ಪಾಕಿಸ್ತಾನ: 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರೈಲು ಹೈಜಾಕ್ ; ನೂರಾರು ಪೊಲೀಸರು, ಸೇನಾ ಸಿಬ್ಬಂದಿ ಉಗ್ರರ ವಶದಲ್ಲಿ, ಪಾಕ್ ಸೇನೆಯಿಂದ ಪ್ರತಿದಾಳಿ, 30 ಉಗ್ರರ ಸಾವು.

ಕರಾಚಿ : ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರೈಲನ್ನು ಬಲೂಚ್ ಬಂಡುಕೋರ ಉಗ್ರರು ಅಪಹರಿಸಿದ್ದಾರೆ. ಸೋಮವಾರ ಸಂಜೆ ಪಾಕಿಸ್ತಾನ ರೈಲನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದು ಪ್ರಯಾಣಿಕರು ಮತ್ತು ಭದ್ರತಾ ಸಿಬ್ಬಂದಿಯನ್ನು ವಶಕ್ಕೆ ಪಡೆದಿದ್ದಾರೆ. ಕೊನೆಗೆ, ಪ್ರಯಾಣಿಕರನ್ನು ಬಿಟ್ಟು ಕಳಿಸಿದ್ದಾರೆ ಎನ್ನಲಾಗುತ್ತಿದ್ದು 214 ಭದ್ರತಾ ಸಿಬಂದಿಯನ್ನು ವಶದಲ್ಲಿ ಇರಿಸಿಕೊಂಡಿದ್ದಾರೆ.
ಬಲೂಚಿಸ್ತಾನದ ಕ್ವೆಟ್ಟಾದಿಂದ ಖೈಬರ್ ಪಖ್ತುಂಖ್ವಾದ ಪೇಶಾವರಕ್ಕೆ ಪ್ರಯಾಣಿಸುತ್ತಿದ್ದ ರೈಲಿನ ಮೇಲೆ ಸೋಮವಾರ ಸಂಜೆ ಉಗ್ರರು ದಾಳಿಗೈದು ರೈಲನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಪ್ರತ್ಯೇಕತಾವಾದಿ ಗುಂಪು ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಜಾಫರ್ ಎಕ್ಸ್‌ಪ್ರೆಸ್ ರೈಲು ಸುರಂಗ ಮಾರ್ಗದಲ್ಲಿ ತೆರಳುತ್ತಿದ್ದಾಗ ಹಳಿಯನ್ನು ತಪ್ಪಿಸಿ ರೈಲನ್ನು ನಿಲ್ಲಿಸಲಾಗಿದ್ದು ರೈಲು ಚಾಲಕ ಮತ್ತು ಸಿಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ರೈಲಿನ ಲೋಕೊಮೊಟಿವ್ ಪೈಲಟ್ ಸಾವಿಗೀಡಾಗಿದ್ದಾರೆ. ಹಲವು ಸಿಬಂದಿ, ಪ್ರಯಾಣಿಕರು ಗಾಯಗೊಂಡಿದ್ದಾರೆ.


![]()
![]()
ನಿನ್ನೆ ರಾತ್ರಿ ವೇಳೆ ಪಾಕಿಸ್ತಾನದ ಮಿಲಿಟರಿ ಪಡೆ ಉಗ್ರರ ಮೇಲೆ ಪ್ರತಿದಾಳಿ ನಡೆಸಿದ್ದು 30ಕ್ಕು ಹೆಚ್ಚು ಉಗ್ರರನ್ನು ಕೊಂದು ಹಾಕಿದೆ. ಈ ವೇಳೆ, ಪರ್ವತಗಳ ಎಡೆಯಲ್ಲಿ ಉಗ್ರರು ಅವಿತುಕೊಂಡಿದ್ದು ಪ್ರಯಾಣಿಕರನ್ನು ಮತ್ತು ಭದ್ರತಾ ಸಿಬಂದಿಯನ್ನು ಅಲ್ಲಿಯೇ ವಶದಲ್ಲಿ ಇರಿಸಿದ್ದಾರೆ ಎನ್ನಲಾಗುತ್ತಿದೆ. 150ರಷ್ಟು ಒತ್ತೆಯಾಳುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಪಾಕ್ ಸೇನೆ ಹೇಳುತ್ತಿದ್ದು ಖಚಿತ ಮಾಹಿತಿ ಲಭ್ಯವಾಗಿಲ್ಲ ಎಂದು ಎನ್ ಡಿಟಿವಿ ವರದಿ ಮಾಡಿದೆ.
ಪಾಕ್ ಸೇನಾಪಡೆ ಯೋಧರು, ಪೊಲೀಸ್ ಸಿಬಂದಿ, ಭಯೋತ್ಪಾದನಾ ನಿಗ್ರಹ ಪಡೆ ಅಧಿಕಾರಿಗಳನ್ನು ಉಗ್ರರು ವಶದಲ್ಲಿ ಇರಿಸಿದ್ದಾರೆ ಎನ್ನುವ ಮಾಹಿತಿಯಿದೆ. ಪಾಕ್ ಸೇನಾಪಡೆ ಪ್ರತಿದಾಳಿ ನಡೆಸಿದಲ್ಲಿ ಪರಿಣಾಮ ಕೆಟ್ಟದಾಗಲಿದೆ. ನಮ್ಮ ವಿರುದ್ಧ ದಾಳಿ ನಡೆಸಿದರೆ ಎಲ್ಲ ಒತ್ತೆಯಾಳುಗಳನ್ನು ಕೊಲ್ಲುತ್ತೇವೆ ಎಂದು ಉಗ್ರರು ಎಚ್ಚರಿಕೆ ನೀಡಿದ್ದಾರೆ.