ಶಿರಸಿ : ಅಡಿಕೆ ಸುಲಿಯುವ ಯಂತ್ರಕ್ಕೆ ಸೀರೆ ಸಿಲುಕಿ ಶಿರಸಿಯಲ್ಲಿ ಮಹಿಳೆ ಸಾವು ; ಕೆಪಿಸಿಸಿ ಕಾರ್ಯದರ್ಶಿ ಪತ್ನಿಯ ದುರ್ಮರಣ !

ಕಾರವಾರ : ಅಡಿಕೆ ಸುಲಿಯುವ ಕೆಲಸ ನಡೆಯುತ್ತಿದ್ದಾಗ ಯಂತ್ರಕ್ಕೆ ಸೀರೆ ಸಿಲುಕಿ ಮಹಿಳೆಯೊಬ್ಬರು ದಾರುಣ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಜಿಪಂ ಮಾಜಿ ಸದಸ್ಯ ವೆಂಕಟೇಶ ಹೆಗಡೆ ಹೊಸಬಾಳೆ ಅವರ ಪತ್ನಿ ಶೋಭ ಹೊಸಬಾಳೆ ಮೃತ ದುರ್ದೈವಿ. ಮನೆಯಲ್ಲಿ ಅಡಿಕೆ ಸುಲಿಯುವ ಕೆಲಸಕ್ಕೆ ಕೆಲಸದವರನ್ನು ನೇಮಕ ಮಾಡಿಕೊಂಡಿದ್ದರು. ಕೆಲಸ ಹೇಗೆ ನಡೀತಿದೆ ಎಂದು ನೋಡಲು ಹೋದಾಗ, ಮೆಷಿನ್‌ಗೆ ಸೀರೆ ಸಿಲುಕಿದ್ದು ನೆಲಕ್ಕೆ ಬಿದ್ದ ಮಹಿಳೆಯ ತಲೆ ಯಂತ್ರಕ್ಕೆ ಬಡಿದಿದೆ. ಘಟನೆಯಲ್ಲಿ ತೀವ್ರ ರಕ್ತಸ್ರಾವಗೊಂಡು ಮಹಿಳೆ ಮೃತಪಟ್ಟಿದ್ದಾರೆ.
ಕೆಲಸಗಾರರು ಸ್ಥಳದಲ್ಲಿ ಇದ್ದರೂ ಕ್ಷಣಾರ್ಧದಲ್ಲಿ ಘಟನೆ ಸಂಭವಿಸಿದೆ. ಕಳೆದ ಮೂರು ವರ್ಷಗಳಿಂದ ಚಾಲಿ ಅಡಿಕೆ ಸುಲಿಯುವ ವೇಳೆ ಶೋಭಾ ಹೆಗಡೆ ಅವರೇ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ವಿಧಿ ಕೈಕೊಟ್ಟಿದ್ದು, ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶೋಭಾ ಹೆಗಡೆ ತನ್ನ ಪತಿಯ ಪ್ರತಿ ಕಾರ್ಯಕ್ಕೂ ಬೆನ್ನೆಲುಬಾಗಿ ನಿಂತಿದ್ದರು. ದಿಢೀರ್ ಎದುರಾದ ಘಟನೆಯಿಂದ ಪರಿಸರದಲ್ಲಿ ದುಃಖ ಮಡುಗಟ್ಟಿದೆ.