ಬೆಂಗಳೂರು : ರೀಲ್ಸ್ ಗಾಗಿ ಲಾಂಗ್ ಹಿಡಿದು ಶೋಕಿ ; ಪರಪ್ಪನ ಅಗ್ರಹಾರ ಜೈಲು ಸೇರಿದ ರಜತ್ - ವಿನಯ್ ಗೌಡ.

ಬೆಂಗಳೂರು: ಒಂದು ರೀಲ್ಸ್ ಎಷ್ಟೆಲ್ಲಾ ಕಂಟಕ ತರುತ್ತೆ ಅನ್ನೋದು ಹೇಳೋಕೆ ಸಾಧ್ಯವಿಲ್ಲ. ಇದೀಗ ಅಂತದ್ದೇ ಸಮಸ್ಯೆಯೊಂದರಲ್ಲಿ ಬಿಗ್‌ಬಾಸ್ ಮಾಜಿ ಸ್ಪರ್ಧಿಗಳು ಸಿಲುಕಿದ್ದಾರೆ ನೋಡಿ. ಲಾಂಗ್ ಹಿಡಿದು ರೀಲ್ಸ್ ಮಾಡಿದ್ದೇ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದೇ ಆಗಿದ್ದು, ಬಂತು ನೋಡಿ ಪೊಲೀಸರಿಂದ ನೋಟಿಸ್. ಹೌದು, ಸದ್ಯ ಬಿಗ್‌ಬಾಸ್ ಮಾಜಿ ಸ್ಪರ್ಧಿಗಳು ವಿನಯ್ ಗೌಡ ಮತ್ತು ರಜತ್ ಕಿಶನ್ ಭಾರೀ ಸುದ್ದಿಯಲ್ಲಿದ್ದು ಈಗ ಜೈಲುಪಾಲಾಗಿದ್ದರೆ.
ಸೋಷಿಯಲ್ ಮೀಡಿಯಾದಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದಕ್ಕಾಗಿ ಸದ್ಯ ಖಾಕಿ ಕಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೇ ಸಾಕ್ಷಿ ನಾಶ ಆರೋಪದಡಿ ಮತ್ತೆ ನಟರು ಕಂಟಕದಲ್ಲಿದ್ದಾರೆ. ಇದೀಗ ವಿನಯ್ ಗೌಡ ಹಾಗೂ ರಜತ್ ಅವರನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗೆ ಹಾಜರುಪಡಿಸಿ ಬಳಿಕ ನ್ಯಾಯಾಧೀಶರ ಮುಂದೆ ಕರೆದೊಯ್ದಿದ್ದರು. ಕೋರಮಂಗಲದ ನ್ಯಾಯಾಧೀಶರ ಮನೆಯತ್ತ ರಜತ್ ಹಾಗೂ ವಿನಯ್ ಗೌಡರನ್ನು ನ್ಯಾಯಾಧೀಶರ ನಿವಾಸದಲ್ಲಿ ಹಾಜರುಪಡಿಸಿದ್ದರು. ಈ ವೇಳೆ ವಿಚಾರಣೆ ನಡೆಸಿದ ನ್ಯಾಯಾಧೀಶರು ಇಬ್ಬರಿಗೂ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದ್ದಾರೆ.

24ನೇ ಎಸಿಜೆಎಂ ನ್ಯಾಯಾಧೀಶರ ಆದೇಶದಂತೆ ಪೊಲೀಸರು ರಜತ್ ಮತ್ತು ವಿನಯ್ ಇಬ್ಬರನ್ನು ನೆನ್ನೆ ರಾತ್ರಿಯೇ ಪರಪ್ಪನ ಆಗ್ರಹಾರಕ್ಕೆ ಶಿಫ್ಟ್ ಮಾಡಿದ್ರು. ಈ ವೇಳೆ ಜಡ್ಜ್ ನಿವಾಸದ ಬಳಿ ಬಂದಿದ್ದ ರಜತ್ ಪತ್ನಿ ಅಕ್ಷಿತಾ ಗಂಡನನ್ನು ಜೈಲಿಗೆ ಕರೆದೊಯ್ಯುವುದನ್ನು ನೋಡಿ ಕಣ್ಣೀರಿಟ್ಟರು.
ಸೋಮವಾರ ರಾತ್ರಿ ವಿಚಾರಣೆ ಬಳಿಕ ಇಬ್ಬರನ್ನೂ ಬಿಡುಗಡೆಗೊಳಿಸಿದ್ದು, ಮಂಗಳವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ತಿಳಿಸಿದ್ದರು. ಈ ವೇಳೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ರೀಲ್ಸ್ ಮಾಡುವಾಗ ಬಳಸಿದ ಲಾಂಗ್ ನೀಡುವಂತೆ ತಿಳಿಸಲಾಗಿದ್ದು, ಇಲ್ಲಿ ಅಸಲಿ ಯಡವಟ್ಟು ಆಗಿದೆ. ವಿಡಿಯೋದಲ್ಲಿ ಬಳಸಲಾದ ಲಾಂಗ್ ಎಂದು ಬದಲಿ ಲಾಂಗ್‌ವೊಂದನ್ನು ಕೊಡಲಾಗಿತ್ತು. ಪೊಲೀಸರ ತನಿಖೆಯಲ್ಲಿ ರೀಲ್ಸ್ನಲ್ಲಿ ಬಳಸಿರುವ ಲಾಂಗ್ಗೂ ಫೈಬರ್ ಲಾಂಗ್ಗೂ ವ್ಯತ್ಯಾಸ ಇರುವುದು ಸ್ಪಷ್ಟವಾಗಿ ಗೊತ್ತಾಗಿತ್ತು. ಇಲ್ಲಿಂದ ತನಿಖೆ ಚುರುಕುಗೊಂಡಿದ್ದು, ಸಾಕ್ಷಿ ನಾಶ ಮಾಡಿದ ಆರೋಪದಡಿ ಇಬ್ಬರನ್ನ ಮತ್ತೆ ಬಂಧಿಸಲಾಗಿತ್ತು.
