ಬೆಂಗಳೂರು:ರೀಲ್ಸ್ ಹುಚ್ಚಿಗೆ ಕೈಯಲ್ಲಿ ಲಾಂಗ್ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ಶೋಕಿ ; ಬಿಗ್ ಬಾಸ್ ಸ್ಪರ್ಧಿ ರಜತ್, ವಿನಯ್ ಗೌಡ ಮೇಲೆ FIR ಹಾಕಿದ ಪೊಲೀಸ್

ಬೆಂಗಳೂರು: ಮಾರಕಾಸ್ತ್ರ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ಶಾರ್ಟ್ ವಿಡಿಯೋ ಮಾಡಿದ್ದ ಆರೋಪದಡಿ ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ ಹಾಗೂ ವಿನಯ್ ಗೌಡ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಬಸವೇಶ್ವರ ನಗರ ಪೊಲೀಸ್ ಠಾಣೆಯ ಸಾಮಾಜಿಕ ಜಾಲತಾಣ ಘಟಕದ ಉಸ್ತುವಾರಿ ಪಿಎಸ್ಐ ಭಾನುಪ್ರಕಾಶ್ ನೀಡಿದ ದೂರಿನನ್ವಯ ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ರಜತ್ ಹಾಗೂ ವಿನಯ್ ಮಾರಕಾಸ್ತ್ರ ಹಿಡಿದು ಸುಮಾರು 18 ಸೆಕೆಂಡ್‌ಗಳ ಶಾರ್ಟ್ ವಿಡಿಯೋ ಮಾಡಿದ್ದು, ಅದನ್ನು ಬುಜ್ಜಿ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಕಾನೂನುಬಾಹಿರವಾಗಿ ಶಾಂತಿಭಂಗದ ದುರ್ವರ್ತನೆ ತೋರಲಾಗಿದೆ ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ

ಬೆಂಗಳೂರಿನ ಟ್ರಾಫಿಕ್ ಪೊಲೀಸರು ಹಾಗೂ ಸೈಬರ್ ಸೆಕ್ಯುರಿಟಿ ವಿಂಗ್ ಸೋಶಿಯಲ್ ಮೀಡಿಯಾಗಳಲ್ಲಿ ಹೀಗೆ ಆತಂಕ ಹುಟ್ಟಿಸುವಂತಹ ರೀಲ್ಸ್ ಮಾಡುವವರ ಮೇಲೆ ಕಣ್ಣಿಟ್ಟಿದೆ. ಇಂತಹ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಲ್ಲಿ ಕೇಸ್ ದಾಖಲಾಗುತ್ತೆ. ಈಗ ಬಿಗ್ ಬಾಸ್ ಸ್ಪರ್ಧಿಗಳು ವಿನಯ್ ಗೌಡ ಹಾಗೂ ರಜತ್ ವಿರುದ್ಧ ಆಗಿದ್ದು ಕೂಡ ಇದೇನೆ.
ರೀಲ್ಸ್ ಮಾಡುವ ಭರಾಟೆಯಲ್ಲಿ ಲಾಂಗ್ ಹಿಡಿದು ರಸ್ತೆಯಲ್ಲಿ ಒಡಾಡಿದ್ದರು. ವಿನಯ್ ಗೌಡ ಹಾಗೂ ರಜತ್ ಇಬ್ಬರೂ ಹೆಚ್ಚು ಕಡಿಮೆ ಒಂದೇ ಕಾಸ್ಟ್ಯೂಮ್‌ನಲ್ಲಿ ಕೈಯಲ್ಲಿ ನಕಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ಆ ರೀಲ್ಸ್ ಅನ್ನು ರಜತ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದರು. ಹೀಗೆ ಲಾಂಗ್ ಹಿಡಿದು ವಿಡಿಯೋ ಮಾಡುವುದು, ರೀಲ್ಸ್ ಮಾಡುವುದು ಕಾನೂನು ಬಾಹಿರ ಆಗಿದೆ. ಇದರಿಂದ ಸಾರ್ವಜನಿಕರಲ್ಲಿ ಭಯದ ವಾತಾವಾರಣ ಸೃಷ್ಟಿಯಾಗಿದೆ ಎಂದು ಆರೋಪ ಮಾಡಿದ ಬೆನ್ನಲ್ಲೇ ಬಸವೇಶ್ವರ ನಗರ ಪೊಲೀಸರು ದೂರನ್ನು ದಾಖಲು ಮಾಡಿದ್ದಾರೆ.
ಈ ವಿಡಿಯೋ ನೋಡಿ ಜನ ಸಾಮಾನ್ಯರ ಮೇಲೆ ಇಂತಹ ರೀಲ್ಸ್ ಮಾಡಿದರೆ ದೂರು ದಾಖಲಾಗುತ್ತೆ. ಆದರೆ, ಸೆಲೆಬ್ರಿಟಿಗಳ ಮೇಲೆ ಯಾಕಿಲ್ಲ? ಎಂದು ಪೊಲೀಸರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಜನರಿಂದ ಟೀಕೆಗೆ ಒಳಗಾದ ಬೆನ್ನಲ್ಲೇ ವಿನಯ್ ಗೌಡ ಹಾಗೂ ರಜತ್ ಕಿಶನ್ ವಿರುದ್ಧ ದೂರು ದಾಖಲಿಸಿದ್ದಾರೆ. ಹೀಗಾಗಿ ಇಬ್ಬರಿಗೂ ಸಂಕಷ್ಟ ಎದುರಾಗಿದೆ.