ಬಂಟ್ವಾಳ: ತಾಲೂಕಿನ ಶಂಭೂರು ಗ್ರಾಮದಲ್ಲಿ ಕಲ್ಲಮಾಳಿಗೆ ಇಷ್ಟದೇವತಾ ಮುಂಡಿತ್ತಾಯ ದೈವಸ್ಥಾನದ ವಾರ್ಷಿಕ ಉತ್ಸವ; ರಾಜಕೀಯ ಪಕ್ಷದವರು, ಕನ್ಯಾಡಿ ಸ್ವಾಮೀಜಿ ಕುಟುಂಬಸ್ಥರಿಂದ ದೈವದ ಉತ್ಸವಕ್ಕೆ ತಡೆ ; ಶಂಭೂರು ಗ್ರಾಮಸ್ಥರಿಂದ ಸುದ್ದಿಗೋಷ್ಟಿ!!

ಮಂಗಳೂರು : ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದಲ್ಲಿ ಕಲ್ಲಮಾಳಿಗೆ ಇಷ್ಟದೇವತಾ ಮುಂಡಿತ್ತಾಯ ದೈವಸ್ಥಾನದ ವಾರ್ಷಿಕ ಉತ್ಸವ ಮಾ.9ರಂದು ಊರವರು ಮತ್ತು ಕನ್ಯಾಡಿ ಬ್ರಹ್ಮಾನಂದ ಸ್ವಾಮೀಜಿ ಕುಟುಂಬಸ್ಥರ ತಕರಾರಿನಿಂದಾಗಿ ಅರ್ಧಕ್ಕೆ ನಿಂತಿದೆ. ಸ್ವಾಮೀಜಿ ಕುಟುಂಬಸ್ಥರು ಇರಂತಬೆಟ್ಟು ಕುಟುಂಬಕ್ಕೆ ಸೇರಿದವರಾಗಿದ್ದು, ತಮ್ಮ ರಾಜಕೀಯ ಪ್ರಭಾವದಿಂದ ತಾವು ಹೇಳಿದಂತೆ ಉತ್ಸವ ನಡೆಯಬೇಕೆಂದು ಹೇಳಿ ತಹಸೀಲ್ದಾರ್, ಪೊಲೀಸರನ್ನು ಕರೆಸಿ ಉತ್ಸವ ನಿಲ್ಲಿಸಿದ್ದಾರೆಂದು ಊರಿನ ಪ್ರಮುಖರು ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
ಕಲ್ಲಮಾಳಿಗೆ ಇಷ್ಟದೇವತಾ ಮುಂಡಿತ್ತಾಯ ದೈವಸ್ಥಾನಕ್ಕೆ 500 ವರ್ಷಗಳ ಇತಿಹಾಸವಿದ್ದು, ಊರವರು, ಪೂಜಾರಿ ಕುಟುಂಬಸ್ಥರು, ಎಲ್ಲ ಜಾತಿಯವರು ಸೇರಿಕೊಂಡು ಮಾಡುತ್ತ ಬರಲಾಗಿತ್ತು. ಕನ್ಯಾಡಿ ಸ್ವಾಮೀಜಿ ಇದೇ ಊರಿನವರಾಗಿದ್ದು, ಇವರ ಸೋದರಳಿಯಂದಿರ ಮೂಲಕ ಊರಿನಲ್ಲಿ ಜಾತ್ರೆಯನ್ನು ತಮ್ಮ ಸುಪರ್ದಿಯಲ್ಲೇ ನಡೆಸುವುದಕ್ಕೆ ಮುಂದಾಗಿದ್ದಾರೆ. ಸ್ವಾಮೀಜಿಯ ಸೋದರಳಿಯರಾದ ಮಂಗಳೂರಿನಲ್ಲಿ ಬಿಜೆಪಿ ಕಾರ್ಪೊರೇಟರ್ ಆಗಿರುವ ಕಿರಣ್ ಕೋಡಿಕಲ್ ಮತ್ತು ಆತನ ತಮ್ಮ ಕಿಶೋರ್ ಸೇರಿಕೊಂಡು ದರ್ಪ ನಡೆಸಿದ್ದಾರೆ. ಶಂಭೂರಿನಲ್ಲಿ ಕನ್ಯಾಡಿ ಸ್ವಾಮೀಜಿಯ ಅಣ್ಣ ವಿಶ್ವನಾಥ ಪೂಜಾರಿ ಅವರಿದ್ದು, ಇರಂತಬೆಟ್ಟು ಕುಟುಂಬದಲ್ಲಿ ಪ್ರಮುಖರಾಗಿದ್ದಾರೆ.


