ಕುಕ್ಕೆ ಸುಬ್ರಹ್ಮಣ್ಯ : ಬಾಲಿವುಡ್ ನಟಿ ಕತ್ರಿನಾ ಕೈಫ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ; ಸರ್ಪ ಸಂಸ್ಕಾರ ಸೇವೆಯಲ್ಲಿ ಭಾಗಿ.
Tuesday, March 11, 2025

ಸುಬ್ರಹ್ಮಣ್ಯ : ಬಾಲಿವುಡ್ ನಟಿ ಕತ್ರಿನಾ ಕೈಫ್ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದು ಸರ್ಪಸಂಸ್ಕಾರ ಸೇವೆಯಲ್ಲಿ ಪಾಲ್ಗೊಂಡಿದ್ದಾರೆ.
ಮಾ.11 ಮತ್ತು 12 ರಂದು ಕತ್ರಿನಾ ಕುಕ್ಕೆ ಸುಬ್ರಹ್ಮಣ್ಯದಲ್ಲಿಯೇ ಉಳಿದುಕೊಳ್ಳಲಿದ್ದು ಸರ್ಪ ಸಂಸ್ಕಾರ ಸೇವೆಯಲ್ಲಿ ಭಾಗಿಯಾಗಲಿದ್ದಾರೆ. ಮುಖಕ್ಕೆ ಮಾಸ್ಕ್ ಹಾಗೂ ತಲೆಗೆ ದುಪ್ಪಟ್ಟಾ ಸುತ್ತಿಕೊಂಡಿರುವ ಕತ್ರಿನಾ ಅವರು ಮಾಧ್ಯಮದ ಕಣ್ಣಿನಿಂದ ದೂರವಿರಲು ಪ್ರಯತ್ನ ಪಟ್ಟಿದ್ದಾರೆ.

ಕ್ಷೇತ್ರದ ವತಿಯಿಂದ ಆದಿ ಸುಬ್ರಹ್ಮಣ್ಯ ಬಳಿಯ ಯಾಗಶಾಲೆಯಲ್ಲಿ ಸರ್ಪ ಸಂಸ್ಕಾರ ಸೇವೆ ನಡೆಯುತ್ತದೆ. ಅಲ್ಲಿ ಸೇವೆ ಮಾಡುವವರು ಕನಿಷ್ಠ ಎರಡು ದಿನ ಕ್ಷೇತ್ರದಲ್ಲಿ ಉಳಿದುಕೊಳ್ಳಬೇಕು. ಮುನ್ನಾದಿನ ಮತ್ತು ಮರುದಿನ ಬೆಳಗ್ಗೆ ಸೇವೆಯ ವಿಧಿಗಳು ಇರಲಿವೆ. ಸಂತಾನ ಪ್ರಾಪ್ತಿಗಾಗಿ ಕತ್ರಿನಾ ಸೇವೆ ಮಾಡುತ್ತಿದ್ದಾರೆ ಎನ್ನಲಾಗುತ್ತಿದ್ದರೂ, ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ.