ಮಂಗಳೂರು: ದೇಶದಲ್ಲಿ 90 %. ಗೇರು ಬೀಜ ಆಮದು, ರೈತರು ಗೇರು ಬೆಳೆಸಿದರೆ ಉಜ್ವಲ ಭವಿಷ್ಯ ; ಉಳ್ಳಾಲದಲ್ಲಿ ಗೇರು ಮೇಳ ಮತ್ತು ವಿಚಾರ ಸಂಕಿರಣ ಉದ್ಘಾಟಿಸಿ ಸ್ಪೀಕರ್ ಖಾದರ್ut khadar casew feast innuaguration

ಉಳ್ಳಾಲ : ಹಿತ್ತಲ ಗಿಡದ ಮದ್ದನ್ನ ಬಿಟ್ಟು ಪ್ರಕೃತಿಯಿಂದ ಬಹಳ ದೂರವಾಗಿ ಆಧುನಿಕ ಆಹಾರ, ಔಷಧಿಗಳಿಗೆ ಒಗ್ಗಿಕೊಂಡಿರುವುದರಿಂದ ನಮ್ಮಲ್ಲಿ ಇಂದು ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗಲು ಶುರುವಾಗಿವೆ. ನಾವು ಪ್ರಕೃತಿಗೆ ಹತ್ತಿರವಾದಷ್ಟು ಆರೋಗ್ಯವಂತರಾಗಿರಲು ಸಾಧ್ಯ. ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಯುವಕರು ಹಾಗೂ ವಿದ್ಯಾರ್ಥಿಗಳನ್ನು ಪ್ರಕೃತಿಯ ಕಡೆಗೆ ಕೇಂದ್ರೀಕರಿಸಲು ಗೇರು ಮೇಳ ಮತ್ತು ವಿಚಾರ ಸಂಕಿರಣಗಳು ಸಹಕಾರಿಯಾಗಲಿದೆ ಎಂದು ಕರ್ನಾಟಕ ವಿದಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಶಿವಮೊಗ್ಗ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಉಳ್ಳಾಲ ಗೇರು ಮತ್ತು ಕೊಕೋ ಅಭಿವೃದ್ಧಿ ನಿರ್ದೇಶನಾಲಯ, ಕೊಚ್ಚಿನ್ ಹಾಗೂ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಬ್ರಹ್ಮಾವರ ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ, ಜಿಲ್ಲಾ ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ, ಜಿಲ್ಲಾ ಕೃಷಿಕ ಸಮಾಜ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ತೊಕ್ಕೊಟ್ಟು ಕಾಪಿಕಾಡುವಿನ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದಲ್ಲಿ ನಡೆದ "ಗೇರು ಮೇಳ ಮತ್ತು ವಿಚಾರ ಸಂಕಿರಣ-2025" ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.





ಅನೇಕ ತಳಿಯ ಗೇರು ಬೀಜಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಉಳ್ಳಾಲದ ಗೇರು ತಳಿಗೆ ವಿಶೇಷ ಸ್ಥಾನವಿದೆ. ದೇಶದಲ್ಲಿ ಗೇರು ಸಂಬಂಧಿತ ಅನೇಕ ಕಾರ್ಖಾನೆಗಳಿದ್ದು, ನಮ್ಮ ದೇಶದಲ್ಲಿ ತಯಾರಾಗುವ ಗೇರು ಬೀಜ ಶೇಕಡ 10% ಮಾತ್ರ. 90% ದಷ್ಟು ಗೇರು ಬೀಜಗಳು ಹೊರ ದೇಶಗಳಿಂದ ಆಮದು ಆಗುತ್ತಿದೆ. ಹಾಗಾಗಿ ಗೇರು ತಳಿಗೆ ಉಜ್ವಲ ಭವಿಷ್ಯವಿದ್ದು, ಯುವಕರು ಮತ್ತು ರೈತರು ಮುಂದೆ ಬಂದು ಗೇರು ಕೃಷಿಯಂತಹ ಇಳುವರಿ ತರುವ ಬೆಳೆಗಳನ್ನು ಬೆಳೆಸಬೇಕಿದೆ ಎಂದರು.
