ಮಂಗಳೂರು : ಯಕ್ಷಗಾನ ಮುಗಿಸಿ ಬೈಕಿನಲ್ಲಿ ಬರುತ್ತಿದ್ದಾಗ ಅಪಘಾತ ; ಮಂಗಳಾದೇವಿ ಮೇಳದ ಭಾಗವತ ಸತೀಶ್ ಆಚಾರ್ಯ ಮೃತ್ಯು.!!

ಬೆಳ್ತಂಗಡಿ : ಯಕ್ಷಗಾನ ಮುಗಿಸಿ ಬೈಕಿನಲ್ಲಿ ತನ್ನ ಮನೆಗೆ ತೆರಳುತ್ತಿದ್ದ ಮಂಗಳಾದೇವಿ ಮೇಳದ ಭಾಗವತ ಸತೀಶ್ ಆಚಾರ್ಯ (40) ಅಪಘಾತಕ್ಕೀಡಾಗಿ ಸಾವನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಅಂಡಿಂಜೆಯ ಕಿಲಾರ ತಿರುವಿನಲ್ಲಿ ನಡೆದಿದೆ.
ಅಂಡಿಂಜೆ ಗ್ರಾಮದ ಪಿಲಿಯೂರು ನಿವಾಸಿ, ಮಂಗಳೂರಿನ ಮಂಗಳಾದೇವಿ ಯಕ್ಷಗಾನ ಮೇಳದ ಭಾಗವತ ಸತೀಶ್ ಆಚಾರ್ಯ ಅಂಡಿಂಜೆ (40) ನಿನ್ನೆ ರಾತ್ರಿ ಸುಳ್ಯದಲ್ಲಿ ಯಕ್ಷಗಾನ ಕಾರ್ಯಕ್ರಮ ಮುಗಿಸಿ ಮುಂಜಾನೆ 4 ಗಂಟೆಗೆ ತಮ್ಮ ಬೈಕ್‌ನಲ್ಲಿ ಮನೆಯತ್ತ ಬರುತ್ತಿದ್ದರು. ಇವರ ಬೈಕ್ ಇನ್ನೇನು ಮನೆ ತಲುಪಲು ಕೆಲವೇ ಕಿಮೀ ಇದ್ದಾಗ ಅಂಡಿಂಜೆ ಕಿಲಾರ ಮಾರಿಗುಡಿ ದೇವಸ್ಥಾನ ಸಮೀಪದ ತಿರುವಿನಲ್ಲಿ ಅಪಘಾತಕ್ಕೀಡಾಗಿದೆ.
ಎದುರಿನಿಂದ ಬರುತ್ತಿದ್ದ ಬೈಕ್ ಹಾಗೂ ಸತೀಶ್ ಆಚಾರ್ಯ ಬರುತ್ತಿದ್ದ ಬೈಕ್ ಪರಸ್ಪರ ಡಿಕ್ಕಿ ಹೊಡೆದು ದುರ್ಘಟನೆ ನಡೆದಿದೆ. ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎದುರಿನಿಂದ ಬರುತ್ತಿದ್ದ ಬೈಕ್‌ನಲ್ಲಿದ್ದವರಿಗೂ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ವೇಣೂರು ಪೋಲಿಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.