ಹರಿಯಾಣ:ಮನೆ ಮಾಲೀಕನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ ; ಯೋಗ ಶಿಕ್ಷಕನನ್ನು ಅಪಹರಿಸಿ ಜೀವಂತ ಸಮಾಧಿ ಮಾಡಿದ ದುರುಳರು, ಮೂರು ತಿಂಗಳ ಬಳಿಕ ಕೃತ್ಯ ಬೆಳಕಿಗೆ..!

ಹರಿಯಾಣ : ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆಂಬ ಶಂಕೆಯಲ್ಲಿ ಹರ್ಯಾಣದಲ್ಲಿ ಯೋಗ ಶಿಕ್ಷಕನೊಬ್ಬನನ್ನು ಕಿಡ್ನಾಪ್ ಮಾಡಿ ಜೀವಂತ ಸಮಾಧಿ ಮಾಡಿರುವ ಪೈಶಾಚಿಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರೋಹ್ಟಕ್ ನಗರದ ಬಾಬಾ ಮಸ್ತ್ ನಾಥ್ ಯುನಿವರ್ಸಿಟಿಯ ಯೋಗ ಶಿಕ್ಷಕ ಜಗದೀಪ್ ಜೀವಂತ ಸಮಾಧಿ ಮಾಡಲ್ಪಟ್ಟು ಕೊಲೆಯಾದವರು.
2024ರ ಡಿಸೆಂಬರ್ 24ರಂದು ಜಗದೀಪ್ ದಿಢೀರ್ ಎನ್ನುವಂತೆ ನಾಪತ್ತೆಯಾಗಿದ್ದರು. ಈ ಬಗ್ಗೆ ನಾನಾ ಕಡೆಯಲ್ಲಿ ಹುಡುಕಾಡಿದ ಬಳಿಕ ಫೆ.23ರಂದು ಆತನ ಕುಟುಂಬ ಪೊಲೀಸರಿಗೆ ನಾಪತ್ತೆ ದೂರು ನೀಡಿತ್ತು. ಪೊಲೀಸರು ಆತನ ಮೊಬೈಲ್ ಕರೆ ಆಧರಿಸಿ ತನಿಖೆ ಶುರು ಮಾಡಿದ್ದರು. ಎರಡು ವಾರಗಳ ಹುಡುಕಾಟದ ಬಳಿಕ ಮಾರ್ಚ್ 24ರಂದು ಹರ್ದೀಪ್ ಮತ್ತು ಧರ್ಮಪಾಲ್ ಎಂಬಿಬ್ಬರನ್ನು ಬಂಧಿಸಿದ್ದು, ಜೀವಂತ ಸಮಾಧಿ ಮಾಡಿರುವ ಘಟನೆಯನ್ನು ಬಯಲು ಮಾಡಿದ್ದಾರೆ.
ಜಗದೀಪ್ ವಾಸವಿದ್ದ ಮನೆಯ ಮಾಲೀಕನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದಾನೆ ಎಂಬ ಶಂಕೆಯಲ್ಲಿ ಮನೆ ಮಾಲೀಕ ಕೊಲೆಗೆ ಸಂಚು ರೂಪಿಸಿದ್ದ. ಇದರಂತೆ, ಆಗಂತುಕರು ಜಗದೀಪ್ ಅವರನ್ನು ಹಿಡಿದು ಹಗ್ಗದಲ್ಲಿ ಕೈಕಾಲು ಕಟ್ಟಿ ಪೈಂತವಾಸ್ ಎನ್ನುವ ಗ್ರಾಮಕ್ಕೆ ಕರೆದೊಯ್ದು ಅಲ್ಲಿ ಮೊದಲೇ ತೆಗೆದಿಟ್ಟಿದ್ದ ಗುಂಡಿಗೆ ಹಾಕಿ ಮಣ್ಣು ತುಂಬಿಸಿದ್ದಾರೆ. ಆಮೂಲಕ ಯೋಗ ಶಿಕ್ಷಕನನ್ನು ಜೀವಂತವಾಗಿಯೇ ಉಸಿರು ಕಟ್ಟಿಸಿ ಸಾಯುವಂತೆ ಮಾಡಿದ್ದಾರೆ. ಏಳು ಅಡಿ ಆಳದ ಗುಂಡಿಯಲ್ಲಿ ಶವ ಇರುವುದನ್ನು ಪೊಲೀಸರು ಪತ್ತೆಹಚ್ಚಿ ಹೊರ ತೆಗೆದಿದ್ದು ಪೋಸ್ಟ್ ಮಾರ್ಟಂ ಮಾಡಲು ಕಳಿಸಿದ್ದಾರೆ.