ಪುತ್ತೂರು :ಸಿಝೆರಿಯನ್ ಬಳಿಕ ಬಾಣಂತಿ ಹೊಟ್ಟೆಯಲ್ಲಿ ಬಟ್ಟೆ ಉಳಿದ ಪ್ರಕರಣ; ಪುತ್ತೂರು ಡಾಕ್ಟರ್ ವಿರುದ್ಧ FIR ದಾಖಲು, 2 ದಿನಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆ ಗೆ ಸೂಚನೆ!!
ಸುಪ್ರೀಂ ಕೋರ್ಟ್ ಮಾರ್ಗದರ್ಶಿ ಸೂತ್ರದ ಪ್ರಕಾರ ವೈದ್ಯಕೀಯ ನಿರ್ಲಕ್ಷ್ಯ ಪ್ರಕರಣದಲ್ಲಿ ಮೆಡಿಕಲ್ ಬೋರ್ಡ್‌ಗೆ ವರದಿ ಸಲ್ಲಿಸುವುದು ಕಡ್ಡಾಯವಾಗಿದೆ. ಇದೀಗ ವೈದ್ಯಕೀಯ ಮಂಡಳಿ ವರದಿ ಪರಿಶೀಲಿಸಿ, ವೈದ್ಯರ ಕಡೆಯಿಂದ ನಿರ್ಲಕ್ಷ್ಯವಾಗಿದೆ ಎಂದು ವರದಿ ನೀಡಿದ್ದು, ಅದರಂತೆ ಪುತ್ತೂರು ನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
ಎಫ್ಐಆರ್‌ನಲ್ಲಿ ಏನಿದೆ?
ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್‌ನಲ್ಲಿ, ದೂರುದಾರ ಗಗನ್ ದೀಪ್ ನೀಡಿದ ದೂರಿನನ್ವಯ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೆರಿಗೆ ತಜ್ಞರ ಮಾರ್ಗದರ್ಶನದಲ್ಲಿ 2024ರ ನ.27ರಂದು ಸಿಸೇರಿಯನ್ ಶಸ್ತ್ರಚಿಕಿತ್ಸೆಯಲ್ಲಿ ಹೆರಿಗೆಯಾದ ಕುರಿತು ಉಲ್ಲೇಖವಿದೆ. ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆದು ಗಂಡು ಮಗುವಿಗೆ ಜನ್ಮ ನೀಡಿರುತ್ತಾರೆ. ನಂತರ ಆಕೆಗೆ ಸುಮಾರು 13 ದಿವಸದ ಬಳಿಕ ತೀವ್ರ ಜ್ವರ ಕಾಣಿಸಿಕೊಂಡಿದ್ದು, ವೈದ್ಯರಲ್ಲಿ ವಿಚಾರಿಸಿದಾಗ ಜ್ವರದ ಮಾತ್ರೆ ಕೊಡಿ ಎಂದು ತಿಳಿಸಿದ್ದು, ಜ್ವರ ಕಡಿಮೆಯಾಗದೇ ಇದ್ದುದರಿಂದ ದಿನಾಂಕ ನ.19, 2024 ರಂದು ಆರೋಪಿ ವೈದ್ಯರಲ್ಲಿ ತೋರಿಸಿದಾಗ ಹೆಮಟೋಮ ಸಾಧ್ಯತೆ ಇರುವುದಾಗಿ ತಿಳಿಸಿ, ಸ್ಕ್ಯಾನಿಂಗ್ ಮಾಡಿಸಿದ್ದರು. ಆ ಸಮಯ ಆಕೆಯ ಹೊಟ್ಟೆಯ ಬಲ ಭಾಗದಲ್ಲಿ 10*10*8 ಸೆಂ.ಮೀ ಉದ್ದದ ಯಾವುದೋ ಒಂದು ವಸ್ತು ಇರುವಿಕೆಯ ಪತ್ತೆಯಾಗಿರುತ್ತದೆ. ನಂತರ ಗಗನ್ ದೀಪ್ ಅವರು ಸ್ಕ್ಯಾನಿಂಗ್ ರಿಪೋರ್ಟ್ ವೈದ್ಯರಲ್ಲಿ ತೋರಿಸಿದಾಗ ಹೆಮಟೋಮವೇ ಹೊರತು ಆಪರೇಶನ್ ಸಂಬಂಧಪಟ್ಟ ವಸ್ತು ಆಗಿರುವ ಸಾದ್ಯತೆ ಬಹಳ ಕಡಿಮೆ ಎಂದು ತಿಳಿಸಿರುತ್ತಾರೆ.