ವಿಶ್ವನಾಥ ಪೂಜಾರಿಯವರು ಮಾಜಿ ಸಚಿವ ರಮಾನಾಥ ರೈಯವರ ಆಪ್ತರಾಗಿದ್ದು, ತನ್ನ ಮಾತೇ ನಡೆಯಬೇಕು ಎನ್ನುವ ನೆಲೆಯಲ್ಲಿ ರಾಜಕೀಯ ಒತ್ತಡ ಹೇರಿದ್ದಾರೆ. ಅಲ್ಲದೆ, ಕಿರಣ್ ಕೋಡಿಕಲ್ ಅವರು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಮೂಲಕ ಒತ್ತಡ ಹೇರಿದ್ದಾರೆ. ಕನ್ಯಾಡಿ ಸ್ವಾಮೀಜಿ ಬೆಳ್ತಂಗಡಿಯವರಾಗಿರುವುದರಿಂದ ಶಾಸಕ ಹರೀಶ್ ಪೂಂಜ ಕೂಡ ಅವರ ಪರವಾಗಿಯೇ ನಿಂತಿದ್ದಾರೆ. ದೈವಸ್ಥಾನ ಧಾರ್ಮಿಕ ದತ್ತಿ ಇಲಾಖೆಗೆ ಸೇರಿರುವುದರಿಂದ ತಹಸೀಲ್ದಾರ್ ಬಂದು ನೀವು ಜೊತೆ ಸೇರಿಕೊಂಡು ಉತ್ಸವ ಮಾಡುವುದಿದ್ದರೆ ಮಾಡಿ, ಇಲ್ಲದಿದ್ದರೆ ಸೆಕ್ಷನ್ ಹಾಕುತ್ತೇವೆ, ಯಾರನ್ನೂ ಒಳಗೆ ಬರಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಎರಡು ಪಕ್ಷದವರು ಸೇರಿ ಮಾ.9ರಿಂದ ಮೂರು ದಿನಗಳ ಕಾಲ ನಡೆಯಬೇಕಿದ್ದ ಊರಿನ ಉತ್ಸವ ತಡೆದಿದ್ದು, ಇವರಿಗೆ ದೈವವೇ ಶಿಕ್ಷೆ ನೀಡಲಿ ಎಂದು ನಾವು ಪ್ರಾರ್ಥಿಸಿದ್ದೇವೆ ಎಂದು ನರಿಕೊಂಬು ಗ್ರಾಪಂ ಅಧ್ಯಕ್ಷ ಸಂತೋಷ್ ಪೂಜಾರಿ ಹೇಳಿದ್ದಾರೆ.





