ಉಡುಪಿ : ಡಿಕೆಶಿ ಸಿಎಂ ಆಗೋದನ್ನು ಯಾರೂ ತಡೆಯಲು ಸಾಧ್ಯವಿಲ್ಲ, ಈಗಾಗಲೇ ನಿರ್ಧಾರ ಆಗಿಹೋಗಿದೆ ; ಅಧಿಕಾರ ಹಂಚಿಕೆ ಬಗ್ಗೆ ಸುಳಿವಿತ್ತ ಮಾಜಿ ಸಿಎಂ ವೀರಪ್ಪ ಮೊಯ್ಲಿ

ಕಾರ್ಕಳ: ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಅದು ಈಗಾಗಲೇ ನಿರ್ಧಾರ ಆಗಿರುವ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸಿಗ ವೀರಪ್ಪ ಮೊಯ್ಲಿ ಹೇಳಿದ್ದು, ರಾಜ್ಯದಲ್ಲಿ ಸಿಎಂ ಸ್ಥಾನ ಅಧಿಕಾರ ಹಂಚಿಕೆಯ ಸೂತ್ರದ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾರ್ಕಳದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ವೀರಪ್ಪ ಮೊಯ್ಲಿ, ಪಕ್ಷದ ಸಂಘಟನೆಯಲ್ಲಿ ಡಿಕೆಶಿ ಯೋಗದಾನದ ಬಗ್ಗೆ ಹಾಡಿ ಹೊಗಳಿದರು. ಪಕ್ಷ ಸಂಕಷ್ಟದಲ್ಲಿದ್ದಾಗ ಹೋರಾಟ ಮಾಡಿದವರು ಡಿಕೆ ಶಿವಕುಮಾರ್ ಎನ್ನುತ್ತಲೇ, ಇವರು ಸದ್ಯದಲ್ಲೇ ಸಿಎಂ ಆಗಲಿದ್ದಾರೆ ಎನ್ನುವ ಮೂಲಕ ನವೆಂಬರ್ ವೇಳೆಗೆ ಅಧಿಕಾರ ಹಂಚಿಕೆ ಆಗುವ ಸುಳಿವು ನೀಡಿದ್ದಾರೆ.
ಶಿವಕುಮಾರ್ ಅವರಿಗೆ ಮೊದಲು ಟಿಕೆಟ್ ಕೊಡಿಸಿದ್ದೇ ನಾನು. ಅವರು ಸದ್ಯದಲ್ಲೇ ಸಿಎಂ ಆಗಬೇಕೆಂಬುದು ನಮ್ಮೆಲ್ಲರ ಹಾರೈಕೆ. ಜನರ ಮನಸ್ಸಿನಲ್ಲೂ ಇವರು ಸಿಎಂ ಆಗೋದು ತೀರ್ಮಾನವಾಗಿ ಹೋಗಿದೆ. ಇದು ಯಾರೂ ಕೊಡುವ ವರವಲ್ಲ. ಬದಲಾಗಿ ಕೆಲಸದ ಮೂಲಕ ಸಂಪಾದನೆ ಮಾಡುವ ಪದವಿ. ಡಿಕೆಶಿ ಕೆಲಸ ಮಾಡಿದ್ದಾರೆ. ಒಳ್ಳೆಯ ನಾಯಕತ್ವ ಕೊಟ್ಟಿದ್ದಾರೆ. ಸಿಎಂ ಸ್ಥಾನ ತಪ್ಪಿಸಲು ಯಾರಿಂದಲೂ ಸಾಧ್ಯವಾಗದು ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ. ಈಗಾಗಲೇ ಅಧಿಕಾರ ಹಂಚಿಕೆಯ ಸೂತ್ರದ ಬಗ್ಗೆ ಕಾಂಗ್ರೆಸ್ ನಾಯಕರಲ್ಲೇ ನಾನಾ ರೀತಿಯ ಹೇಳಿಕೆಗಳು ಬರುತ್ತಿರುವಾಗಲೇ ಹಿರಿಯ ಮುಖಂಡ ವೀರಪ್ಪ ಮೊಯ್ಲಿ ಇಂತಹ ಹೇಳಿಕೆ ನೀಡಿರುವುದು ಪಕ್ಷದೊಳಗೆ ಮತ್ತೆ ಸಂಚಲನ ಮೂಡಿಸಿದೆ.