ಕರ್ನಾಟಕ ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಡಿ.ಎಸ್ ಗಟ್ಟಿ ಮಾತನಾಡಿ ರೈತರು ಮೂಲ ಕೃಷಿಯೊಂದಿಗೆ ಎರಡನೇ ಬೆಳೆಯಾಗಿ ಅಡಿಕೆಯನ್ನ ಮಾತ್ರ ನೆಚ್ಚಿಕೊಂಡಿದ್ದಾರೆ. ಆದರೆ ಗೇರು ಬೆಳೆಯು ಬರಡು ಭೂಮಿಯಲ್ಲಿ ಹೆಚ್ಚಿನ ಖರ್ಚಿಲ್ಲದೆ ರೈತನಲ್ಲಿ ಆರ್ಥಿಕ ಸುಧಾರಣೆ ತರುವ ಕೃಷಿಯಾಗಿದೆ. ಕಿತ್ತಲೆ ಹಣ್ಣಿಗಿಂತಲೂ ಹೆಚ್ಚಿನ ವಿಟಮಿನ್ "ಸಿ" ಗೇರು ಹಣ್ಣಿನಲ್ಲಿ ಸಮೃದ್ಧವಾಗಿದೆ. ಇಂದಿನ ಮಕ್ಕಳು ಅಂತಹ ಗೇರು ಹಣ್ಣನ್ನ ಎಸೆದು ಬೀಜವನ್ನ ಮಾತ್ರ ಸೇವಿಸುತ್ತಿದ್ದಾರೆ. ಉತ್ತಮ ಆರೋಗ್ಯದ ದೃಷ್ಟಿಯಿಂದ ಸಾವಯವ ಕೃಷಿಗೆ ಹೆಚ್ಚಿನ ಮಹತ್ವವನ್ನು ನೀಡಬೇಕು. ಗೇರು ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ನಿಗಮದ ಸಹಭಾಗಿತ್ವದಲ್ಲಿ ಉಳ್ಳಾಲ ಭಾಗದಲ್ಲೇ ರಾಜ್ಯ ಮಟ್ಟದ ಗೇರು ಮೇಳ ಮತ್ತು ಮಾಹಿತಿ ಕಾರ್ಯಾಗಾರವನ್ನ ಸ್ಪೀಕರ್ ಖಾದರ್ ಅವರ ಸಹಕಾರದಿಂದ ಹಮ್ಮಿಕೊಳ್ಳಲಾಗುವುದೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಿವಮೊಗ್ಗ ಇರುವಕ್ಕಿಯ ಕೃಷಿ ವಿವಿಯ ಕುಲಪತಿ ಡಾ.ಆರ್.ಸಿ ಜಗದೀಶ ಮಾತನಾಡಿ ಗೇರನ್ನು ನಾವು ಎಷ್ಟು ಉತ್ಪಾದನೆ ಮಾಡುತ್ತಿದ್ದೇವೆಯೋ ಅಷ್ಟೇ ಬೇರೆ ದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಮೊದಲು ನಾವು ಗೇರನ್ನ ಬಹಳ ಪ್ರಮಾಣದಲ್ಲಿ ರಪ್ತು ಮಾಡುತ್ತಿದ್ದೆವು. ನಮ್ಮ ದೇಶದಲ್ಲಿ ಮೊದಲು ಶೇಂಗಾವನ್ನು ತಿನ್ನುವವರು ಹೆಚ್ಚಿದ್ದರು. ಆದರೆ ಈಗ ಪೌಷ್ಟಿಕಾಂಶದ ದೃಷ್ಟಿಯಿಂದ ಗೇರನ್ನು ತಿನ್ನುವವರ ಸಂಖ್ಯೆ ಹೆಚ್ಚಾಗಿದೆ. ಗೇರನ್ನು ಎಷ್ಟು ಬೆಳೆದರೂ ಅದಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಪ್ರತೀ ವರ್ಷ 8 ಲಕ್ಷ ಗೇರು ಹಾಗೂ 14 ಲಕ್ಷ ಮೆಣಸು ಸಸಿಗಳನ್ನ ಬೆಳೆದು ವಿವಿ ಮೂಲಕ ರೈತರಿಗೆ ವಿತರಿಸಲಾಗುತ್ತಿದೆ. ಬಿದ್ದ ಗೇರು ಹಣ್ಣಿನಿಂದ ರಸವನ್ನು ತೆಗೆದು ತಾಜಾ ಜ್ಯೂಸ್ ಮಾಡಲಾಗುತ್ತದೆ. ಸಣ್ಣ ಗೇರಿನಿಂದ ಉಪ್ಪಿನಕಾಯಿ, ಹಣ್ಣಿನಿಂದ ಜೆಲ್ಲಿ, ಜಾಮ್, ಕೆಚಪ್ ಗಳನ್ನ ತಯಾರಿಸಬಹುದಾಗಿದೆ ಎಂದರು.
ಪ್ರಗತಿಪರ ಕೃಷಿಕರಾದ ಮೂಡಬಿದ್ರೆ ಇರುವೈಲಿನ ಶಂಕರ ಶೆಟ್ಟಿ, ಮುಲ್ಕಿ ಕಿಲ್ಪಾಡಿಯ ಮೊಹಮ್ಮದ್ ಆಲಿ ಇಸ್ಮಾಯಿಲ್, ಬಂಟ್ವಾಳ ಮೂಡಂಬೈಲಿನ ನಾರಾಯಣ ನಾಯ್ಕ್, ಸೋಮೇಶ್ವರ ಪಿಲಾರು ಮೇಗಿನಮನೆಯ ಸೀತಾರಾಮ ಶೆಟ್ಟಿ, ಸುಳ್ಯ ಐರ್ವಾನಾಡಿನ ನಮಿತಾ ಪಿ.ವಿ, ಬಂಟ್ವಾಳ ಪುಣಚ ಗ್ರಾಮದ ಚಂದ್ರಾವತಿ
ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.