Farangipete Protest, Diganth, Missing, ಮಂಗಳೂರು : ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣ ; ಫರಂಗಿಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್, ಇನ್ನೆರಡು ದಿನದಲ್ಲಿ ಬಾಲಕ ಪತ್ತೆಯಾಗದಿದ್ದರೆ ತೀವ್ರ ಪ್ರತಿಭಟನೆ ಎಚ್ಚರಿಕೆ, ಪತ್ತೆಗೆ ಸರ್ವ ಪ್ರಯತ್ನ ಎಂದ ಎಸ್ಪಿ puc student elopement incident strike

ಬಂಟ್ವಾಳ : ಫರಂಗಿಪೇಟೆಯ ಪಿಯುಸಿ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣದಲ್ಲಿ ಪೋಲಿಸ್ ಇಲಾಖೆ ಮೇಲೆ ಒತ್ತಡ ಹಾಕಿ, ಶೀಘ್ರವಾಗಿ ಬಾಲಕನ ಪತ್ತೆಗೆ ಆಗ್ರಹಿಸಿ ಫರಂಗಿಪೇಟೆ ಜಂಕ್ಷನ್ ನಲ್ಲಿ ಹಿಂದು ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕೆಲ ಕಾಲ ಪೇಟೆಯನ್ನು ಬಂದ್ ಮಾಡಿ ಪೊಲೀಸರು ಮತ್ತು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಬಾಲಕನ ಪತ್ತೆಗೆ ಒತ್ತಾಯಿಸಿದರು.
ಸಂಸದ, ಶಾಸಕರ ಭೇಟಿ, ತನಿಖೆಗೆ ಒತ್ತಾಯ
ಪ್ರತಿಭಟನಾ ಸ್ಥಳಕ್ಕೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಗಾಂಜಾ ವಿರುದ್ಧ ಪೋಲೀಸರು ತನಿಖೆ ಮುಂದುವರಿಸಿ ಕಠಿಣ ಕ್ರಮ ಕೈಗೊಂಡರೆ ಇಂತಹ ಘಟನೆಗಳು ಮರುಕಳಿಸಲಿಕ್ಕಿಲ್ಲ. ಪೊಲೀಸರು ದೃಢವಾಗಿ ನಿಂತು ತನಿಖೆ ನಡೆಸಬೇಕು. ಬಾಲಕನ ಅಪಹರಣ ಆಗಿದೆಯೋ, ಏನು ಕತೆ ಆಗಿದೆ ಎನ್ನುವ ಬಗ್ಗೆ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ, ಹಿಂದೂ ಸಂಘಟನೆಯವರು ಪ್ರತಿ ಬಾರಿ ರಸ್ತೆಗೆ ಇಳಿದು ಪ್ರತಿಭಟನೆ ಮಾಡುವ ರೀತಿ ಪೊಲೀಸರು ಮಾಡಬಾರದು, ಪೊಲೀಸರು ನಿರ್ಲಕ್ಷ್ಯ ವಹಿಸುವ ಮೂಲಕ ಹಿಂದೂ ಸಮಾಜವನ್ನು ಕೆಣಕುವ ಕೆಲಸ ಮಾಡಬೇಡಿ ಎಂದು ಹೇಳಿದರಲ್ಲದೆ, ಎರಡು ದಿನಗಳಲ್ಲಿ ಪತ್ತೆಯಾಗದಿದ್ದರೆ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪಿಸಿ ಧ್ವನಿಯೆತ್ತುವುದಾಗಿ ಭರವಸೆ ನೀಡಿದರು.



ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಮಾತನಾಡಿ, ಕೃತ್ಯದ ಹಿಂದೆ ಸಮಾಜದ್ರೋಹಿ ಶಕ್ತಿಗಳ ಕೈವಾಡ ಇರುವಂತೆ ತೋರುತ್ತಿದೆ. ಗಾಂಜಾ, ಡ್ರಗ್ಸ್ ದಂಧೆಕೋರರ ಉಪಟಳ ಹೆಚ್ಚಾಗಿದ್ದು ಇದರ ವಿರುದ್ಧ ಸಮಾಜ ಹೋರಾಟ ಮಾಡಬೇಕಾಗಿದೆ. ಮಹಿಳೆಯರು ನಡೆದಾಡಲು ಸಾಧ್ಯವಾಗದಂಥ ಪರಿಸ್ಥಿತಿ ಇಲ್ಲಿದೆ. ಪೊಲೀಸರು ಜಾಗೃತ ಸ್ಥಿತಿಯಲ್ಲಿದ್ದರೆ ಇಂತಹ ಸ್ಥಿತಿ ಬರುವುದಿಲ್ಲ ಎಂದರು.





ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಮಾತನಾಡಿ, ಬಾಲಕನ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ ಕೂಡಲೇ ಎಚ್ಚತ್ತುಕೊಂಡಿದ್ದರೆ ಕ್ಲಿಷ್ಟಕರ ಸ್ಥಿತಿ ಬರುತ್ತಿರಲಿಲ್ಲ. ಜಿಲ್ಲೆಯಾದ್ಯಂತ ಗಾಂಜಾ ಮಾಫಿಯಾ ಮಿತಿ ಮೀರಿದೆ. ಈ ಕೃತ್ಯದ ಹಿಂದೆಯೂ ಸಮಾಜವಿರೋಧಿ ಶಕ್ತಿಗಳ ಕೈವಾಡದ ಶಂಕೆ ಬರುತ್ತಿದೆ ಎಂದರು. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಎರಡು ದಿನಗಳಲ್ಲಿ ಬಾಲಕನ ನಾಪತ್ತೆ ಪ್ರಕರಣ ಭೇದಿಸದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನಾ ಸ್ಥಳಕ್ಕೆ ಎಸ್ಪಿ ಯತೀಶ್ ;
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಯತೀಶ್, ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಕ್ಲಿಷ್ಟಕರವಾದ ಪ್ರಕರಣಗಳು ಕೆಲವೊಮ್ಮೆ ಪತ್ತೆಗೆ ಸ್ವಲ್ಪ ಸಮಯ ತಗಲುತ್ತದೆ. ಜಿಲ್ಲೆಯ ವಿವಿಧ ಠಾಣೆಯ ನುರಿತ ಪೊಲೀಸರನ್ನು ಕರೆಸಿ ತನಿಖೆ ಹೆಚ್ಚಿಸಿದ್ದೇವೆ. ದಿಗಂತ್ ಪತ್ತೆಯಾಗುವವರೆಗೆ ನಾವು ಸುಮ್ಮನೆ ಕೂರುವುದಿಲ್ಲ. ನಿಮ್ಮಲ್ಲಿ ಮಾಹಿತಿ ಇದ್ದರೆ ನಮ್ಮ ಜೊತೆ ಹಂಚಿಕೊಳ್ಳಿ, ತನಿಖೆ ಮುಂದುವರಿಸಲು ನಿಮ್ಮ ಸಹಕಾರ ಇರಲಿ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಹಿಂದು ಸಂಘಟನೆ ಮುಖಂಡರಾದ ಪ್ರಸಾದ್ ಕುಮಾರ್ ರೈ, ರವೀಂದ್ರ ಕಂಬಳಿ, ಭರತ್ ಕುಮ್ಡೇಲು, ಉಮೇಶ್ ಶೆಟ್ಟಿ ಬರ್ಕೆ, ತಾರಾನಾಥ ಕೊಟ್ಟಾರಿ ತೇವು, ನಂದನ್ ಮಲ್ಯ ಮನೋಜ್ ಆಚಾರ್ಯ ಮತ್ತಿತರರು ಭಾಗಿಯಾಗಿದ್ದರು. ಇದೇ ವೇಳೆ ಫರಂಗಿಪೇಟೆಯ ಇತರ ಸಮುದಾಯದ ಮುಖಂಡರು, ವ್ಯಾಪಾರಿಗಳು ಕೂಡ ಪ್ರತಿಭಟನೆಯಲ್ಲಿ ಕೈಜೋಡಿಸಿದರು. ಕೆಲಹೊತ್ತು ಅಂಗಡಿಗಳನ್ನು ಸ್ವಯಂಪ್ರೇರಿತ ಬಂದ್ ಮಾಡಿ ಬಾಲಕನ ಪತ್ತೆಗೆ ಆಗ್ರಹಿಸಿದರು.