ಉಡುಪಿ :ಹನುಮನ ಮೂರ್ತಿಯನ್ನೇರಿದ ಕೋತಿರಾಜ್;ಮೂರ್ತಿಯ ಮೇಲಿದ್ದ ಗಿಡಗಂಟಿಗಳನ್ನು ತೆಗೆಯಲು 85 ಅಡಿ ಎತ್ತರದ ವಿಗ್ರಹ ಏರಿದ ಜ್ಯೋತಿರಾಜ್...!!
ಉಡುಪಿ : ಇಲ್ಲಿನ ಕುಂದಾಪುರದ ಕೋಟೇಶ್ವರದಲ್ಲಿರುವ ಅಪರೂಪದ 85 ಅಡಿ ಎತ್ತರದ ಹನುಮನ ವಿಗ್ರಹವನ್ನು ಏರುವ ಮೂಲಕ ಕೋತಿರಾಜ್ ಎಂದೇ ಪ್ರಖ್ಯಾತರಾಗಿರುವ ಜ್ಯೋತಿರಾಜ್ ಹೊಸ ಸಾಹಸ ಮೆರೆದಿದ್ದಾರೆ.
ಕುಂದಾಪುರದ ಹನುಮಾನ್ ವಿಗ್ರಹ ಉಡುಪಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ವಿಭಿನ್ನ ಸಾಹಸದ ಮೂಲಕ ಜನಪ್ರಿಯರಾದ ಕೋತಿರಾಜ್ ತನ್ನ ಇಷ್ಟದೇವರಾದ 85 ಅಡಿ ಎತ್ತರದ ಹನುಮಂತನ ವಿಗ್ರಹದ ತುತ್ತ ತುದಿಗೆ ಏರಿ ಎಲ್ಲರನ್ನು ಚಕಿತರನ್ನಾಗಿ ಮಾಡಿದ್ದಾರೆ. ಈಗಾಗಲೇ ಬಹಳಷ್ಟು ಕಡೆ ಎತ್ತರದ ಕಟ್ಟಡಗಳನ್ನು ಏರುವ ಮೂಲಕ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಹಿಂದೆಯೂ ಕೂಡ ಉಡುಪಿಯ ಅನೇಕ ಬಹು ಮಹಡಿ ಕಟ್ಟಡಗಳನ್ನು ಇವರು ಏರಿ ಸಾಹಸ ಮೆರೆದಿದ್ದಾರೆ.
ಜೋಗದಲ್ಲಿ ಬೆಟ್ಟ ಏರುವ ಸಂದರ್ಭ ಘಾಸಿಗೊಂಡ ಬಳಿಕ ಕೋತಿರಾಜ್ ಸ್ವಲ್ಪ ಸಮಯ ವಿಶ್ರಾಂತಿಯಲ್ಲಿದ್ದರು. ಇದೀಗ ಚೇತರಿಸಿಕೊಂಡ ಕೋತಿರಾಜ್ ಮತ್ತೆ ಅಪಾಯಕಾರಿ ಸಾಹಸಗಳಿಗೆ ಕೈ ಹಾಕಿದ್ದಾರೆ. 85 ಅಡಿ ಎತ್ತರದ ಈ ಹನುಮಾನ್ ವಿಗ್ರಹ ಬಯಲಲ್ಲಿ ನಿಂತು ಜನರನ್ನು ಹರಸುವ ಭಂಗಿಯಲ್ಲಿದೆ. ಈ ವಿಗ್ರಹದ ವಿವಿಧ ಭಾಗಗಳಲ್ಲಿ ಗಿಡ ಗಂಟೆಗಳು ಬೆಳೆದಿದ್ದು ಅದನ್ನು ಸ್ವಚ್ಛಗೊಳಿಸುವುದು ಹೇಗೆಂಬುದು ಸ್ಥಳೀಯರ ಸಮಸ್ಯೆಯಾಗಿತ್ತು. ಇದೀಗ ಜ್ಯೋತಿರಾಜ್ ಸೇವೆಯ ರೂಪದಲ್ಲಿ ಹನುಮನ ಮೇಲೆ ಇರುವ ಗಿಡಗಂಟೆಗಳನ್ನು ಸ್ವಚ್ಛಗೊಳಿಸಿದ್ದಾರೆ.
ಭಾರತದ ಕಟ್ಟಡಗಳನ್ನು ಏರಿದ ನಂತರ ವಿದೇಶಗಳಲ್ಲಿ ಬೃಹತ್ ಕಟ್ಟಡಗಳನ್ನು ಏರುವ ಆಸೆ ಇದೆ. ಸ್ವಂತ ವಾಹನ ಇದ್ದರೆ ಮತ್ತಷ್ಟು ಕ್ರಿಯಾಶೀಲವಾಗಿ ತಾನು ರಾಜ್ಯಾದ್ಯಂತ ಓಡಾಡಬಹುದು. ದುಬೈ, ಚೀನಾ ಮುಂತಾದ ದೇಶದ ಬೃಹತ್ ಕಟ್ಟಡಗಳನ್ನು ಏರುವ ಆಸೆ ಇತ್ತು. ಆದರೆ, ಅಲ್ಲಿ ಕಟ್ಟಡ ಏರಲು ಬಿಡಲಿಲ್ಲ. ಭಾರತದ ಕಟ್ಟಡಗಳನ್ನು ಏರಿದ ನಂತರ ವಿದೇಶಗಳಲ್ಲಿ ಅವಕಾಶ ಸಿಗುವ ವಿಶ್ವಾಸ ಇದೆ'' ಎಂದು ಜ್ಯೋತಿರಾಜ್ ಅಲಿಯಾಸ್ ಕೋತಿರಾಜ್ ಹೇಳಿದರು.