ಮಚ್ಚಿನ ಗುಟ್ಟು ಬಿಟ್ಟುಕೊಡದ ಆರೋಪಿಗಳು ;
ಪೊಲೀಸರ ವಿಚಾರಣೆ ವೇಳೆ ರಜತ್ - ವಿನಯ್ ಗೌಡ, ತಾವು ಸಾರ್ವಜನಿಕ ಸ್ಥಳದಲ್ಲಿ ವಿಡಿಯೋ ಮಾಡಿಲ್ಲ ಇದು ನಾಗರಬಾವಿಯ ಅಕ್ಷಯಮ್ ಸ್ಟುಡಿಯೊದ ಶೂಟಿಂಗ್ ಸೆಟ್‌ನಲ್ಲಿ ಚಿತ್ರೀಕರಿಸಿರುವ ವಿಡಿಯೊ ಆಗಿದೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಕ್ಕಾಗಿ ಈ ವಿಡಿಯೊ ಮಾಡಿದ್ದೇವೆ. ರೀಲ್ಸ್‌ನಲ್ಲಿ ಬಳಸಿರುವ ಮಚ್ಚು ಫೈಬರ್ ನದು ಎಂದು ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ, ಪೊಲೀಸರು ಈ ಇಬ್ಬರನ್ನೂ ನಾಗರಬಾವಿಯ ಅಕ್ಷಯ್ ಸ್ಟುಡಿಯೋಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದರು. ಮಹಜರು ವೇಳೆ ಪೊಲೀಸರು, ಇಬ್ಬರಿಗೂ ಪ್ರಶ್ನೆಗಳ ಸುರಿಮಳೆ ಸುರಿಸಿದರು. ಆದರೂ ರೀಲ್ಸ್‌ಗೆ ಬಳಸಿದ್ದ ಅಸಲಿ ಮಚ್ಚು ಎಲ್ಲಿದೆ ಎಂಬ ಗುಟ್ಟು ಬಿಟ್ಟುಕೊಡದ ರಜತ್ ಮತ್ತು ವಿನಯ್ ಗೌಡ, ಶೂಟಿಂಗ್ ಸೆಟ್ ಹಾಕಿದ್ದವರು ಮಚ್ಚನ್ನು ತೆಗೆದುಕೊಂಡು ಹೋಗಿರಬಹುದೆಂದು ಬೇಜವಾಬ್ದಾರಿ ಉತ್ತರ ನೀಡಿದ್ದಾರೆ. ಪೊಲೀಸರು ಸ್ಟುಡಿಯೊದಲ್ಲಿ ಒಂದು ತಾಸಿಗೂ ಹೆಚ್ಚು ಕಾಲ ಪರಿಶೀಲಿಸಿದರೂ ಮಚ್ಚು ಸಿಕ್ಕಿಲ್ಲ. ಸ್ಟುಡಿಯೋದ ಮೂಲೆಮೂಲೆಯಲ್ಲಿ ಹುಡುಕಾಡಿದರೂ ಲಾಂಗ್ ಪತ್ತೆಯಾಗಿಲ್ಲ ಹೀಗಾಗಿ, ರಜತ್ ಮತ್ತು ವಿನಯ್ ವಿರುದ್ಧ ಸಾಕ್ಷ್ಯನಾಶದ ಆರೋಪ ಅಡಿ ಪೊಲೀಸರು ಕೇಸ್ ರಿಜಿಸ್ಟರ್ ಮಾಡಿ ಜೈಲಿಗೆ ಕಳಿಸಿಕೊಟ್ಟಿದ್ದಾರೆ.
ರೀಲ್ಸ್ ಗಾಗಿ ಮಚ್ಚು ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಲು ಹೋದವರು, ಸದ್ಯ ಪರಪ್ಪನ ಅಗ್ರಹಾರ ಸೇರಿದ್ದಾರೆ. ಇವತ್ತು ಇಬ್ಬರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಇತ್ತ ಅಸಲಿ ಮಚ್ಚು ಪತ್ತೆ ಮಾಡೋ ಸಲುವಾಗಿ ಪೊಲೀಸರು ರಜತ್ ಪತ್ನಿ ಅಕ್ಷಿತಾಗೆ ನೊಟೀಸ್ ನೀಡಿದ್ದಾರೆ. ತುಕ್ಕು ಹಿಡಿದ ಮಚ್ಚು ಇವತ್ತು ಸಿಕ್ಕರೆ ರೀಲ್ಸ್ ಕೇಸ್‌ಗೆ ಹೊಸ ಟ್ವಿಸ್ಟ್ ಸಿಗಲಿದೆ. ಈ ಮಧ್ಯೆ ಕೋರ್ಟ್ ಇಬ್ಬರಿಗೂ ಜಾಮೀನಿನ ಭಾಗ್ಯ ಕರುಣಿಸುತ್ತಾ ಅನ್ನೋದು ಕುತೂಹಲ ಕೆರಳಿಸಿದೆ.