ್ತದಾನ ಮಾಡಿದ್ದರು. 14 ವರ್ಷದಲ್ಲಿದ್ದಾಗ ಹ್ಯಾರಿಸನ್ ಅವರಿಗೆ ಲಂಗ್ಸ್ ಸರ್ಜರಿ ಆಗಿತ್ತು. ಆಗಲೇ ಇವರ ರಕ್ತದಲ್ಲಿ ವಿಶೇಷ ಮೌಲ್ಯ ಇದೆಯೆನ್ನುವುದು ವೈದ್ಯಲೋಕಕ್ಕೆ ಗೊತ್ತಾಗಿತ್ತು. 1960ರ ವೇಳೆಗೆ ಡಿ ಇಂಜೆಕ್ಷನ್ ಪತ್ತೆಹಚ್ಚಿದ ಬಳಿಕ ನವಜಾತ ಶಿಶುಗಳ ಮಾರಣಾಂತಿಕ ರೋಗಕ್ಕೆ ಔಷಧಿ ದೊರಕಿತ್ತು. ತಂದೆ ಮತ್ತು ತಾಯಿಯ ರಕ್ತ ಮಿಸ್ ಮ್ಯಾಚ್ ಆದಲ್ಲಿ ಶಿಶುಗಳಲ್ಲಿ ಕೆಂಪು ರಕ್ತ ಕಣ ಕೊರತೆಯ ಹಿಮೋಲಿಟಿಕ್ ರೋಗ ಕಾಣಿಸಿಕೊಳ್ಳುತ್ತದೆ.
ಮಗುವಿಗೆ ಏಂಟಿ ಡಿ ಇಂಜೆಕ್ಷನ್ ನೀಡಿದಲ್ಲಿ ಇಮ್ಯುನಿಟಿ ಹೆಚ್ಚುವುದಲ್ಲದೆ ಯಾವುದೇ ವೈರಸ್ ವಿರುದ್ಧ ಹೋರಾಡುವ ಸಾಮರ್ಥ್ಯ ದೊರಕುತ್ತದೆ. ರೋಗದಿಂದ ಪಾರಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಹ್ಯಾರಿಸನ್ ಅವರ ರಕ್ತದಲ್ಲಿ ಏಂಟಿ ಡಿ ಇಂಜೆಕ್ಷನ್ ಉತ್ಪಾದಿಸಬಲ್ಲ ಪ್ಲಾಸ್ಮಾ ಇದ್ದಿದ್ದರಿಂದ ಅವರ ರಕ್ತಕ್ಕೆ ಭಾರೀ ಬೇಡಿಕೆಯಿತ್ತು. ಆದರೆ ಅವರೆಂದೂ ತನ್ನ ರಕ್ತವನ್ನು ಮಾರಿಕೊಂಡಿರಲಿಲ್ಲ. 1999ರಲ್ಲಿ ಆಸ್ಟ್ರೇಲಿಯಾದ ಅತ್ಯಂತ ಗೌರವದ ಆರ್ಡರ್ ಆಫ್ ಆಸ್ಟ್ರೇಲಿಯಾವನ್ನು ಪ್ರದಾನ ಮಾಡಲಾಗಿತ್ತು. ಆಸ್ಟ್ರೇಲಿಯನ್ ರೆಡ್ ಕ್ರಾಸ್ ಸಿಇಓ ಸ್ಟೀಫನ್ ಕಾರ್ನೆಲಿಸನ್ ಹೇಳುವ ಪ್ರಕಾರ, ಹ್ಯಾರಿಸನ್ ರೆಡ್ ಕ್ರಾಸ್ ಪಾಲಿಗೆ ಜೀವದಾನಿಯಾಗಿದ್ದರು. ಏಂಟಿ ಡಿ ಗುಣ ಇರುವಂತಹ ರಕ್ತದಾನಿಗಳನ್ನು ಹುಡುಕುವುದು ಬಹುದೊಡ್ಡ ಸವಾಲು ಎನ್ನುತ್ತಾರೆ. ಇಂಥ ಅಪರೂಪದ ರಕ್ತದ ಗುಣಗಳಿದ್ದ ಹ್ಯಾರಿಸನ್ ಅವರು 2025ರ ಫೆ.17ರಂದು ತನ್ನ 88ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