ಮಾ.9ರಂದು ವಾರ್ಷಿಕ ಉತ್ಸವಕ್ಕೆ ಎಲ್ಲ ತಯಾರಿಯೂ ನಡೆದಿತ್ತು. ವಾರದ ಹಿಂದೆ ಗೊನೆ ಮುಹೂರ್ತ ನಡೆದು ನಿನ್ನೆ ಆದಿತ್ಯವಾರ ಭಂಡಾರ ಬರಬೇಕಿತ್ತು. ಆದರೆ ಭಂಡಾರ ಮನೆಯಿಂದ ಉತ್ಸವಕ್ಕೆ ಬರುವಾಗಲೇ ಹತ್ತಾರು ಜೀಪುಗಳಲ್ಲಿ ಪೊಲೀಸರು ಬಂದಿದ್ದಾರೆ. ಧಾರ್ಮಿಕ ಇಲಾಖೆ ಸಹಾಯಕ ಆಯುಕ್ತರು, ಬಂಟ್ವಾಳ ತಹಸೀಲ್ದಾರ್ ಬಂದು ನಮ್ಮನ್ನು ತಡೆದಿದ್ದಾರೆ. ರಾತ್ರಿಗೆ 700 ಜನರಿಗೆ ಊಟಕ್ಕೆ ರೆಡಿ ಮಾಡಲಾಗಿತ್ತು. ಎಲ್ಲ ವ್ಯವಸ್ಥೆ ಆಗಿದ್ದರೂ, ಊರಿನ ವಿಚಾರ ತಿಳಿಯದ ನಾಯಕರು ಅಧಿಕಾರಿಗಳಿಗೆ ಒತ್ತಡ ಹೇರಿ ಉತ್ಸವಕ್ಕೆ ತಡೆ ಹಾಕಿದ್ದಾರೆ. ನಮ್ಮ ಊರಿನಲ್ಲಿ ವರ್ಷಕ್ಕೆ ನಾಲ್ಕು ಬಾರಿ ಉತ್ಸವ ನಡೆಯುತ್ತದೆ. 2018ರಲ್ಲಿ ಕಿರಣ್ ಕೋಡಿಕಲ್ ಮತ್ತು ವಿಶ್ವನಾಥ ಪೂಜಾರಿ ನೇತೃತ್ವದಲ್ಲಿ ಟ್ರಸ್ಟ್ ಮಾಡಿಕೊಂಡ ಬಳಿಕ ಸಮಸ್ಯೆ ಎದುರಾಗಿದೆ. ಊರವರನ್ನು ಬದಿಗಿಟ್ಟು ಅವರ ಕುಟುಂಬಸ್ಥರೇ ಉತ್ಸವ ನಡೆಸುವುದಕ್ಕೆ ಮುಂದಾಗಿದ್ದು ಇದಕ್ಕೆ ಊರವರು ಆಕ್ಷೇಪ ಎತ್ತಿದ್ದು, ತಮ್ಮನ್ನು ಹೊರಗಿಟ್ಟು ಉತ್ಸವ ಮಾಡುವುದಕ್ಕೆ ವಿರೋಧಿಸಿದ್ದಾರೆ.

ಇತ್ತೀಚೆಗೆ ಊರವರು ಸೇರಿಕೊಂಡು ಪ್ರಸನ್ನ ಆಚಾರ್ಯ ನಿಟ್ಟೆ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆ ಇಡಲಾಗಿತ್ತು. ಆದರೆ ವಿಶ್ವನಾಥ ಪೂಜಾರಿ, ಕಿರಣ್ ಕೋಡಿಕಲ್ ಮತ್ತು ಅವರ ಕುಟುಂಬಸ್ಥರು ಬಂದು ತಡೆದಿದ್ದು, ಅಷ್ಟಮಂಗಲ ಹಾಕಿದ ಜಾಗಕ್ಕೆ ಕಾಲಿಟ್ಟು ಪ್ರಶ್ನಾಚಿಂತನೆ ನಡೆಯದಂತೆ ಮಾಡಿದ್ದಾರೆ. ಇದರಿಂದ ನಮಗೆಲ್ಲ ಭಾರೀ ನೋವಾಗಿದ್ದು, ಅಷ್ಟಮಂಗಲ ತಡೆದಿರುವುದರಿಂದ ಇಡೀ ಊರಿಗೆ ದೋಷ ಬರಲಿದೆ ಎಂದು ಪ್ರಸನ್ನ ಆಚಾರ್ಯ ಕೋಪದಿಂದ ಹೇಳಿದ್ದಾರೆ. ಅವರೆಲ್ಲ ಸರಿ ಇದ್ದರೆ ಅಷ್ಟಮಂಗಲ ಇಡುವುದಕ್ಕೆ ಯಾಕೆ ತಡೆಯಬೇಕಿತ್ತು ಎಂದು ಭಂಡಾರ ಮನೆಯ ನವೀನ್ ಕೋಟ್ಯಾನ್ ಮತ್ತು ಗಣೇಶ್ ಪ್ರಸಾದ್ ಪ್ರಶ್ನಿಸಿದ್ದಾರೆ. ಹೇಮಚಂದ್ರ ಭಂಡಾರಮನೆ, ಸೀತಾರಾಮ ಪೂಜಾರಿ, ನೋಣಯ್ಯ ಪೂಜಾರಿ ಮತ್ತಿತರರಿದ್ದರು.