ಹಾಸನ :ಕಟ್ಟಡ ಕುಸಿದು ಸಾವು ಹಾಗೂ ಆನೆ ದಾಳಿಯಿಂದ ಆದ ಸಾವಿಗೆ ಡಿಸಿ ಯ ದರ್ಪ, ದುರಾಡಳಿತ ಕಾರಣ: ಶಾಸಕ ಎಚ್.ಕೆ.ಸುರೇಶ್ ಆರೋಪ.
ಹಾಸನ: "ಜಿಲ್ಲಾಧಿಕಾರಿಯ ಅಧಿಕಾರದ ದರ್ಪ ಮತ್ತು ಪುರಸಭಾ ಅಧಿಕಾರಿಗಳ ನಿರ್ಲಕ್ಷ್ಯವೇ ಕಟ್ಟಡ ಕುಸಿದು ವ್ಯಾಪಾರಸ್ಥರ ಸಾವಿಗೆ ಕಾರಣ" ಎಂದು ಬೇಲೂರು ಶಾಸಕ ಎಚ್.ಕೆ.ಸುರೇಶ್ ಆರೋಪಿಸಿದರು.
ಬೇಲೂರಿನಲ್ಲಿ ಭಾನುವಾರ ಖಾಸಗಿ ಕಟ್ಟಡದ ಮೇಲ್ಛಾವಣಿ ಕುಸಿದು ಇಬ್ಬರು ಸಾವಿಗೀಡಾಗಿ ಐವರು ಗಂಭೀರವಾಗಿ ಗಾಯಗೊಂಡಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಈ ಘಟನೆ ಮನಸ್ಸಿಗೆ ನೋವುಂಟು ಮಾಡಿದೆ. ಇದು ಹಳೆಯ ಕಟ್ಟಡ ಎಂದು ಪುರಸಭೆ ಮತ್ತು ಜಿಲ್ಲಾಡಳಿತಕ್ಕೆ ಗೊತ್ತಿದೆ. ನೆಲಸಮ ಮಾಡಬೇಕಿತ್ತು. ಹೀಗಿದ್ದರೂ ಫುಟ್ಪಾತ್ ಮೇಲೆ ವ್ಯಾಪಾರ ಮಾಡಲು ಅವಕಾಶ ಕೊಟ್ಟಿರುವುದು ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ" ಎಂದರು.
"ಸ್ಥಳದಲ್ಲಿ ವ್ಯಾಪಾರ ಮಾಡಬಾರದು ಎಂದು ಈಗಾಗಲೇ ಪುರಸಭೆ ಮೀಟಿಂಗ್ನಲ್ಲಿ ತೀರ್ಮಾನವಾಗಿದೆ. ಆದರೂ ಇಲ್ಲಿ ವ್ಯಾಪಾರ ಮಾಡಲು ಅಧಿಕಾರಿಗಳು ಹೇಗೆ ಅವಕಾಶ ಕೊಟ್ಟರು?. ಅಮಾಯಕರು ತಮ್ಮ ಹೊಟ್ಟೆಪಾಡಿಗೆ ಬಂದು ಕುಳಿತು ವ್ಯಾಪಾರ ಮಾಡುತ್ತಾರೆ. ಮುಂದಿನ ದಿನಗಳಲ್ಲಿ ಸಾವು-ನೋವು ಸಂಭವಿಸುತ್ತದೆ ಎಂಬ ಅರಿವಿದ್ದರೂ ಇಲ್ಲಿ ವ್ಯಾಪಾರಕ್ಕೆ ಅವಕಾಶ ಕೊಟ್ಟಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಹಾಗಾಗಿ, ಸಾವಿಗೆ ನೇರವಾಗಿ ಜಿಲ್ಲಾಡಳಿತ ಮತ್ತು ಪುರಸಭಾ ಅಧಿಕಾರಿಗಳೇ ಹೊಣೆಗಾರರು ಎಂದು ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸುತ್ತೇನೆ" ಎಂದು ಹೇಳಿದರು.
ಬೇಲೂರು ಮತ್ತು ಜಿಲ್ಲೆಯಲ್ಲಿ ಆಗುತ್ತಿರುವ ಆನೆ ದಾಳಿ ಸಾವು ಹಾಗೂ ಈ ಪ್ರಕರಣಕ್ಕೆ ನೇರವಾಗಿ ಅಧಿಕಾರದ ದರ್ಪದಿಂದ ಮೆರೆಯುತ್ತಿರುವ ಡಿ.ಸಿ.ಸತ್ಯಭಾಮಾ ಕಾರಣಕರ್ತರು ಎಂದು ಆರೋಪಿಸಿದ ಅವರು, ಪುರಸಭಾ ಮುಖ್ಯ ಅಧಿಕಾರಿ ಸುಜಯ್ ಅವರನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಸಾವಿಗೀಡಾದವರ ಕುಟುಂಬಕ್ಕೆ ಪರಿಹಾರ ಕೊಡಬೇಕು ಎಂದು ತಾಕೀತು ಮಾಡಿದರು.