ಬಾಗಲಕೋಟ : ದುಡ್ಡು ಪಡೆದು ಸ್ವಾಮೀಜಿ ಕಾಲಿಗೆ ಬಿದ್ದ ಪೊಲೀಸರು ; ದುಡ್ಡು ಕೊಟ್ಟು ಆಶೀರ್ವಾದ ಮಾಡೋದು ಮಠದ ಪರಂಪರೆ ಎಂದ ಸ್ವಾಮೀಜಿ. ಪೊಲೀಸರಿಗೆ ವರ್ಗಾವಣೆ!!!
ಈ ಬಗ್ಗೆ ಪೊಲೀಸರಿಗೆ ಹಣ ಕೊಟ್ಟು ಆಶೀರ್ವಾದ ಮಾಡಿದ್ದ ಸಿದ್ದನಕೊಳ್ಳ ಶಿವಕುಮಾರ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ. ಪೊಲೀಸರು ದುಡ್ಡು ಪಡೆದು ಕಾಲಿಗೆ ನಮಸ್ಕಾರ ಮಾಡೋದನ್ನು ವೈರಲ್ ಮಾಡಿದಾರೆ. ಅದರಲ್ಲಿ ಯಾವುದೇ ರೀತಿ ಅನ್ಯಥಾ ಭಾವಿಸಬಾರದು. ನಮ್ಮ ಮಠದ್ದು ಮೊದಲಿಂದಲೂ ದುಡ್ಡು ಕೊಟ್ಟು ಆಶೀರ್ವಾದ ಮಾಡುವ ಪರಂಪರೆ ಇದೆ. ನಾವು ದಿವಸದ ದಾಸೋಹಕ್ಕೆ ಎಷ್ಟು ಹಣ ಬೇಕು ಅಷ್ಟು ಇಟ್ಕೊಂಡು ಉಳಿದ ಹಣವನ್ನು ನಾವು ಭಕ್ತರಿಗೆ ಕೊಡುತ್ತೇವೆ. ಇದು ಭಕ್ತರನ್ನು ಬೆಳೆಸುವ ಮಠವಾಗಿದೆ.
ಬಾದಾಮಿಯಲ್ಲಿ ಒಂದು ಕಾರ್ಯಕ್ರಮಕ್ಕೆ ಹೊರಟಾಗ ಆ ಹುಡುಗ ಮೊದಲು ಕಾಲು ಬಿದ್ದವ ಏನಿದಾನೆ ಆತ ಮೊದಲಿಂದಲೂ ಹತ್ತು ವರ್ಷದಿಂದಲೂ ಮಠಕ್ಕೆ ಬರ್ತಾ ಇದ್ದ. ಆತನನ್ನು ನೋಡಿ ನಾನು ಗಾಡಿ ನಿಲ್ಲಿಸಿದೆ. ಅಷ್ಟರಲ್ಲಿ ಅವರೆಲ್ಲಾ ಯಥಾರೀತಿ ಗುರುಗಳು ಅಂತ ನಮಸ್ಕಾರ ಮಾಡಿದ್ರು. ನಾ ದುಡ್ಡು ಕೊಟ್ಡಿದ್ದೇನೆ ಅನ್ಯಥಾ ಭಾವಿಸಬಾರದು. ಇದನ್ನು ದೊಡ್ಡ ಇಶ್ಯು ಮಾಡಿ ವೈರಲ್ ಮಾಡೋದರಲ್ಲಿ ಅರ್ಥವಿಲ್ಲ. ಯಾಕೆಂದರೆ ನಾವು ಅವರಿಗೆ ಲಂಚ ಕೊಟ್ಟಿಲ್ಲ. ಮೊದಲಿಂದಲೂ ಅವರು ನಮ್ಮ ಮಠಕ್ಕೆ ನಡಕೊಂಡು ಬಂದಿದ್ದಾರೆ. ಅವರು ಒಬ್ಬರಿಗೆ ನಾವು ದುಡ್ಡು ಕೊಟ್ಟಿಲ್ಲ. ಈ ರಾಜ್ಯದ ಮುಖ್ಯಮಂತ್ರಿಯಿಂದ ಹಿಡಿದು ಎಲ್ಲರಿಗೂ ದುಡ್ಡು ಕೊಟ್ಟಿದ್ದೇವೆ. ಸಿದ್ದರಾಮಯ್ಯ ಅವರಿಗೂ ದುಡ್ಡು ಕೊಟ್ಟು ಆಶೀರ್ವಾದ ಮಾಡಿದ್ದೇವೆ. ಯಡಿಯೂರಪ್ಪ ಅವರಿಗೂ ದುಡ್ಡು ಕೊಟ್ಟು ಆಶೀರ್ವಾದ ಮಾಡಿದ್ದೇವೆ.
ಅನೇಕ ಜನ ರಾಜಕಾರಣಿಗಳಿಂದ ಹಿಡಿದು ಪೊಲೀಸ್ ಇಲಾಖೆ, ಬಡವರಿಂದ ಹಿಡಿದು ದೊಡ್ಡವರಿಗೂ ಆಶೀರ್ವಾದ ಮಾಡ್ತಾ ಬಂದಿದ್ದೇವೆ. ಆ ಹಣವನ್ನು ಭಕ್ತರು ಮನೆಯಲ್ಲಿಟ್ಟು ಪೂಜೆ ಮಾಡ್ತಾರೆ. ಆ ರೀತಿ ಪರಂಪರೆ ಇದೆ, ಅದರಲ್ಲಿ ಈ ರೀತಿ ವೈರಲ್ ಮಾಡಿ ಪೊಲೀಸ್ ಇಲಾಖೆಗೆ ಕಳಂಕ ತರುವ ಕೆಲಸ ಮಾಡಬಾರದು. ಇದು ನಮ್ಮ ಮನವಿ ಎಂದು ಇಳಕಲ್ ತಾಲ್ಲೂಕಿನ ಸಿದ್ದನಕೊಳ್ಳ ಮಠದ ಶಿವಕುಮಾರ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.
ಕಾಲಿಗೆ ಬಿದ್ದವರಿಗೆ ವರ್ಗಾವಣೆ ಶಿಕ್ಷೆ
ಸ್ವಾಮೀಜಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದ ಪೊಲೀಸರನ್ನು ಬಾಗಲಕೋಟೆ ಎಸ್ಪಿ ಅಮರನಾಥ್ ರೆಡ್ಡಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಖಾಕಿ ಸಮವಸ್ತ್ರದಲ್ಲಿ ಆಶೀರ್ವಾದ ಪಡೆದಿದ್ದ ಆರು ಜನ ಪೊಲೀಸರನ್ನು ಬೇರೆ ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ. ದುಡ್ಡು ಪಡೆದು ಸ್ವಾಮೀಜಿ ಆಶೀರ್ವಾದ ಪಡೆಯುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗಿದ್ದರಿಂದ ಸಾರ್ವಜನಿಕ ವಲಯದಲ್ಲಿ ಕೇವಲ ಇನ್ನೂರು ರೂ.ಗೆ ಈ ರೀತಿ ಕಾಲಿಗೆ ಬೀಳುತ್ತಾರೆಯೇ, ಛೀ ಥೂ ಎಂದು ವಿಷಯದ ಅರಿವಿಲ್ಲದ ಜನರು ಉಗಿದಿದ್ದರು.