ನವೆಂಬರ್ 30ರಂದು ಸ್ಕ್ಯಾನಿಂಗ್ ಮಾಡಿದಾಗ ಮೇಲಿನ ಹೊಟ್ಟೆಯ ಬಲ ಭಾಗದಲ್ಲಿ ಇದ್ದ 10*10*8 ಸೆಂ.ಮೀ ಉದ್ದದ ವಸ್ತುವಿನಲ್ಲಿ ದೊಡ್ಡ ಬದಲಾವಣೆ ಕಂಡು ಬಂದಿರುವುದಿಲ್ಲ ನಂತರವೂ ಹೆಮಟೋಮವೇ ಎಂದು ಹೇಳಿರುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೆಲವು ದಿನಗಳು ಕಳೆದು ದೂರುದಾರರ ಪತ್ನಿಯ ಶರೀರದಲ್ಲಿ ಗಂಟು ನೋವು, ಹಿಮ್ಮಡಿ ನೋವು ಕಾಣಿಸಿಕೊಂಡಿದ್ದು ಈ ಬಗ್ಗೆ ವೈದ್ಯರಿಗೆ ತಿಳಿಸಿದ್ದು, ಅವರು ಬೇರೆ ರೀತಿಯ ಹೊಸ ಖಾಯಿಲೆ ಇರಬಹುದು, ಕಡಿಮೆ ಆಗದಿದ್ದರೆ ಎಲುಬು ತಜ್ಞರಿಗೆ ತೋರಿಸಿ ಎಂದು ಹೇಳಿರುತ್ತಾರೆ. ಆಗ ಎಲುಬು ತಜ್ಞರಿಗೆ ತೋರಿಸಿದಾಗ ಅವರು ಕ್ಯಾಲ್ಸಿಯಂ ಕೊರತೆಯ ಸಾಧ್ಯತೆ ಇರುವುದಾಗಿ ಹೇಳಿ ನಾಲ್ಕೈದು ದಿವಸಕ್ಕೆ ಕ್ಯಾಲ್ಸಿಯಂ ಮಾತ್ರೆ ನೀಡಿರುತ್ತಾರೆ. ನಂತರ ನಾಲ್ಕೈದು ದಿವಸದಲ್ಲಿ ಯಾವುದೇ ರೀತಿಯ ನೋವು ಕಡಿಮೆಯಾಗದೆ ಇದ್ದುದರಿಂದ ರುಮಟೋಲಜಿಯ ತಜ್ಞ ವೈದ್ಯರನ್ನು ಸಂಪರ್ಕ ಮಾಡಿ ಎಂದು ಹೇಳಿರುತ್ತಾರೆ. ಬಳಿಕ ರುಮಟೋಲಜಿಯ ತಜ್ಞರ ಸಂಪರ್ಕ ಪಡೆದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಜನವರಿ 23, 2025ರಂದು ತೆರಳಿ ಅವರಲ್ಲಿ ಪತ್ನಿ ರವರನ್ನು ತೋರಿಸಿದಾಗ ಅವರು ಪರೀಕ್ಷಿಸಿದಾಗ ಸ್ಕ್ಯಾನಿಂಗ್ ವರದಿಯನ್ನು ತೋರಿಸಿದ್ದು, ಆ ಸಮಯ ವೈದ್ಯರು ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರ ಬಗ್ಗೆ ಕೇಳಿ ತಿಳಿದು, ವೈದ್ಯರು ಆರೋಪಿ ವೈದ್ಯರಲ್ಲಿ ದೂರುದಾರರ ಪತ್ನಿಯ ಹೊಟ್ಟೆಯಲ್ಲಿದ್ದ ದೊಡ್ಡ ಮಾಸ್ (ವಸ್ತು) ಬಗ್ಗೆ ವಿಚಾರಿಸಿದಾಗ ಆರೋಪಿತ ವೈದ್ಯರು ಅದು ಹೆಮಟೊಮವೆ ಹೊರತು, ಹೊರಗಿನ ವಸ್ತುವಿನ ಸಾಧ್ಯತೆ ಭಾರಿ ಕಡಿಮೆ ಎಂದು ತಿಳಿಸಿದ್ದಾರೆ.
ಮಂಗಳೂರಲ್ಲಿ ಮತ್ತೆ ಸಿಟಿ ಸ್ಕ್ಯಾನ್ ಮಾಡುವಂತೆ ತಿಳಿಸಿದ್ದು, ಅದರಂತೆ ಸಿಟಿ ಸ್ಕ್ಯಾನ್ ಮಾಡಿದ ವರದಿ ನೋಡಿದ ವೈದ್ಯರು ಪತ್ನಿಯ ಹೊಟ್ಟೆಯಲ್ಲಿ ಹೊರಗಿನ ವಸ್ತು ಇದೆ ಎಂದು ತಿಳಿಸಿದ್ದಾರೆ. ಅಲ್ಲದೆ ಕೂಡಲೇ ಶಸ್ತ್ರಚಿಕಿತ್ಸೆ ನಡೆಸುವಂತೆ ಸೂಚಿಸಿದ್ದಾರೆ. ದೂರುದಾರರು ಸಿಟಿ ಸ್ಕ್ಯಾನ್ ವರದಿಯನ್ನು ಆರೋಪಿ ವೈದ್ಯರ ಬಳಿ ತೋರಿಸಿದಾಗಲೂ ಅವರು ಹೆಮಟೋಮ ಸಾಧ್ಯತೆ ಜಾಸ್ತಿ ಇದ್ದು ಹೊರಗಿನ ವಸ್ತು ಇರುವಿಕೆಯನ್ನು ಅಲ್ಲಗಳೆದಿರುತ್ತಾರೆ. ಬಳಿಕ ಪುತ್ತೂರಿನ ಇನ್ನೊಂದು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ (ಲ್ಯಾಪ್ರೊಸ್ಕೊಪಿ) ಲ್ಯಾಪ್ರೊಸ್ಕೊಪಿ ವಿಧಾನದ ಮೂಲಕ ದೊಡ್ಡದಾದ ಬ್ಯಾಂಡೇಜ್ ಬಟ್ಟೆಯನ್ನು ಹೊರ ತೆಗೆಯಲಾಗಿದೆ. ಬ್ಯಾಂಡೇಜ್ ಬಟ್ಟೆಯು ದೂರುದಾರರ ಪತ್ನಿಯ ಹೊಟ್ಟೆಯ ಒಳಗೆ ಸುಮಾರು 2 ತಿಂಗಳು ಇದ್ದ ಕಾರಣ ಅತೀ ಭಯಾನಕವಾದ ಸೆಪ್ಸಿಸ್ ಎನ್ನುವ ಬ್ಯಾಕ್ಟಿರಿಯ ಶರೀರದ ಹೆಚ್ಚಿನ ಭಾಗಗಳಿಗೆ ಹರಡಿ ಸಾವು ಬದುಕಿನ ಹೋರಾಟ ನಡೆಸಿರುತ್ತಾರೆ.
ಈ ಬಗ್ಗೆ ಪುತ್ತೂರು ನಗರ ಠಾಣೆ ಅ.ಕ್ರ: 15/2025 ಕಲಂ:125(b) 200, 3(5) BNS 2023 ರಂತೆ ಪ್ರಕರಣ ದಾಖಲಾಗಿರುತ್ತದೆ.
2 ದಿನಗಳಲ್ಲಿ ಸರ್ಕಾರಕ್ಕೆ ಅಂತಿಮ ವರದಿ
ಜಿಲ್ಲೆಯಲ್ಲಿ ಭಾರಿ ಸಂಚಲನ ಮೂಡಿಸಿದ್ದ ಪ್ರಕರಣ ಬೆಳಕಿಗೆ ಬರುತ್ತಲೇ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿತ್ತು. ಅದರಂತೆ ದ.ಕ. ಜಿಲ್ಲಾಧಿಕಾರಿ ನೇಮಿಸಿದ ಉನ್ನತ ತನಿಖಾ ತಂಡ ಪ್ರಕರಣದ ಬಗ್ಗೆ ತನಿಖೆ ನಡೆಸಿದೆ. ಇನ್ನೆರಡು ದಿನಗಳಲ್ಲಿ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಿದ್ದೇವೆ ಎಂದು ತನಿಖಾ ತಂಡದ ಮುಖ್ಯಸ್ಥರಾದ ಜಿಲ್ಲಾ ವೈದ್ಯಾಧಿಕಾರಿ ಡಾ.ತಿಮ್ಮಯ್ಯ ತಿಳಿಸಿದ್ದಾರೆ. ಪ್ರಾಥಮಿಕ ವರದಿ ಸಲ್ಲಿಸಿದ್ದೇವೆ. ಇನ್ನೊಂದಿಷ್ಟು ದಾಖಲೆ ಸಂಗ್ರಹಿಸಿ ಸೋಮವಾರ ಅಂತಿಮ ತನಿಖಾ ವರದಿ ಸರ್ಕಾರಕ್ಕೆ ಸಲ್ಲಿಸಲಿದ್ದೇವೆ ಎಂದವರು ತಿಳಿಸಿದರು. ತನಿಖಾ ತಂಡದಲ್ಲಿ ಡಾ.ತಿಮ್ಮಯ್ಯ, ಜಿಲ್ಲಾ ಸರ್ಜನ್ ಡಾ. ಶಿವಪ್ರಕಾಶ್, ಆರ್‌ಸಿಎಚ್ ಅಧಿಕಾರಿ ಡಾ.ರಾಜೇಶ್, ಜಿಲ್ಲಾ ಕುಟುಂಬ ಕಲ್ಯಾಣ ಆಧಿಕಾರಿ ಡಾ.ದೀಪಾ, ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಮತ್ತು ಪುತ್ತೂರು ಸರಕಾರಿ ಆಸ್ಪತ್ರೆಯ ಫಿಸಿಷಿಯನ್ ಡಾ.ಯದುರಾಜ್ ಇದ್ದಾರೆ.